ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ವಸೂಲಿ: ಪ್ರತಿಭಟನೆ

Vishwanath S
Updated On : 17 Dec 2013, 12:45 pm

ದೊಡ್ಡಬಳ್ಳಾಪುರ:  ಮಕ್ಕಳ ಪೋಷಕರಿಂದ ಮಿತಿಮೀರಿ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಕಾರ್ಮಲ್ ಜ್ಯೋತಿ ಶಾಲೆ ಮುಂದೆ ದೊಡ್ಡಬಳ್ಳಾಪುರ ತಾಲೂಕು ಲಾರಿ ಮಾಲೀಕರ ಸಂಘ ಮತ್ತು ಅನೇಕ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಆರ್.ಕೆಂಪರಾಜು ಕಾರ್ಮಲ್ ಶಾಲೆ ಸ್ಥಳೀಯ ಸಂಸ್ಕೃತಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಮಕ್ಕಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹುನ್ನಾರಗಳು ನಡೆಯುತ್ತಿವೆ. ಕಾನೂನು ಬಾಹಿರವಾಗಿ ಪ್ರತಿ ತಿಂಗಳೂ ನೂರಾರು ರುಪಾಯಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಸರ್ಕಾರಿ ಆದೇಶ ಇಲ್ಲದಿದ್ದರೂ ಸ್ಮಾರ್ಟ್ ಕ್ಲಾಸ್ ಹೆಸರಿನಲ್ಲಿ ಮಕ್ಕಳಿಂದ ವಂತಿಕೆ ವಸೂಲಿ ಮಾಡುತ್ತಿದ್ದಾರೆ. ಸಮವಸ್ತ್ರ ಖರೀದಿಯಲ್ಲೂ ಗೋಲ್‌ಮಾಲ್ ಮಾಡಿ ಪೋಷಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆ. ವಿದ್ಯಾರ್ಥಿನಿಯರು ಹಣೆಗೆ ಕುಂಕುಮ ಇಡುವುದು, ಕೈಗೆ ಬಳೆ ತೊಡುವುದನ್ನು ಒತ್ತಾಯಪೂರ್ವಕವಾಗಿ ನಿಷೇಧಿಸುವ ಹುನ್ನಾರ ಖಂಡನೀಯ. ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಆದರೆ ಬಿಇಓ ಶಾಲಾ ಆಡಳಿತ ಮಂಡಲಿಗೆ ನೊಟೀಸ್ ಜಾರಿಗೊಳಿಸಿ ಸುಮ್ಮನಾಗಿದ್ದಾರೆ. ಕ್ರಮ ಕೈಗೊಳ್ಳುವ ಗೋಜಿಗೆ ಹೋಗದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಶಾಲೆಯ ಮುಂದೆ 1 ಗಂಟೆಗೂ ಹೆಚ್ಚು ಹೊತ್ತು ಪ್ರತಿಭಟನೆ ನಡೆಯಿತು. ಕೆಲಕಾಲ ಪ್ರತಿಭಟನಾಕಾರರು ಮತ್ತು ಶಾಲಾ ಆಡಳಿತ ಮಂಡಲಿ ಮಧ್ಯೆ ವಾಗ್ವಾದ ನಡೆಯಿತು. ಕೆಲ ಪೋಷಕರ ಪರ-ವಿರೋಧ ಧೋರಣೆಗಳು ಕೂಡ ಜಟಾಪಟಿಯ ಗಂಭೀರತೆಗೆ ಸಾಕ್ಷಿಯಾಗಿದ್ದವು.
ಬಿಇಓ ಪ್ರತಿಕ್ರಿಯೆ: ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಬಿಇಓ ಎಚ್.ಎನ್.ತಿಮ್ಮೇಗೌಡ, ಈ ಹಿಂದೆ ಪೋಷಕರಿಂದ ಬಂದ ದೂರುಗಳನ್ವಯ ಶಾಲೆಗೆ ನೊಟೀಸ್ ನೀಡಿ ಸೂಕ್ತ ದಾಖಲೆಗಳನ್ನು ಹಾಜರು ಪಡಿಸುವಂತೆ ಕೋರಲಾಗಿದೆ. ಆದರೆ ಶಾಲಾ ಆಡಳಿತ ಮಂಡಲಿ ಸೂಕ್ತ ದಾಖಲೆಗಳನ್ನು ಹಾಜರುಪಡಿಸಿಲ್ಲ. ಶಾಲೆ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳಲು ನನ್ನ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಮುಂದಿನ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ ಎಂದಿದ್ದಾರೆ.
ವಸೂಲಾತಿ ನಿಜ: ಪ್ರತಿಭಟನೆ ಕುರಿತು ಮಾತನಾಡಿರುವ ಶಾಲಾ ಪ್ರಾಂಶುಪಾಲ ರೋಸ್ ಶಶಿಕಲಾ, ಶಾಲಾ ಆದಾಯದ ಶೇ.70 ಭಾಗ ಶಿಕ್ಷಕರ ಸಂಬಳಕ್ಕೆ ವ್ಯಯಿಸಲಾಗುತ್ತಿದೆ. ಹೀಗಾಗಿ ಶಾಲಾ ಅಭಿವೃದ್ಧಿ ಶುಲ್ಕ ಮತ್ತು ಪ್ರತಿತಿಂಗಳ ಶುಲ್ಕದಲ್ಲಿ ಕೊಂಚ ಹೆಚ್ಚುವರಿಯಾಗಿ ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ಎಲ್ಲವನ್ನೂ ಪೋಷಕರ ಸಭೆಯಲ್ಲೇ ತೀರ್ಮಾನ ಕೈಗೊಂಡು ಸಂಗ್ರಹಿಸಲಾಗುತ್ತಿದೆ. ಇನ್ನು ಸ್ಮಾರ್ಟ್ ಕ್ಲಾಸ್ ಹೆಸರಿನಲ್ಲಿ ವಂತಿಕೆ ವಸೂಲಿ ಆರೋಪ ಸತ್ಯಕ್ಕೆ ದೂರವಾದದ್ದು. ಧಾರ್ಮಿಕವಾದ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಾವು ನಮ್ಮ ಶಾಲೆಯಲ್ಲಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರತಿಭಟನಾ ಧರಣಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಲಾರಿ ಮಾಲೀಕರ ಸಂಘ, ತಾಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ತಾಲೂಕು ಕನ್ನಡ ಪಕ್ಷ, ಭುವನೇಶ್ವರಿ ಕನ್ನಡ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಸುವರ್ಣ ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement