ಆಂಜನೇಯಸ್ವಾಮಿ ಸಂಭ್ರಮ ರಥೋತ್ಸವ
ದೊಡ್ಡಬಳ್ಳಾಪುರ: ತಾಲೂಕಿನ ಸುಪ್ರಸಿದ್ಧ ಹನುಮ ದೇವರ ಕ್ಷೇತ್ರ ಎನಿಸಿರುವ ರಾಜಘಟ್ಟದಲ್ಲಿ ಶ್ರೀಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಶ್ರೀಸ್ವಾಮಿಯ ರಥಕ್ಕೆ ಹಣ್ಣು-ಧವನ ಅರ್ಪಿಸುವ ಮೂಲಕ ಭಕ್ತಿಭಾವ ಮೆರೆದರು. ಅದೇ ರೀತಿ ಚಿಕ್ಕಬಳ್ಳಾಪುರ, ಗೌರಿಬಿದನೂರು, ದೇವನಗಳ್ಳಿ, ಬೆಂಗಳೂರು ಸೇರಿದಂತೆ ಹಲವೆಡೆಗಳಿಂದ ನೂರಾರು ಭಕ್ತಾದಿಗಳು ಹನುಮ ಜಯಂತಿ ಅಂಗವಾಗಿ ನಡೆಯುವ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ ಶ್ರೀರಾಮತಾರಕ ಹೋಮ, ಪೂರ್ಣಾಹುತಿ, ಪಂಚಾಮೃತ ಅಭಿಷೇಕ ನಡೆದವು. ರಥೋತ್ಸವದ ನಂತರ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರಧಾನ ಅರ್ಚಕ ಚನ್ನಕೇಶವಾಚಾರ್ಯ ಮತ್ತಿತರರು ನೇತೃತ್ವ ವಹಿಸಿದ್ದರು. ಶ್ರೀಸ್ವಾಮಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ದೊಡ್ಡಬಳ್ಳಾಪುರ ಮತ್ತು ರಾಜಘಟ್ಟದ ಶ್ರೀ ಆಂಜನೇಯಸ್ವಾಮಿ ಅಮಾವಾಸ್ಯೆ ಭಕ್ತ ವೃಂದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು.