ಸಸಿ ನೆಡುವ ಕಾರ್ಯಕ್ರಮ
ದೊಡ್ಡಬಳ್ಳಾಪುರ: ಇಲ್ಲಿನ ಲಾವಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ ಆಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾ ಸಂಸ್ಥೆಯ ನಿರ್ದೇಶಕಿ ಯಶೋದಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಪರಿಸರ ಉಳಿದರೆ ಮನುಷ್ಯನ ಉಳಿವು. ಪರಿಸರ ಸಂರಕ್ಷಣೆ ಇಂದಿನ ಅನಿವಾರ್ಯ. ಈ ನಿಟ್ಟಿನಲ್ಲಿ ನಮ್ಮ ಸುತ್ತಲ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮತ್ತು ಗಿಡಮರಗಳನ್ನು ಬೆಳೆಸುವ ಹೊಣೆಗಾರಿಕೆ ಎಲ್ಲ ಜನರ ಮೇಲಿದೆ. ವಿದ್ಯಾರ್ಥಿಗಳು ಬಹುಮುಖ್ಯವಾಗಿ ಪರಿಸರದ ಕುರಿತು ಎಚ್ಚರಿಕೆ ವಹಿಸಬೇಕು. ಭವಿಷ್ಯದ ದೇಶ ನಿರ್ಮಾಣ ಸ್ವಚ್ಛಂದ ಪರಿಸರದ ಮೇಲೆ ನಿಂತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬಿ.ಜೆ. ಹಿತೈಷಿಗೆ ಐಡಿಯಾಸ್ ಪ್ರಶಸ್ತಿ
ದೊಡ್ಡಬಳ್ಳಾಪುರ: ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ದೊಡ್ಡಬಳ್ಳಾಪುರದ ವಿದ್ಯಾರ್ಥಿ ಬಿ.ಜೆ. ಹಿತೈಷಿ ತನ್ನ ಸಹಪಾಠಿಗಳೊಂದಿಗೆ ಸಾದರಪಡಿಸಿದ ವೈಜ್ಞಾನಿಕ ಪ್ರಬಂಧಕ್ಕೆ ಐಡಿಯಾಸ್-13 ಪ್ರಶಸ್ತಿ ಪಡೆದಿದ್ದಾನೆ. ಬೆಳಗಾವಿಯ ಗೋಗಟೆ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ರಬಂಧ ಮಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿರುವ ಬಿ.ಜೆ. ಹಿತೈಷಿ, ದೀಪ್ತಿ ದೇವಯ್ಯ ಮತ್ತು ಪಲ್ಲವಿ ಭಟ್ ಸೆಮಾನಂಟಿಕ್ ಅಪ್ರೋಚ್ ಟು ಐಡೆಂಟಿಫೈ ಟಾಪಿಕ್ ಫ್ರಮ್ ಪ್ರಾಡಕ್ಟ್ ರಿವ್ಯೂಸ್ ಎಂಬ ಪ್ರಬಂಧ ಮಂಡಿಸಿದ್ದರು. ಕಂಪ್ಯೂಟರ್ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ. ಅನಿಲ್ಕುಮಾರ್ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
ಪ್ರಗತಿಗೆ ಯುವಶಕ್ತಿಬದ್ಧವಾಗಲಿ: ಎಸ್ವಿಜಿ
ಕನಕಪುರ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಉಜ್ವಲವಾಗಿದ್ದು, ಅದಮ್ಯ ಶಕ್ತಿ ಉತ್ಸಾಹಗಳ ಯುವ ಮಾನವ ಸಂಪನ್ಮೂಲ ದೇಶದ ಭವಿಷ್ಯತ್ತಿನ ಬೆನ್ನೆಲುಬಾಗಿದೆ ಎಂದು ಶಿಕ್ಷಣತಜ್ಞ ಎಸ್.ವಿ.ಗೋವಿಂದರಾಜು ಹೇಳಿದ್ದಾರೆ. ಕನಕಪುರ ತಾಲೂಕು ಕೋಡಿಹಳ್ಳಿಯ ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ತೋಟಗಾರಿಕೆ ಸಹಾಯಕ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಸಮುದಾಯ ಸೇವಾ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಡಾ.ಕುಬೇರನಾಯ್ಕ, ಪ್ರೊ.ನೂರ್ಫಾತಿಮಾ, ಪ್ರೊ. ರಮ್ಯಾ,ಪ್ರೊ. ಮರ್ಸಿ, ಪ್ರೊ. ಅನಿಲ್ ಪಾಲ್ಗೊಂಡಿದ್ದರು. ಶಿಬಿರಾಧಿಕಾರಿ ಪ್ರೊ. ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಇಂದು ರಾಜ್ಯೋತ್ಸವ; ಸಿಸಿರಾ ಸೇರಿ ಐವರಿಗೆ ಸನ್ಮಾನ
ಚನ್ನಪಟ್ಟಣ: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಶತಮಾನೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶನಿವಾರ ಸಂಜೆ ನಾಲ್ಕು ಗಂಟೆಗೆ ಶಾಖಾ ಕಚೇರಿಯ ಆವರಣದಲ್ಲಿ ಹಮ್ಮಿ ಕೊಂಡಿರುವುದಾಗಿ ಬ್ಯಾಂಕ್ ವ್ಯಸ್ಥಾಪಕ ಸುನಿಲ್.ವಿ ತಿಳಿಸಿದ್ದಾರೆ. ಅಧ್ಯಕ್ಷತೆಯನ್ನು ಬ್ಯಾಂಕ್ ಉಪ ಪ್ರಧಾನ ಪ್ರಬಂಧಕಾರರಾದ ವಿಜಯಲಕ್ಷ್ಮಿ ವಹಿಸಲಿದ್ದು, ಜಿಲ್ಲಾ ವಿಶೇಷ ಭೂಸ್ವಾದೀನಾಧಿಕಾರಿ ಜಯಮಾಧವ್, ತಹಸೀಲ್ದಾರ್ ಈ. ಶಿವರುದ್ರಯ್ಯ, ಎಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್, ಪಿಟಿಎಸ್ ಪ್ರಾಂಶುಪಾಲ ಪಿ.ಸಿ.ನಾಗರಾಜು, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ, ಚಕ್ಕೆರೆ ಶಿವಶಂಕರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಮಾಜಿ ಅಧ್ಯಕ್ಷ ಸಿಸಿರಾ, ಎಲೇಕೇರಿ ಶಿವರಾಂ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕುರುಬ ಯುವಸೇನೆ ಉದ್ಘಾಟನೆ ನಾಳೆ
ಚನ್ನಪಟ್ಟಣ: ಕುರುಬರ ಯುವಸೇನೆ ಮತ್ತು ಮತ್ತೀಕೆರೆ ಶೆಟ್ಟಿಹಳ್ಳಿ ಶಾಖೆ ಉದ್ಘಾಟನಾ ಕಾರ್ಯಕ್ರಮವನ್ನು ಹೊಸೂರುದೊಡ್ಡಿ ಗ್ರಾಮದ ಬೀರೇಶ್ವರ ದೇವಾಲಯದ ಬಳಿ ಡಿ.15ರಂದು ಹಮ್ಮಿಕೊಳ್ಳಲಾಗಿದೆ. ಸಂಘದ ರಾಜ್ಯಾಧ್ಯಕ್ಷ ಮದನ್ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಎಸ್ಎಸ್ಎನ್ ಅಧ್ಯಕ್ಷ ಮೆಹರೀಶ್, ರೈತಮುಖಂಡ ರಾಜಮುಡಿ, ಗ್ರಾ.ಪಂ ಮಾಜಿ ಅಧ್ಯಕ್ಷ ವಿಜೇಂದ್ರ, ತಾಪಂ ಮಾಜಿ ಸದಸ್ಯ ಎಸ್.ಆರ್.ಪ್ರಮೋದ್ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಲಾರಿ ಡಿಕ್ಕಿ: ವೃದ್ಧೆ ಸಾವು
ನೆಲಮಂಗಲ: ವಾಯು ವಿಹಾರ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ ವೃದ್ಧೆಯೊಬ್ಬರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ಆಕೆ ಸ್ಥಳದಲ್ಲೇ ಮೃಪಟ್ಟಿರುವ ಘಟನೆ ಬಿನ್ನಮಂಗಲ ಗ್ರಾಮ ಬಳಿ ಶುಕ್ರವಾರ ನಡೆದಿದೆ. ವೃತರನ್ನು ಬಿನ್ನಮಂಗಲ ವಾಸಿ ಗೌರಮ್ಮ(65) ಎಂದು ಗುರುತಿಸಲಾಗಿದೆ. ಲಾರಿಯು ಬೆಂಗಳೂರು ಕಡೆಯಿಂದ ನೆಲಮಂಗಲ ಪಟ್ಟಣಕ್ಕೆ ಬರುತ್ತಿದ್ದಾಗ ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗದಲ್ಲಿ ಬರುತ್ತಿದ್ದ ಈಕೆಯ ಮೇಲೆ ಲಾರಿ ಹರಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಚ್ಐವಿ ಬಗ್ಗೆ
ಜಾಗೃತಿ ಅಗತ್ಯ
ಸೂಲಿಬೆಲೆ: ಮನುಕುಲದ ಸರ್ವನಾಶಕ್ಕೆ ಕಾರಣವಾಗಿರುವ ಏ್ಘಜಟಜ ಯಿಲೆ ಬಗ್ಗೆ ಯುವ ಸಮೂಹ ಜಾಗೃತಿಗೊಳ್ಳುವುದು ಅವಶ್ಯವಾಗಿದೆ ಎಂದು ಆವಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಲ್ತ್
ಇನ್ಸ್ಪೆಕ್ಟರ್ ಶಿವಣ್ಣ ಹೇಳಿದ್ದಾರೆ.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್ ಸಂಯುಕ್ತವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಂದ್ರಶೇಖರ್, ಹಿರಿಯ ಉಪನ್ಯಾಸಕ ಕೆ.ಹೆಚ್. ಹನುಮಂತರಾಯಪ್ಪ, ನಾಗರಾಜ್, ಉಪನ್ಯಾಸಕಿ ಮಂಜುಳಾ ಮತ್ತಿತರರು ಮಾತನಾಡಿ, ಸಮಾಜದ ಅಧಃಪತನಕ್ಕೆ ಕಾರಣವಾಗುವ ಹೆಚ್ಐವಿ ಬಗ್ಗೆ ವಿದ್ಯಾರ್ಥಿಗಳು ಜಾಗೃತಿಗೊಳ್ಳುವುದು ಅತಿ ಅವಶ್ಯ. ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸಬೇಕಾದ ಜವಾಬ್ದಾರಿಯಿದೆ ಎಂದರು.ಇದಕ್ಕೂ ಮುನ್ನ ಪಟ್ಟಣದ ನಾನಾ ಕಡೆ ವಿದ್ಯಾರ್ಥಿಗಳಿಂದ ಎಚ್ಐವಿ ಬಗ್ಗೆ ಜಾಗೃತಿ ಜಾಥಾ ನಡೆಸಲಾಯಿತು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಜಯರಾಮಯ್ಯ, ಪರಿಸರ ಪ್ರೇಮಿ ನಾಗೇಶ್, ಆರೋಗ್ಯ ಇಲಾಖೆಯ ಅಂಬಿಕಾ, ಸರ್ವ ಮಂಗಳ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಯುವತಿ ನಾಪತ್ತೆ
ರಾಮನಗರ: ಪುರ ಪೋಲಿಸ್ ಠಾಣಾ ವ್ಯಾಪ್ತಿಯ ಸಾದತ್ ಅಲಿಖಾನ್ ಅವರ ಪುತ್ರಿ 18 ವರ್ಷದ ಅಸ್ಮಾಖಾನಂ ನ.19ರಿಂದ ಕಾಣೆಯಾಗಿದ್ದಾಳೆ. ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪುರ ಠಾಣೆ ಪಿಎಸ್ಐ ಕೋರಿದ್ದಾರೆ.
ಸಾರಿಗೆ ಪ್ರಾಧಿಕಾರ ಸಭೆ
ರಾಮನಗರ: ಡಿ.17ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಲಿದೆ. ಸಾರ್ವಜನಿಕರು, ಲಾರಿ ಮಾಲೀಕರ ಸಂಘದ ಸದಸ್ಯರು, ಖಾಸಗಿ ಬಸ್ ಮಾಲೀಕರ ಸಂಘದ ಸದಸ್ಯರು, ಆಟೋ ರಿಕ್ಷಾ ಮಾಲೀಕರು ಹಾಗೂ ಚಾಲಕರ ಸಂಘದ ಸದಸ್ಯರೂ ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳ ಸದಸ್ಯರು ಸಭೆಯಲ್ಲಿ ಭಾಗವಹಿಸಬೇಕು ಎಂದು ಸಾರಿಗೆ ಅಧಿಕಾರಿ ಕೋರಿದ್ದಾರೆ.
ಒಎಂಆರ್ ಅರ್ಜಿ ಸಲ್ಲಿಕೆಗೆ ಸೂಚನೆ
ರಾಮನಗರ: 2013-14ನೇ ಸಾಲಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳ ಒಎಂಆರ್ ಅರ್ಜಿಯನ್ನು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ಜಿಲ್ಲಾ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಡಿ.20ರೊಳಗೆ ಸದರಿ ಕಚೇರಿಗೆ ಸಲ್ಲಿಸುವಂತೆ ಕೋರಲಾಗಿದೆ.
ಸಬ್ಸಿಡಿ ನೀಡಿಕೆ ಯೋಜನೆ ಪ್ರಕಟ
ಕನಕಪುರ:ಕರ್ನಾಟಕ ರಾಜ್ಯ ಕೃಷಿ ಇಲಾಖೆ ವತಿಯಿಂದ 2013-14ನೇ ಸಾಲಿನಲ್ಲಿ ಕೃಷಿ ಉಪಕರಣಗಳನ್ನು ಖರೀದಿಸಲು ಸಹಾಯಧನ ನೀಡಿಕೆ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ಸಬ್ಸಿಡಿ ನೀಡಿಕೆ ಯೋಜನೆಯನ್ನು ಪ್ರಕಟಿಸಲಾಗಿದೆ. ಕನಕಪುರ ತಾಲೂಕು ವ್ಯಾಪ್ತಿಯ ರೈತರು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಕೃಷಿ ಯಂತ್ರೋಪಕರಣಗಳಾದ ಪವರ್ ಟಿಲ್ಲರ್, ಕಲ್ಟಿವೇಟರ್, ಡಕ್ಫುಟ್ವೋ, ಮಲ್ಟಿಪರೋಪನರ್, ರೋಟೋವೇಟರ್, ಎಂ.ಬಿ.ಫ್ಲೋ, ಯಂತ್ರಚಾಲಿತ ಸಸ್ಯಸಂರಕ್ಷಣಾ ಉಪಕರಣಗಳು, ಡೀಸೆಲ್ ಪಂಪ್ಸೆಟ್, ಸಂಸ್ಕರಣ ಘಟಕಗಳಾದ ರಾಗಿ ಕ್ಲೀನಿಂಗ್ ಮಿಷೀನ್ ಶೇ.35ರಿಂದ ಶೇ.75 ಸಹಾಯಧನದ ಮೂಲಕ ವಿತರಿಸಲಾಗುವುದು ಎಂದು ಸಹಾಯಕ ಕೃಷಿನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹನುಮ ಜಯಂತಿ
ಚನ್ನಪಟ್ಟಣ: ಪಟ್ಟಣದ ಕೋದಂಡರಾಮ ಬಡಾವಣೆಯ ಹನುಮಾನ್ ಭಕ್ತ ಮಂಡಲಿ ವತಿಯಿಂದ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ವಿಶೇಷ ಪೂಜಾ ಕೈಕಂಕರ್ಯ ಆರಂಭಿಸಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಭಕ್ತಮಂಡಲಿ ಮನವಿ ಮಾಡಿದೆ.