ವಿಕಲಚೇತನರಿಗೆ ಸವಲತ್ತು ತಲುಪಿಸುವಲ್ಲಿ ವಿಫಲ
ಕ.ಪ್ರ.ವಾರ್ತೆ , ರಾಮನಗರ , ಡಿ.16
ವಿಕಲಚೇತನರಿಗೆ ಸರ್ಕಾರದ ಸವಲತ್ತು ತಲುಪಿಸುವಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳು ವಿಫಲವಾಗಿವೆ. ಅಧಿಕಾರಿಗಳು ಒಂದು ವಾರದೊಳಗೆ ತಮ್ಮ ತಪ್ಪು ಸರಿಪಡಿಸಿಕೊಳ್ಳದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಎಚ್ಚರಿಸಿದ್ದಾರೆ.
ಕಂದಾಯ ಭವನ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಕಲಚೇತನರಿಗೆ ವಿವಿಧ ಇಲಾಖೆಗಳಿಂದ ದೊರೆಯುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ಹಾಗೂ ಕುಂದು-ಕೊರತೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಇಲಾಖೆಗಳು ತಮ್ಮ ಅನುದಾನದಲ್ಲಿ ಶೇಕಡ 3ರಷ್ಟನ್ನು ವಿಕಲಚೇತನರಿಗೆ ಕಡ್ಡಾಯವಾಗಿ ಬಳಸಬೇಕು. ಈ ವಿಷಯದಲ್ಲಿ ಸಾಕಷ್ಟು ಬಾರಿ ಸೂಚನೆ ನೀಡಿದ್ದಾಗ್ಯೂ ಪಾಲನೆಯಾಗಿಲ್ಲ. ಇನ್ನು ವಿಳಂಬ ಸಲ್ಲದು. ಕಾಲಮಿತಿಯೊಳಗೆ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅವರು ತಾಕೀತು ಮಾಡಿದರು.
ಕಾರ್ಯಾಗಾರ ಆಯೋಜನೆ: 2004ರ ಜನವರಿಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಹಾಗೂ ವಿಕಲಚೇತನರ ಸಂಘಟನೆಗಳ ಕಾರ್ಯಾಗಾರ ನಡೆಸಬೇಕು. ಇಲಾಖೆಗಳು ತಮ್ಮಲ್ಲಿರುವ ಅನುದಾನ, ವಿಕಲಚೇತನರಿಗೆ ಒದಗಿಸಿರುವ ಮತ್ತು ಒದಗಿಸಬಹುದಾದ ಸೌಲಭ್ಯಗಳ ಮಾಹಿತಿಯನ್ನು ಒದಗಿಸಬೇಕು ಎಂದು ಡಾ.ವಿಶ್ವನಾಥ್ ತಿಳಿಸಿದರು.
ಈ ಕಾರ್ಯಾಗಾರವನ್ನು ಅಚ್ಚುಕಟ್ಟಾಗಿ ಆಯೋಜಿಸುವ ನಿಟ್ಟಿನಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಜವಬ್ದಾರಿ ವಹಿಸಲಾಗುವುದು. ಸಂಬಂಧಿಸಿದ ಇಲಾಖೆಗಳು ಅಗತ್ಯ ಸಹಕಾರ ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.
ಸಂಘಟನೆಯಿಂದ ದೂರು: ಕನಕಪುರ ವೈದ್ಯಾಧಿಕಾರಿಯು ವಿಕಲಚೇತನರಿಗೆ ಸ್ಪಂದಿಸುತ್ತಿಲ್ಲ. ಅವರು ಸೂಚಿಸಿದ ದಿನವೇ ಹೋದರೂ ವಿಕಲಚೇತನರ ಪರೀಕ್ಷೆ, ಪ್ರಮಾಣ ನೀಡಿಕೆಗೆ ಮುಂದಾಗುತ್ತಿಲ್ಲ. ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕನಕಪುರದ ಜನಪ್ರಿಯ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ದೂರಿದರು.
ಶಿಕ್ಷಣ ಇಲಾಖೆಯಿಂದ ಅಗತ್ಯ ಸವಲತ್ತು ನೀಡುತ್ತಿಲ್ಲ. ಬಸ್ ನಿಲ್ದಾಣಗಳಲ್ಲಿ ರ್ಯಾಂಪ್ ವ್ಯವಸ್ಥೆ, ಶೌಚಾಲಯ ಇಲ್ಲ. ಪಂಚಾಯಿತಿಗಳು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿಕಲಚೇನರಿಗೆ ಸೌಲಭ್ಯ ಒದಗಿಸುವುದಿರಲಿ ಕ್ರಿಯಾ ಯೋಜನೆಯೇ ರೂಪಿತವಾಗಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವಿಶ್ವನಾಥ್, ಸಮಸ್ಯೆ ಅರಿವಾಗಿದೆ. ಈ ನಿಟ್ಟಿನಲ್ಲಿ ಶೀಘ್ರ ಅಧಿಕಾರಿಗಳ ಸಭೆ ಕರೆದು ಅಗತ್ಯ ಸಲಹೆ ನೀಡಿರುತ್ತೇನೆ. ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ರಘುನಾಥ್ ಸ್ಪಷ್ಟನೆ: ಆರೋಗ್ಯ ಇಲಾಖೆಯಿಂದ ವಿಕಲಚೇತನರಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಅವರಿಗೆ ಅಗತ್ಯ ಪ್ರಮಾಣ ಪತ್ರವನ್ನು ಒದಗಿಸುದಷ್ಟೇ ಇಲಾಖೆ ಕೆಲಸ. ಇದರಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್ ಸ್ಪಷ್ಟಪಡಿಸಿದರು.
ವಿಕಲಚೇತನರ ಸಂಖ್ಯೆ : ರಾಮನಗರ ಜಿಲ್ಲೆಯಲ್ಲಿ ಶೇಕಡ 40 ರಷ್ಟು ಅಂಗವಿಕಲತೆ ಹೊಂದಿರುವ 10823 ವಿಕಲಚೇತನರಿಗೆ ರು.500 ಮಾಸಾಶನ, ಶೇಕಡ 75 ರಷ್ಟು ಅಂಗವಿಕಲತೆ ಹೊಂದಿರುವ 4895 ವಿಕಚೇತನರಿಗೆ ರು.1200 ಮಾಸಾಶನ ನೀಡಲಾಗುತ್ತಿದೆ. 2013-14 ನೇ ಸಾಲಿನಲ್ಲಿ ಶೇಕಡ 40 ಅಂಗವಿಲತೆ ಹೊಂದಿರುವ 445 ಹಾಗೂ ಶೇಕಡ 75ರಷ್ಟು ಅಂಗವಿಕಲತೆ ಹೊಂದಿರುವ 1163 ಫಲಾನುಭವಿಗಳಿಗೆ ಮಾಸಾಶನ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಾಮಾಜಿಕ ಭದ್ರತೆ ಯೋಜನೆ ಸಹಾಯಕ ನಿರ್ದೇಶಕಿ ವೀಣಾ ವಿವರಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಧನುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಾಲ್ಯ ನಾಯಕ್, ಜಂಟಿ ಕಣಷಿ ನಿರ್ದೇಶಕರ ಅಣ್ಣಯ್ಯ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಚಂದ್ರಯ್ಯ ಭಾಗವಹಿಸಿದ್ದರು.