ರಾಜ್ಯವನ್ನು ಆಳುವಂತಾಗಲಿ: ವಡ್ಡರಹಳ್ಳಿ ರಾಜಣ್ಣ
ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬವನ್ನು ತಾಲೂಕಿನ ಕುಮಾರಸ್ವಾಮಿ ಯುವಸೇನೆ, ಜೆಡಿಎಸ್ ಸಂಯುಕ್ತಾಶ್ರಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಕುಮಾರಸ್ವಾಮಿ ಯುವಸೇನೆ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಆಚರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ಕುಮಾರಸ್ವಾಮಿಯಂತಹ ಜನಾನುರಾಗಿ ನಾಯಕರು ಮತ್ತೊಮ್ಮೆ ಈ ರಾಜ್ಯವನ್ನು ಆಳುವಂತಾಗಲಿ ಎಂದು ಆಶಿಸಿದರು.
20 ತಿಂಗಳ ಅಧಿಕಾರವಧಿಯಲ್ಲಿ ಅಪಾರವಾದ ಸಾಧನೆ ಮಾಡಿದ ಕುಮಾರಸ್ವಾಮಿ ಈ ರಾಜ್ಯಕಂಡ ಧೀಮಂತ ರಾಜಕಾರಣಿ, ನೊಂದವರಿಗಾಗಿ ಮಿಡಿಯುವ ಅಂತಃಕರಣ ಹೊಂದಿರುವ ಇವರು ಅಧಿಕಾರ ಇರಲಿ ಇಲ್ಲದಿರಲಿ ಜನಸೇವೆಗೆ ಸದಾಕಾಲ ತಮ್ಮನ್ನು ತಾವು ಅರ್ಪಿಸಿ ಕೊಂಡಿದ್ದಾರೆ ಎಂದು ಎಚ್ಡಿಕೆ ಗುಣಗಾನ ಮಾಡಿದರು.
ಕುಮಾರಸ್ವಾಮಿಗೆ ದೇವರು ಮತ್ತಷ್ಟು ಆಯುಷ್ಯ ಮತ್ತು ಆರೋಗ್ಯವನ್ನು ಕರುಣಿಸಿ ಈ ನಾಡಿಗೆ ಸೇವೆಸಲ್ಲಿಸುವ ಅವಕಾಶ ಕಲ್ಪಿಸಲಿ ಎಂದು ಪ್ರಾರ್ಥಿಸಿದ ಅವರು, ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಪಕ್ಷವನ್ನು ರಾಜ್ಯಾದ್ಯಂತ ಅಧಿಕಾರಕ್ಕೆ ತರಲು ನಾವೆಲ್ಲ ಶ್ರಮಿಸಬೇಕಿದೆ ಎಂದು ಕರೆನೀಡಿದರು.
ಹಣ್ಣುಹಂಪಲು ವಿತರಣೆ: ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಣೆ ಮಾಡಲಾಯಿತು. ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಜೆಡಿಎಸ್ ಮುಖಂಡರು ಆಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಿದರು.
ವಿಶೇಷ ಪೂಜೆ: ಇಲ್ಲಿನ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕುಮಾರಸ್ವಾಮಿ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿ ಕೊಳ್ಳಲಾಗಿತ್ತು. ಕುಮಾರಸ್ವಾಮಿ ಯುವಸೇನೆ ಮತ್ತು ತಾಲೂಕು ಜೆಡಿಎಸ್ ಪದಾಧಿಕಾರಿಗಳು ಮತ್ತು ಮುಖಂಡರು ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಅಧಿನಾಯಕನಿಗೆ ಜನ್ಮದಿನದ ಶುಭಾಶಯ ಕೋರಿದರು.
ಈ ಸಂದರ್ಭಲ್ಲಿ ಜಿ.ಪಂ ಸ್ಥಾಯಿಸ ಸಮಿತಿ ಅಧ್ಯಕ್ಷ ರಘುಕುಮಾರ್, ತಾ.ಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ಕಾಂತರಾಜು, ಜಯಲಕ್ಷ್ಮಿ ತಮ್ಮಯ್ಯ, ಭಾನುಪ್ರಕಾಶ್, ಗುರುಕುಮಾರ್, ನಗರಸಭಾ ಸದಸ್ಯರಾದ ಉಮಾಶಂಕರ್, ಲೋಕೇಶ್, ವಿಷಕಂಠ ಮೂರ್ತಿ, ನಗರ ಜೆಡಿಎಸ್ ಅಧ್ಯಕ್ಷ ಸತ್ಯನಾರಾಯಣ, ಕುಮಾರಸ್ವಾಮಿ ಯುವಸೇನೆ ಅಧ್ಯಕ್ಷ ಅಶ್ವತ್ಥ್, ಪದಾಧಿಕಾರಿಗಳಾದ ಸ್ವಾಮಿ, ಕೋಲೂರು ನಾಗೇಂದ್ರ ರಮೇಶ್ ಸಂಕಲಗೆರೆ ಮುಂತಾದವರು ಉಪಸ್ಥಿತರಿದ್ದರು.