ಸ್ವತ್ತು ಕಳೆದುಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸಿ
ದೊಡ್ಡಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 207ರ ಅಗಲೀಕರಣ ಪರಿಣಾಮ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳವವರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ದೊಡ್ಡಬಳ್ಳಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕಿನ ದೊಡ್ಡಬೆಳವಂಗಲದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮತ್ತು ಪ್ರತಿಭಟನೆ ಸೋಮವಾರ ನಡೆಯಿತು.
ದೊಡ್ಡಬೆಳವಂಗಲದ ಬಸ್ ನಿಲ್ದಾಣದ ಬಳಿ ನೂರಾರು ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದಾಬಸ್ಪೇಟೆಯಿಂದ ಹೊಸಕೋಟೆವರೆಗೆ ರಾಷ್ಟ್ರೀಯ ಹೆದ್ದಾರಿ 207ರ ಅಗಲೀಕರಣ ನಡೆಯುತ್ತಿದ್ದು, ಇದಕ್ಕಾಗಿ ರೈತರ ಭೂಮಿ, ಮನೆ, ಆಸ್ತಿಪಾಸ್ತಿ, ಅಂಗಡಿ ಮುಂಗಟ್ಟುಗಳನ್ನು ಸ್ವಾಧೀನ ಪಡೆಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಭೂ ಸ್ವಾಧೀನ ಕಾಯ್ದೆ ಪ್ರಕಾರ 4 ಪಟ್ಟು ದರ ನೀಡದೆ ರಸ್ತೆ ಅಗಲೀಕರಣ ಮಾಡುತ್ತಿರುವುದು ಖಂಡನೀಯ. ಜಿಲ್ಲಾಧಿಕಾರಿಗಳ ಸಮ್ಮುಖ ನಡೆದ ಸಭೆಯಲ್ಲಿ ಕೂಡ ಈ ಬಗ್ಗೆ ಪ್ರಸ್ತಾವನೆ ಇಡಲಾಗಿತ್ತು. ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ರೈತರ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳು ಪತ್ರ ರವಾನಿಸಿದ್ದರು. ಆದರೆ ಈವರಗೆ ಕ್ರಮದ ಭರವಸೆಯೂ ಸಿಕ್ಕಿಲ್ಲ ಎಂದು ದೂರಿದರು.
ಭೂಸ್ವಾಧೀನ ಅವೈಜ್ಞಾನಿಕ: ಕರ್ನಾಟಕದ ಅಭಿವೃದ್ಧಿ ಹೆಸರಿನಲ್ಲಿ ಕೆಲ ಖಾಸಗಿ ಕಂಪನಿಗಳ ಭೂದಾಹಕ್ಕೆ ರೈತರ ಫಲವತ್ತಾದ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು ಖಂಡನೀಯ. ಭೂ ಸ್ವಾಧೀನ ಕಾಯ್ದೆಗಳನ್ವಯ ರೈತರ ಒಪ್ಪಿಗೆ ಇಲ್ಲದೆ ಬೇಕಾಬಿಟ್ಟಿ ಬೆಲೆಗೆ ಮತ್ತು ಸಮರ್ಪಕ ಪುನರ್ವಸತಿ ಮತ್ತು ಪರಿಹಾರ ಇಲ್ಲದೆ ಸ್ವಾಧೀನ ಮಾಡಿಕೊಳ್ಳುವಂತಿಲ್ಲ ಎಂದರು.
ಬಗರ್ಹುಕುಂ ಹಕ್ಕುಪತ್ರ ನೀಡಿ: ರಾಜ್ಯದಲ್ಲಿ 41 ಲಕ್ಷಕ್ಕೂ ಅಧಿಕ ಎಕರೆ ಜಮೀನನ್ನು 17 ಲಕ್ಷ ರೈತ, ಕೂಲಿಕಾರ, ದಲಿತ ಕುಟುಂಬಗಳು ಅಭಿವೃದ್ಧಿ ಪಡಿಸಿವೆ. ಇದಕ್ಕೆ ಕನಿಷ್ಠವೆಂದರೂ 900 ಕೋಟಿ ವೆಚ್ಚದ ಶ್ರಮ ವ್ಯಯವಾಗಿದೆ.
ಮತ್ತೊಮ್ಮೆ ಫಾರಂ-53ನ್ನು ಹಾಕಲು ಅವಕಾಶ ನೀಡಿ ಅಕ್ರಮ-ಸಕ್ರಮ ಸಮಿತಿಗಳ ಮೂಲಕ ಹಕ್ಕುಪತ್ರ ನೀಡಬೇಕು. ರೈತರು ಸಾಗುವಳಿ ಮಾಡುತ್ತಿದ್ದ ಕಂದಾಯ ಭೂಮಿಯನ್ನು ಅರಣ್ಯ ಬೆಳೆಸುವ ಹೆಸರಿನಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಕಂದಾಯ ಭೂಮಿ ವಾಪಸ್ ಪಡೆದು ರೈತರಿಗೆ ಹಂಚಬೇಕು ಎಂದು ಆಗ್ರಹಿಸಿದರು.
ಸಾಲ ಮನ್ನಾ ಮಾಡಿ: ಅಕಾಲಿಕ ಮಳೆ, ಕೃಷಿ ವೆಚ್ಚಗಳ ಹೆಚ್ಚಳದಿಂದ ಮತ್ತು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಆರ್ಥಿಕವಾಗಿ ರೈತರು ದಿವಾಳಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಿ ರೈತರನ್ನು ಪಾರು ಮಾಡಲು ಸಹಕಾರ ಸಂಘಗಳು ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಸಿದ್ಧಲಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರತೇಜಸ್ವಿ, ಖಜಾಂಚಿ ವಿಜಯಕುಮಾರ್, ಕಾರ್ಯದರ್ಶಿ ಎಚ್.ರಾಮಕೃಷ್ಣ, ಮುಖಂಡರಾದ ರಮೇಶ್, ಸದಾಶಿವಪ್ಪ, ರಾಮಾಂಜಿನೇಯ, ಅಂಜನಾಮೂರ್ತಿ, ಸತೀಶ್, ರಾಜೇಶ್, ಕುಮಾರಸ್ವಾಮಿ, ಗಿರೀಶ್, ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು. ರಸ್ತೆತಡೆ ಪರಿಣಾಮವಾಗಿ ಸಾವಿರಾರು ಪ್ರಯಾಣಿಕರು ಪರಿತಪಿಸುವಂತಾಯಿತು.