ಉಚಿತ ಸಾರ್ವಜನಿಕ ಆಂಬ್ಯುಲೆನ್ಸ್ ಸೇವೆ ಉದ್ಘಾಟನೆ
ದೊಡ್ಡಬಳ್ಳಾಪುರ: ಇಲ್ಲಿನ ನಗರಸಭೆ ಹಿರಿಯ ಸದಸ್ಯ ಮತ್ತು ಶ್ರೀಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ.ನ.ಪ್ರಭುದೇವ್ ಸಾರ್ವಜನಿಕರ ಉಪಯೋಗಕ್ಕಾಗಿ ಒದಗಿಸಿರುವ ಉಚಿತ ಆಂಬ್ಯುಲೆನ್ಸ್ ಸೇವೆಯ ಉದ್ಘಾಟನಾ ಸಮಾರಂಭ ಇಲ್ಲಿನ ತೇರಿನಬೀದಿಯಲ್ಲಿರುವ ಶ್ರೀಚಂದ್ರಮೌಳೇಶ್ವರ ದೇವಾಲಯದ ಮುಂಭಾಗ ನಡೆಯಿತು.
ಜೆಡಿಎಸ್ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣ ಉಚಿತ ಆಂಬ್ಯುಲೆನ್ಸ್ ವಾಹನವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತ.ನ.ಪ್ರಭುದೇವ್, ಇದು ಬಹುದಿನದ ಕನಸು. ದೊಡ್ಡಬಳ್ಳಾಪುರದ ಜನರಿಗೆ ತುರ್ತು ಸಂದರ್ಭಗಳಲ್ಲಿ ಉಪಯೋಗವಾಗುವಂತೆ ಆ ವಾಹನ ಸೇವೆಯನ್ನು ಆರಂಭಿಸಲಾಗಿದೆ. ಭುವನೇಶ್ವರಿ ಕನ್ನಡ ಸಂಘದ 45ನೇ ವಾರ್ಷದ ವಾರ್ಷಿಕೋತ್ಸವದ ಅಂಗವಾಗಿ ಇದನ್ನು ಸಮರ್ಪಿಸಲಾಗುತ್ತಿದೆ. ಕನ್ನಡಪರ ಹೋರಾಟಗಳಲ್ಲಿ ಕಳೆದ 3 ದಶಕಗಳಿಂದ ಬೆಳೆಸಿದ ಊರಿಗೆ ಇದೊಂದು ಸಣ್ಣ ಕೊಡುಗೆ ಎಂದರು.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಂದ ಇದನ್ನು ಉದ್ಘಾಟಿಸುವ ಉದ್ದೇಶವಿತ್ತು. ಆದರೆ ಅದು ಸಾಧ್ಯವಾಗದಿರುವುದಕ್ಕೆ ವಿಷಾದವಿದೆ. ಈ ಆಂಬ್ಯುಲೆನ್ಸ್ ಸೇವೆಯನ್ನು ಜನ ಅನಿವಾರ್ಯ ಮತ್ತು ತುರ್ತು ಸಂದರ್ಭಗಳಲ್ಲಿ ದಿನದ 24 ಗಂಟೆಯೂ ಉಪಯೋಗಿಸಿಕೊಳ್ಳಹುದು. ಈ ಬಾರಿ ರಾಜ್ಯೋತ್ಸವವನ್ನು ಈ ಮೂಲಕ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಪೂಜಾ ಕಾರ್ಯಕ್ರಮ: ಇದೇ ಸಂದರ್ಭದಲ್ಲಿ ಶ್ರೀಚಂದ್ರಮೌಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾನಪದ ಕಲಾವಿದ ರುದ್ರೇಶ್ ಮೂರ್ತಿ ಅವರಿಂದ ವೀರಭದ್ರನ ಕುಣಿತ, ಕುಮಾರಿ ನೇಹಾ ಮತ್ತು ಸ್ನೇಹ ಅವರಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ನಡೆದವು.
ನಗರಸಭೆಯ ಕೆಲ ಸದಸ್ಯರು, ಜೆಡಿಎಸ್ ಮುಖಂಡರು, ಭುವನೇಶ್ವರಿ ಕನ್ನಡ ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು-ಕಾರ್ಯಕರ್ತರು ಹಾಜರಿದ್ದರು.