ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿ
ದೊಡ್ಡಬಳ್ಳಾಪುರ: ವಿವಿಧ ತೈಲ ಕಂಪನಿಗಳ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಜನಸ್ನೇಹಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ತಾಲೂಕಿನ ಚಿಕ್ಕತುಮಕೂರು ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮತ್ತು ಎಂಜಿನಯರ್ಸ್ ಇಂಡಿಯಾ ಲಿಮಿಟೆಡ್ ನೇತೃತ್ವದಲ್ಲಿ ನಡೆದ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿ ಗ್ರಾ.ಪಂಚಾಯಿತಿಯ ಚಿಕ್ಕತುಮಕೂರು, ತಿಪ್ಪಾಪುರ, ವಿವೇಕಾನಂದ ನಗರ, ಜಿಂಕೆಬಚ್ಚಹಳ್ಳಿ, ಮಜರಾಹೊಸಹಳ್ಳಿ ಮತ್ತು ಹೊಸಹುಡ್ಯ, ಬಾಶೆಟ್ಟಿಹಳ್ಳಿ ಪಂಚಾಯಿತಿಯ ಜವಾಹರ ನವೋದಯ ವಿದ್ಯಾಲಯ ಮತ್ತು ಹುಲಿಕುಂಟೆ ಪಂಚಾಯಿತಿಯ ಹುಲಿಕುಂಟೆ ಗ್ರಾಮಗಳಲ್ಲಿ 1.28 ಕೋಟಿ ವೆಚ್ಚದಲ್ಲಿ ಇಐಎಲ್ ಕಂಪನಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಬರುವ ಫೆಬ್ರವರಿ ವೇಳೆಗೆ ಜನರಿಗೆ ಕುಡಿಯುವ ಶುದ್ಧ ನೀರು ಲಭ್ಯವಾಗಲಿದೆ ಎಂದರು.
ಕೈಗಾರಿಕೆಗಳ ಹೆಚ್ಚಳದಿಂದಾಗಿ ಮಾಲಿನ್ಯ ಪ್ರಮಾಣವೂ ಹೆಚ್ಚಿದೆ. ಪರಿಣಾಮವಾಗಿ ಇಲ್ಲಿ ಲಭ್ಯವಾಗುತ್ತಿರುವ ನೀರು ತೀವ್ರ ಲವಣಾಂಶಗಳಿಂದ ಕೂಡಿದ್ದು, ಕುಡಿಯಲು ಅನರ್ಹವಾಗಿದೆ. ಈ ನಿಟ್ಟಿನಲ್ಲಿ ಜನರ ಮನವಿಗೆ ಸ್ಪಂದಿಸಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಹಂತ ಹಂತವಾಗಿ ಇತರ ಪಂಚಾಯಿತಿಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದರು.
ಎತ್ತಿನಹೊಳೆ ವಿಘ್ನ ದೂರ: ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ನೀರೊದಗಿಸುವ ಎತ್ತಿನಹೊಳೆ ಯೋಜನೆಗೆ ಇದ್ದ ವಿಘ್ನಗಳು ದೂರಾಗಿವೆ. ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯೋಜನೆ ಶಂಕುಸ್ಥಾಪನೆ ನಿರ್ಧಾರ ಕೈಗೊಳ್ಳಲಾಗಿದೆ. ಬರುವ ತಿಂಗಳು ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಮುದ್ದೇನಹಳ್ಳಿಯಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.
ತೈಲ ಕಂಪನಿಗಳ ಸಹಭಾಗಿತ್ವದಲ್ಲಿ ಸಮುದಾಯ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ. ಆಧುನಿಕ ತಂತ್ರಜ್‌ಞಾನ ಬಳಕೆಯಲ್ಲೂ ದೇಶ ಮುಂದಿದ್ದು, ಬರುವ 2030ರ ವೇಳೆಗೆ ಭಾರತ ಆರ್ಥಿಕ ಸ್ವಾವಲಂಬನೆ ಸಾಧಿಸಲಿದೆ. ಆ ಮೂಲಕ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿದ್ದರು. ಇಐಎಲ್‌ನ ಅಧ್ಯಕ್ಷ ಎ.ಕೆ.ಪೂರವಾಹ, ನಿರ್ದೇಶಕಿ ವೀಣಾ ಸ್ವರೂಪ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಜಿಲ್ಲಾಧಿಕಾರಿ ವಿ. ಶಂಕರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ನರಸಮ್ಮ, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಾದ ರಾಮದಾಸ್, ಗೋವಿಂದಪ್ಪ, ಪಾರ್ವತಮ್ಮ, ತಾ.ಪಂ ಉಪಾಧ್ಯಕ್ಷ ಕೆ.ಮುನಿಯಪ್ಪ, ಜಿ.ಪಂ ಸದಸ್ಯೆ ಕಲ್ಪನಾ, ತಾ.ಪಂ ಸದಸ್ಯ ಡಾ. ವಿಜಯಕುಮಾರ್, ಶ್ಯಾಮಲಾ, ಜಯಲಕ್ಷ್ಮಿ ಹಾಜರಿದ್ದರು.