ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ

Vishwanath S
Updated On : 15 Dec 2013, 1:30 am

ಮಾಗಡಿ: ಪಟ್ಟಣದ ಶ್ರೀಗುರುರಾಜ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಮಾಗಡಿಯಿಂದ ಶ್ರೀ ಕ್ಷೇತ್ರ  ಮಂತ್ರಾಲಯಕ್ಕೆ 2ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಡಿ.23 ರಂದು ಬೆಳಿಗ್ಗೆ 5.30ಕ್ಕೆ ಇಲ್ಲಿನ ಗುರುರಾಜ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ  ಪಾದಯಾತ್ರೆ ಆರಂಭಿಸಲಾಗುವುದು. ಮಾಗಡಿಯಿಂದ ಸೋಲೂರು, ಶಿವಗಂಗೆ, ದಬಾಸ್ ಪೇಟೆ, ಊರ್ಡಿಗೆರೆ, ಕೊರಟಗೆರೆ, ಮಧುಗಿರಿ,ಪಾವಗಡ, ಕಂಬದೂರು, ಕಲ್ಯಾಣದುರ್ಗ, ಭೈಲುಗುಪ್ಪೆ, ನಿಂಬಗಲ್ಲು, ಉರ್ವಕೊಂಡ, ಕನ್ನೂರು, ಗುಂತುಕಲ್ಲು, ಆಲೂರು, ಆದೋನಿ, ಎಮ್ಮಿಗನೂರು ಮೂಲಕ ಶ್ರೀ ಕ್ಷೇತ್ರದ ಮಂತ್ರಾಲಯದಲ್ಲಿನ ಗುರುರಾಜರ ದರ್ಶನ ಪಡೆಯಲಾಗುವುದು ಎಂದು ಯೋಗ ರಮೇಶ್ ತಿಳಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 9449631361, ಉಮೇಶ್  ಮೊ. 9845442525 ಸಂಪರ್ಕಿಸುವಂತೆ ಕೋರಲಾಗಿದೆ.

 ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ: ಬಚ್ಚೇಗೌಡ
ಹೊಸಕೋಟೆ: ತಾಲೂಕಿನ ಚಿಕ್ಕಹುಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ನಿರ್ಮಿಸಿರುವ ಕೊಠಡಿಗಳನ್ನು ಗ್ರಾಮ ಪಂಚಾಯತಿ ಸದಸ್ಯ ಎಚ್.ಜೆ.ಬಚ್ಚೇಗೌಡ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ 18 ಲಕ್ಷ ರು.ಗಳ ವೆಚ್ಚದಲ್ಲಿ 2 ಕೊಠಡಿ, ಕಾಂಪೌಂಡ್ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರ ಮನವೊಲಿಸುವ ಸಲುವಾಗಿ ಇಂತಹ ವ್ಯವಸ್ಥೆ ಅತ್ಯವಶ್ಯವಾಗಿದೆ. ಸರಕಾರದ ವತಿಯಿಂದ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕಾಂಶ ಸುಧಾರಣೆಗೆ ಹಾಲು ಸಹ ನೀಡಲಾಗುತ್ತಿದೆ. ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ಮನವಿ ಮಾಡಿದರು. ಶಾಲೆಗೆ ಅಗತ್ಯಕ್ಕನುಗುಣವಾಗಿ ಹೆಚ್ಚಿನ ಸವಲತ್ತು ಒದಗಿಸಲು ಗ್ರಾಮ ಪಂಚಾಯಿತಿ ವತಿಯಿಂದ ಸೂಕ್ತ ಅನುದಾನ ಬಿಡುಗಡೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಸೈಯದ್ ಬಾಬು, ಆಂಜಿನಪ್ಪ, ಸದಸ್ಯರು, ಸತೀಶ್, ನಾಗರಾಜ್, ಚಂದ್ರಶೇಖರ್, ನಾರಾಯಣ ಸ್ವಾಮಿ, ಜೆ.ಆಂಜಿನಪ್ಪ, ಸಿ.ವೆಂಕಟೇಶ್, ಅಮೀರ್ ಜಾನ್, ಗೀತಾ ಹಾಜರಿದ್ದರು.

ಪ್ರತಿಭೆಗಳ ಅನಾವರಣಕ್ಕೆ ಕಾರಂಜಿ ಸಹಕಾರಿ: ಶಾಸಕ
ಸೂಲಿಬೆಲೆ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದ್ದು,ಇಂಥ ವೇದಿಕೆಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ತಮ್ಮಲ್ಲಿರುವ ಕಲೆಯನ್ನು ಅಭಿವ್ಯಕ್ತಗೊಳಿಸಬೇಕು ಎಂದು ಶಾಸಕ ಎನ್. ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. ಸೂಲಿಬೆಲೆ ಹೋಬಳಿ ಬೇಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಬರೀ ಓದು ಅಷ್ಟೇ ಅಲ್ಲದೇ ಪಠ್ಯತರ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಲು  ಅಗತ್ಯವಾಗಿರುವ ಕಾರಂಜಿಯಂಥ ವೇದಿಕೆಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶನ ಮಾಡಲು ಪೋಷಕರು ಸಹಕಾರವೂ ಅಗತ್ಯವಾಗಿದೆ. ಕ್ಲಸ್ಟರ್ ಮಟ್ಟ ಮಾತ್ರವಲ್ಲದೇ ರಾಜ್ಯ ಮಟ್ಟಕ್ಕೂ ತಮ್ಮ ಪ್ರತಿಭೆಯನ್ನು ತೋರುವಂತ ಜ್ಞಾನಾಭಿವೃದ್ಧಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಬೆಳೆಯಲಿ ಎಂದು ಹೇಳಿದರು. ಕಲ್ಲಪ್ಪ, ಮುನಿಶಾಮಣ್ಣ, ಬೈಲಾಂಜಿನಪ್ಪ, ಯರೇಗೌಡ, ನಾಗರಾಜ್, ಬೇಗೂರು ಕೆಂಪಣ್ಣ ಹಾಜರಿದ್ದರು.

ಟಿವಿ ಪೆಡಂಭೂತವಿದ್ದಂತೆ: ಭೂಹಳ್ಳಿ ಪುಟ್ಟಸ್ವಾಮಿ
ರಾಮನಗರ: ದೂರದರ್ಶನದ ಪೆಟ್ಟಿಗೆ ಪೆಡಂಭೂತ ಇದ್ದಂತೆ. ಇದು ಮಕ್ಕಳಲ್ಲಿ ಆಲೋಚನೆಮಾಡುವ ಅವಕಾಶ ಕಸಿದುಕೊಂಡಿದೆ. ಗೃಹಿಣಿಯರ ನಿದ್ದೆಗೆಡಿಸಿದೆ. ವೃದ್ಧರ ವಿಶ್ರಾಂತಿಯನ್ನು ಕಿತ್ತುಕೊಂಡಿದೆ. ಜನಪದ ಕಲೆಗಳನ್ನು ಅಳಿಸಿಹಾಕುತ್ತಿದೆ ಎಂದು ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ಟಿವಿಯ ಅನಾಹುತಗಳನ್ನು ಅನಾವರಣ ಮಾಡಿದರು. ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಬಾಲಿಕಾ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಅಂತರ ಶಾಲಾ ಮಟ್ಟದ ಜನಪದ ಗೀತೆಗಳ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಟಿವಿ ನೋಡುವುದು ದೈಹಿಕ ದೌರ್ಬಲ್ಯವಾಗಿ ಮಾತ್ರ ಉಳಿದಿಲ್ಲ. ಅದು ಮಾನಸಿಕ ವೇದನೆಗೆ ಗುರಿಪಡಿಸುತ್ತಿದೆ ಎಂದು ಎಚ್ಚರಿಸಿದರು.  ಜನಪದ ಗೀತೆಗಳು ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ, ನಮ್ಮ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುವ, ಸಂಗೀತ, ಸಾಹಿತ್ಯವನ್ನು ಸಂಯೋಜಿಸ ಬೇಕು ಎಂದರು.

ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳ
ಮಾಗಡಿ: ತಾಲೂಕಿನಲ್ಲಿ ರಾಷ್ಟ್ರೀಯ ಭಾವೈಕ್ಯತೆ ತಾಲೂಕು ಮಟ್ಟದ ಮಕ್ಕಳ ಮೇಳವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು ಎಂದು ರಾಜ್ಯ ಸ್ಕೌಟ್ ಮತ್ತು ಗೈಡ್ಸ್ ಸೇವಾ ದಳದ ಸಂಘಟನಾ ಕಾರ್ಯದರ್ಶಿ ಕಲ್ಪನಾ ಶಿವಣ್ಣ ತಿಳಿಸಿದರು. ಅವರು ಇಲ್ಲಿನ ಜಿಜಿಎಂಎಸ್ ಶಾಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ತಾಲೂಕು ಮಟ್ಟದ ಮೇಳ ಆಚರಿಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ  ಭಾವೈಕ್ಯತೆಯ ಮೇಳವನ್ನು ಶಿಸ್ತುಬದ್ಧವಾಗಿ ಆಚರಿಸಲು ಶಿಕ್ಷಕರಿಗೆ ಅಗತ್ಯ ತರಬೇತಿ ಮುಖ್ಯ ಎಂದರು.  ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ದಳದ  ತಾಲೂಕು ಅಧ್ಯಕ್ಷ ಎಚ್. ಶಿವಕುಮಾರ್  ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತೆಯ ಮೇಲೆ ಸಕಲ ಸಿದ್ಧತೆಯೊಂದಿಗೆ ಯಶಸ್ವಿಗೊಳಿಸಲು ಹೆಚ್ಚು ತರಬೇತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಳಿಗ್ಗೆ 9 ರಿಂದ 6 ಗಂಟೆಯವರೆವಿಗೂ ಕಾರ್ಯಕ್ರಮವನ್ನು ರೂಪಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.  ಶಿವರಾಮಯ್ಯ, ಪರಮೇಶ್ವರ್ ಹಾಜರಿದ್ದರು.

ಒಕ್ಕಲಿಗರ ಸಂಘಕ್ಕೆ ಡಾ.ನಾರಾಯಣ್ ನಾಮಪತ್ರ
ದೊಡ್ಡಬಳ್ಳಾಪುರ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಇಲ್ಲಿನ ಯುವ ಮುಖಂಡ, ಅರಿವು ಫೌಂಡೇಷನ್ ಸಂಸ್ಥಾಪಕ ಡಾ.ನಾರಾಯಣ್ ನಾಮಪತ್ರ ಸಲ್ಲಿಸಿದರು.  ಬೆಂಗಳೂರಿನ ಒಕ್ಕಲಿಗರ ಸಂಘದ ಚುನಾವಣಾ ಕಚೇರಿಯಲ್ಲಿ ಅವರು ಪ್ರೊ.ಕೆ.ಮಲ್ಲಯ್ಯ ಸಿಂಡಿಕೇಟ್‌ನ ಬಹುತೇಕ ಸದಸ್ಯರೊಂದಿಗೆ  ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ರಾಜ್ಯ ಒಕ್ಕಲಿಗರ ಸಂಘದಲ್ಲಿ ಬದಲಾವಣೆಯ ಹೊಸಪರ್ವ ಆರಂಭವಾಗಬೇಕಿದೆ. ಪ್ರಜ್ಞಾವಂತರು ಮತ್ತು ಸಾಮಾಜಿಕ ಕಳಕಳಿಯುಳ್ಳ ಜನ ಸಂಘವನ್ನು ಬಲಿಷ್ಠವಾಗಿ ಕಟ್ಟಬೇಕಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ರತ್ನಕಾಳೇಗೌಡ, ಕಾಂಗ್ರೆಸ್ ಮುಖಂಡ ತಿ.ರಂಗರಾಜು, ಜೆಡಿಎಸ್ ನಗರ ಸಭಾಸದಸ್ಯ ಶಿವಕುಮಾರ್, ಚನ್ನಪಟ್ಟಣದ ಡಾ.ಮಲ್ಲವೇಗೌಡ, ಮರಿಮಲ್ಲಯ್ಯ, ಮಾರೇಗೌಡ ಸೇರಿದಂತೆ ಬೆಂಗಳೂರು ಗ್ರಾಮಾಂತರದ ಹಲವು ತಾಲೂಕುಗಳು, ಬೆಂಗಳೂರು ನಗರದ ಅನೇಕ ಬೆಂಬಲಿಗರು ಉಪಸ್ಥಿತರಿದ್ದರು.

'ರಾಷ್ಟ್ರೀಯ-ಸಹಕಾರಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆಯಿರಿ'
ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಮತ್ತು ಸಂಸದೆ ರಮ್ಯಾ ಅವರು ಕೂಡಲೇ ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ ಅಧಿಕಾರಿಗಳ ಸಭೆಯನ್ನು ಕರೆಯಬೇಕು ಎಂದು ರೈತ ಸಂಘದ ಯುವ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕುಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ, ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರು, ಮಹಿಳೆಯರು, ವಿದ್ಯಾರ್ಥಿಗಳು, ಅಂಗವಿಕಲರಿಗೆ ಸರ್ಕಾರದಿಂದ ನೀಡುತ್ತಿರುವ ಸಬ್ಸಿಡಿ ಸಾಲ ಸೌಲಭ್ಯಗಳ ಕುರಿತು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.  ರೈತರಿಗೆ ಕಬ್ಬು, ಬತ್ತ, ರಾಗಿ, ರೇಷ್ಮೆ ಬೆಳೆ ಬೆಳೆದಿರುವ ಕುರಿತು ಎಕರೆ ವಾರು ಸಾಲ ನೀಡಬೇಕು. ಕಳೆದ ಸಾಲಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ  ಬೆಳೆ ಒಣಗಿ ರೈತರು ನಷ್ಟ ಅನುಭವಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ಮಂಡ್ಯ: ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 1.43 ಕೋಟಿ ರು. ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಬಿ. ಸಿದ್ದರಾಜು ಗುದ್ದಲಿ ಪೂಜೆ ನೆರವೇರಿಸಿದರು.ನಗರಸಭೆ ವ್ಯಾಪ್ತಿಯ 31, 32 ಹಾಗೂ 33ನೇ ವಾರ್ಡ್‌ನಲ್ಲಿ ಒಟ್ಟು 18 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 3,500 ಮೀ. ಉದ್ದದ ರಸ್ತೆಯನ್ನು ಡಾಂಬರೀಕರಣ ಹಾಗೂ 1,400 ಮೀ. ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಿದ್ದರಾಜು ತಿಳಿಸಿದರು. ಗುತ್ತಿಗೆದಾರರು ಕಾಣಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಮಾಜಿ ಶಾಸಕ ಎಂ. ಶ್ರಿನಿವಾಸ್, ನಗರಸಭೆ ಸದಸ್ಯರಾದ ಪುಷ್ಪಾವತಿ, ಸುಮಿತ್ರಾ ಮತ್ತಿತರರು ಇದ್ದರು.

ಅಧಿಕಾರಿಗಳಿಗಾಗಿ ಕಾರ್ಯಾಗಾರ
ರಾಮನಗರದಲ್ಲಿ ಅಧಿಕಾರಿಗಳಿಗಾಗಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಮತ್ತು ಸಂಪನ್ಮೂಲ ವ್ಯಕ್ತಿಗಳು ವ್ಯಾಯಾಮ ಹೇಳಿಕೊಟ್ಟರು.

ನಾಳೆ ರಾಮನಗರದಲ್ಲಿ ಎಚ್‌ಡಿಕೆ ಹುಟ್ಟುಹಬ್ಬ
ರಾಮನಗರ: ಈ ಜಿಲ್ಲೆಯ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆ ಈ ಬಾರಿಯೂ ನಗರದಲ್ಲಿ ಡಿ.16ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಹೇಳಿದರು.  ಕುಮಾರಸ್ವಾಮಿ ಅವರು ಈ ಬಾರಿ ರಾಜ್ಯದ ವಿವಿಧ ದೇವಾಲಯಗಳಿಗೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದರು. ಕಡೆಗೆ, ಜಿಲ್ಲೆಯ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಮನಗರದಲ್ಲೇ ಆಚರಣೆಗೆ ಸಮ್ಮತಿಸಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಹುಟ್ಟುಹಬ್ಬ ಪ್ರಯಕ್ತ ಡಿ.16ರಂದು ಬೆಳಗ್ಗೆ ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಗುವುದು. ಕುಮಾರಸ್ವಾಮಿ ಸಂಜೆ 4ಕ್ಕೆ ನಗರಕ್ಕೆ ಆಗಮಿಸಲಿದ್ದು, ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ನೆರವೇರಿಸಿದ ನಂತರ ಚರ್ಚ್, ಮಸೀದಿಯಲ್ಲೂ ಪ್ರಾರ್ಥನೆ ಸಲ್ಲಿಸುವರು ಎಂದರು.   

ಡಿಸಿ ನೇತೃತ್ವದಲ್ಲಿ ಕಾರ್ಯಾಗಾರ
ರಾಮನಗರ: ಜಡ್ಡುಗಟ್ಟಿರುವ ರಾಮನಗರ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿ, ಆಮೂಲಾಗ್ರ ಬದಲಾವಣೆಗೆ ಪಣ ತೊಟ್ಟಿರುವ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಅಧೀನ ಅಧಿಕಾರಿಗಳಿಗೆ ಒತ್ತಡ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಮೌಲ್ಯಗಳನ್ನು ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಿದ್ದರು.  ಖುದ್ದು ಆಸಕ್ತಿ ವಹಿಸಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿದ ಡಾ.ವಿಶ್ವನಾಥ್, ಇಡೀ ದಿನ ಅಧಿಕಾರಿಗಳೊಟ್ಟಿಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಈ ವೇಳೆ ಅವರು ವೃತ್ತಿ ನೈಪುಣ್ಯತೆ, ಒತ್ತಡ ನಿಭಾವಣೆ, ಜನಸ್ಪಂದನೆ, ಕಾನೂನು ಪಾಲನೆ ಕುರಿತು ಹಿತೋಪದೇಶದ ಜತೆಗೆ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.  ಜನಸಂಪರ್ಕದಲ್ಲಿರುವ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಒತ್ತಡ ಅನುಭವಿಸುತ್ತಾರೆ. ಇಂಥವರಿಗೆ ಒಂದಿಷ್ಟು ಒತ್ತಡ ನಿವಾರಣೆ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡರೆ ಹೆಚ್ಚಿನ ರೀತಿಯಲ್ಲಿ ಜನಸೇವೆ ಮಾಡಲು ಅನುಕೂಲವಾಗುತ್ತದೆ ಎಂದರು.

ಒಡೆಯರ್‌ಗೆ ಶ್ರದ್ಧಾಂಜಲಿ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ದಸಂಸ ಕಾರ್ಯಕರ್ತರು  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

ಎ.ಡಿ.ಪೈ. ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ ತರಬೇತಿ
ರಾಮನಗರ: ತಾಲೂಕಿನ ಬಿಡದಿಯ ವಾಜರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಎ.ಡಿ.ಪೈ. ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೆನರಾ ಬ್ಯಾಂಕಿನ 25 ಮಂದಿ ವ್ಯವಹಾರ ಪ್ರತಿನಿಧಿಗಳಿಗೆ ಒಂದು ವಾರದ ವಿಶೇಷ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.  ಭಾರತೀಯ ರಿಸರ್ವ್ ಬ್ಯಾಂಕಿನ ಆರ್ಥಿಕ ಸಾಕ್ಷರತೆ ಹಾಗೂ ಆರ್ಥಿಕ ಸೇರ್ಪಡೆಯ ಕಾರ್ಯಕ್ರಮಮದನ್ವಯ ಕೆನರಾ ಬ್ಯಾಂಕಿನಿಂದ ಆಯ್ಕೆ ಮಾಡಲ್ಪಟ್ಟ ಸುಮಾರು 25 ಮಂದಿ ವ್ಯವಹಾರ ಕುರಿತು ಈ ತರಬೇತಿ ನಡೆಯಿತು. ಬ್ಯಾಂಕಿಂಗ್ ಪರಿವೆಯೇ ಇಲ್ಲದ ಜನರಿಗೆ ಅರಿವು ಮೂಡಿಸುವ ಕೆಲಸದಲ್ಲಿ ತೊಡಗುವಂತೆ ತರಬೇತಿ ಹೊಂದಿದ ಪ್ರತಿನಿಧಿಗಳಿಗೆ ಕೆನರಾ ಬ್ಯಾಂಕಿನ ಉಪ ಮಹಾ ಪ್ರಬಂಧಕ ಸುನೀಲ್ ಕುರ್ತಕೋಟಿ ಕಿವಿಮಾತು ಹೇಳಿದರು.  ಬ್ಯಾಂಕ್ ಖಾತೆ ತೆರೆಸುವ ಮೂಲಕ ದೇಶದ ಕಟ್ಟಕಡೆಯ ನಾಗರಿಕರನ್ನು ಕೂಡಿಕೊಂಡು ಸಮೃದ್ಧ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಜವಾಬ್ದಾರಿ ನಿಭಾಯಿಸಬೇಕು ಎಂದು ತಿಳಿಸಿದೆ.

ಅನವಾಳುನಲ್ಲಿ ಚಿರತೆ; ಆತಂಕದಲ್ಲಿ ಗ್ರಾಮಸ್ಥರು
ಪಾಂಡವಪುರ: ತಾಲೂಕಿನ ಅನವಾಳು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮನೆಯೊಂದರ ಮುಂದೆ ಕಟ್ಟಿದ್ದ ಕರುವನ್ನು ತಿಂದು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.
ಕಳೆದ ಮಂಗಳವಾರ, ಬುಧವಾರ ರಾತ್ರಿ ಗ್ರಾಮಕ್ಕೆ ನುಗ್ಗಿರುವ ಚಿರತೆ ಆಹಾರಕ್ಕಾಗಿ ಮನೆ ಮುಂಭಾಗ ಕಟ್ಟಿದ್ದ ಕರುವನ್ನು ಅರ್ಧ ಭಾಗ ಸೇವಿಸಿ, ಬೆಟ್ಟದ ತಪ್ಪಲಿಗೆ ತೆರಳಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಅನುವಾಳು ಗ್ರಾಮಸ್ಥರು ಪಟ್ಟಣದ ಅರಣ್ಯ ವಲಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಗುಣಮಟ್ಟದ ಪೌಷ್ಟಿಕ ಆಹಾರ ವಿತರಣೆ ಮಾಡಿ
ಮಾಗಡಿ: ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕಾಂಶ ಆಹಾರ ತೀರ ಕಳಪೆಯಿಂದ ಕೂಡಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕಳಪೆ ಆಹಾರವನ್ನು ಪರಿಶೀಲಿಸಿ, ಗುಣಮಟ್ಟದ ಪೌಷ್ಟಿಕ ಆಹಾರ ವಿತರಣೆ ಮಾಡುವಂತೆ ತಾ.ಪಂ. ಅಧ್ಯಕ್ಷ ಜಿ. ಕೃಷ್ಣ ತಾಕೀತು ಮಾಡಿದರು. ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲು ಕಲ್ಯಾ ಬಾಗಿಲು ಬಳಿ ಆಹಾರ ತಯಾರಿಕಾ ಕೇಂದ್ರ ಘಟಕಕ್ಕೆ ತಾ.ಪಂ. ಅಧ್ಯಕ್ಷ ಜಿ.ಕೃಷ್ಣ ಭೇಟಿ ನೀಡಿ ಆಹಾರ ತಯಾರಿಕೆ ಕುರಿತು ಖದ್ದು ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.  ಪೌಷ್ಟಿಕ ಆಹಾರ ತಯಾರಿಕೆ ಹೆಸರಿನಲ್ಲಿ ಇಲ್ಲಿನ ಆಹಾರ ತಯಾರಿಕಾ ಘಟಕ ಕಲಬೆರಕೆ ಆಹಾರ ಪದಾರ್ಥಗಳನ್ನು ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಆಹಾರ ಪದಾರ್ಥಗಳಾದ ಹೆಸರುಕಾಳು, ಕಡಲೆಬೀಜ, ಕಡಲೆಕಾಳು, ಹೆಸರುಬೇಳೆ, ಗೋದಿ ಇತರೆ ಪದಾರ್ಥಗಳನ್ನು ಸರಿಯಾಗಿ ಒಣಗಿಸದೆ ಹಸಿಯಾಗಿರುವ ಕಾಳನ್ನು ಪ್ಯಾಕ್  ಮಾಡುತ್ತಿದೆ ಎಂದು ತಿಳಿಸಿದರು.

ದಲಿತ್ ಪ್ಯಾಂಥರ್ ಕಾರ್ಯಕ್ರಮ
ಚನ್ನಪಟ್ಟಣದಲ್ಲಿ ನಡೆದ ದಲಿತ್ ಪ್ಯಾಂಥರ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ವಿ.ಚಂದ್ರಶೇಖರ್, ಹಾಪ್ಸ್‌ಕಾಮ್ಸ್ ಮಾಜಿ ನಿರ್ದೇಶಕ ಅಕ್ಕೂರು ಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೊತ್ತನೂರು ಎಂ.ಮುನಿಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

ರಾಗಿ ಒಕ್ಕಣೆಗೆ ರಸ್ತೆ ಕಣ; ಪ್ರಯಾಣಿಕರಿಗೆ ಕಿರಿಕಿರಿ
ಚನ್ನಪಟ್ಟಣ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ರಾಗಿ ಒಕ್ಕಣೆಗೆ ರಸ್ತೆಯನ್ನೇ ಕಣವನ್ನಾಗಿ ಪರಿವರ್ತಿಸಿ ಕೊಂಡಿದ್ದು ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಎದುರಾಗಿದೆ.  ಬಹುಪಾಲು ಮಂದಿ ಕೆರೆ ಏರಿ,ತಿರುವುಗಳ ಬಳಿಯೇ ರಾಗಿ ಹುಲ್ಲುಗಳನ್ನು ಹಾಕುತ್ತಿದ್ದು ಇದರಿಂದಾಗಿ ದ್ವಿಚಕ್ರವಾಹನ ಸವಾರರು ಜಾರಿ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆ ಸಾಕಷ್ಟಿದ್ದು ಪ್ರಯಾಣಿಕರ ಗೋಳು ಹೇಳತೀರದಾಗಿದೆ. ನೀರಿನ ಕೊರತೆಯಿಂದಾಗಿ ಕಣ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರಸ್ತೆಯಲ್ಲೇ ಒಕ್ಕಣೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ರಸ್ತೆಯೇ ಕಣವಾಗಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಮಾತ್ರ ಇನ್ನಿಲ್ಲದ ಕಿರಿಕಿರಿ ಎದುರಿಸುವಂತಾಗಿದೆ. ರಾಗಿ ಒಕ್ಕಣೆಯ ಸಮಯದಲ್ಲಿ ತೂರುವ ಹೊಟ್ಟು ಪ್ರಯಾಣಿಕರ ಕಣ್ಣಿಗೆ ತುಂಬಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ ಎಂದರು.

ಚನ್ನಪಟ್ಟಣ ತಾಲೂಕಾದ್ಯಂತ ಹನುಮ ಜಯಂತಿ
ಚನ್ನಪಟ್ಟಣ: ತಾಲೂಕಿನಾದ್ಯಂತ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ತಾಲೂಕಿನ ವಿವಿಧ ಹನುಮಾನ್ ದೇವಾಲಯದಲ್ಲಿ ವಿಶೇಷಪೂಜೆ, ಅನ್ನಸಂತರ್ಪಣೆ, ಪ್ರಸಛಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.  ಹನುಮಾನ್ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತಾದಿಗಳು, ಭಾವ ಪುನೀತರಾದರು. ಹನುಮಜಯಂತಿ ಅಂಗವಾಗಿ ಕೆಲ ದೇವಾಲಯಗಳಲ್ಲಿ ಹೋಮಹವನಗಳು ನಡೆದವು. ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಬೆಳಿಗೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಬೆಣ್ಣೆಯಿಂದ ಅಲಂಕೃತನಾದ ಹನುಮಂತನ ದರ್ಶನ ಪಡೆದರು. ದೇವರಹೊಸಹಳ್ಳಿಯ ಸಂಜೀವರಾಯ ಸ್ವಾಮಿ ದೇವಾಲಯದಲ್ಲಿ ಸಹ ಹನುಮಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹನುಮಜಯಂತಿ ಪ್ರಯುಕ್ತ ವಿಶೇಷ ಅಲಂಕಾರ, ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಅವರು ಹೇಳಿದ್ದು
ಕೆಲವರು ನನ್ನನ್ನು ಅಹಿಂದ ಪರವಾದ ಮುಖ್ಯಮಂತ್ರಿ ಎನ್ನುತ್ತಾರೆ. ನಾನು ಅಹಿಂದ, ಸಾಮಾಜಿಕ ನ್ಯಾಯದ ಪರ ಮತ್ತು ಎಲ್ಲ ಜಾತಿಯ ಬಡವರ ಪರವೂ ಹೌದು. ಅವಕಾಶ ವಂಚಿತರಿಗೆ ಅವಕಾಶ ಒದಗಿಸುವುದು ಸರ್ಕಾರದ ಉದ್ದೇಶ.
- ಸಿದ್ದರಾಮಯ್ಯ,
ಮುಖ್ಯಮಂತ್ರಿ
ಒಳಮರ್ಮ
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಕೇವಲ ಅಹಿಂದ ಜಪ ಮಾಡಿದರೆ ವ್ಯತಿರಿಕ್ತ ಪರಿಣಾಮ ಬೀರೀತು ಎಂಬಭಯ ಎದುರಾದಂತಿದೆ!

ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
@VishweshwarBhat


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement