ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಓದುವ ಪ್ರವೃತ್ತಿ ಕ್ಷೀಣ: ರಾಘವೇಂದ್ರ ವಿಷಾದ

Vishwanath S
Updated On : 19 Dec 2013, 1:05 am

ಚನ್ನಪಟ್ಟಣ ಕನ್ನಡ ಭಾಷಾ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.  ಹಿಂದಿನ ಕಾಲದ ರಾಜ ಮಹಾರಾಜರ ಕತೆ ಹೇಳುವ ಅಜ್ಜ-ಅಜ್ಜಿಯರು ಈಗ ಕಾಣದಂತಾಗಿದೆ. ಹೀಗಾಗಿ ಮಕ್ಕಳಲ್ಲಿ ಬೌದ್ಧಿಕ ಕಸರತ್ತು ತುಂಬಿಸುತ್ತಿದ್ದ ಐತಿಹಾಸಿಕ ಕತೆಗಳು ಮಾಯವಾಗುತ್ತಿವೆ. ಅದರೊಂದಿಗೆ ಪುಸ್ತಕ ಓದುವ ಪ್ರವೃತ್ತಿಯೂ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಪತ್ರಕರ್ತ ಬಿ.ಎನ್.ರಾಘವೇಂದ್ರ ಅಭಿಪ್ರಾಯಪಟ್ಟರು.
ಮುತ್ತತ್ತಿಯಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಶಿಬಿರದಲ್ಲಿ ಮಕ್ಕಳಿಗಾಗಿ ಕಥಾ ವಾಚನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ,  ಕನ್ನಡ ಭಾಷಾ ಬೆಳವಣಿಗೆಯಲ್ಲಿ ಕನ್ನಡ ದಿನಪತ್ರಿಕೆಗಳ ಮಹತ್ವ ಹಿರಿದಾಗಿದ್ದು ಓದುಗರಿಗಾಗಿ ಹಲವಾರು ವಿಷಯಗಳನ್ನು ತಮ್ಮ ಮುಂದಿರುಸುತ್ತಿದ್ದು, ತಾವೆಲ್ಲರೂ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕಿದೆ ಎಂದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಲೆಕ್ಕಪರಿಶೋಧಕ ಪ್ರಕಾಶ್‌ರೆಡ್ಡಿ ಮಾತನಾಡಿ,  ಮಹಾತ್ಮಗಾಂಧೀಜಿ ತಮ್ಮ ಬಾಲ್ಯದಲ್ಲಿ ಸತ್ಯಹರಿಶ್ಚಂದ್ರ ಮತ್ತು ಶ್ರವಣಕುಮಾರ ಕಥೆಗಳಿಂದ ಪ್ರಭಾವಿತರಾಗಿ ಆದರ್ಶ ಮೈಗೂಡಿಸಿಕೊಂಡು ಪ್ರಪಂಚದಲ್ಲೇ ಒಬ್ಬ ಮಹಾನ್ ವ್ಯಕ್ತಿಯಾಗಿ ರೂಪುಗೊಂಡಿದ್ದು ಆದರ್ಶ ಕಥೆಗಳ ಪ್ರಭಾವದಿಂದ ಎಂದು ತಿಳಿಸಿದರು. ನೈತಿಕತೆ, ಆದರ್ಶ, ಉತ್ತಮ ವ್ಯಕ್ತಿತ್ವ, ಮನೋಸ್ಥೈರ್ಯ ಮತ್ತು ವ್ಯಕ್ತಿತ್ವ ವಿಕಸನ ಹೊಂದಲು ಉತ್ತಮ ಕಥೆಗಳನ್ನು ಓದುವುದರಿಂದ ಸಾಧ್ಯ. ದಿನಪತ್ರಿಕೆಗಳಲ್ಲಿ ಬರುವ ಅಪಾರ ಜ್ಞಾನವನ್ನು ಸಂಗ್ರಹಿಸಿಡುವ ಮೂಲಕ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷರಾದ ಎಂ.ಶಿವಮಾದು ಮಾತನಾಡಿ, ವಿದ್ಯಾರ್ಥಿಗಳ ಜ್ಞಾನದ ಮೂಲ ಓದು, ಜಂಜಾಟದ ಜೀವನದಿಂದ ವಿದ್ಯಾರ್ಥಿಗಳು ಓದಿನಿಂದ ವಿಮುಕ್ತರಾಗುತ್ತಿದ್ದು, ಅರಿವಿನ ಕೊರೆತೆ ಎದ್ದು ಕಾಣುತ್ತಿದೆ. ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಪೈಪೋಟಿ ನೀಡಲು ಕನ್ನಡ ಪತ್ರಿಕೆಯನ್ನು ದಿನವೂ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.  ಪ್ರಸರಣ ವಿಭಾಗದ ಅಧಿಕಾರಿ ಶ್ರೀ ಅಶೋಕ್, ಹಾರೋಹಳ್ಳಿ ಕಿರಣ್ ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ ಸ್ವಾಗತಿಸಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement