ಕಂಪ್ಯೂಟರ್ ಶಿಕ್ಷಕರ ಮರುನೇಮಕ ಮಾಡಿಕೊಳ್ಳಿ
ದೊಡ್ಡಬಳ್ಳಾಪುರ: ರಾಜ್ಯದ ವಿವಿಧ ಸರ್ಕಾರಿ ಪ್ರೌಢಶಾಲೆಗಳಿಗೆ 5 ವರ್ಷದ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದ ಕಂಪ್ಯೂಟರ್ ಶಿಕ್ಷಕರನ್ನು ಗುತ್ತಿಗೆ ಅವಧಿಗೆ ಮುನ್ನವೇ ಕೆಲಸದಿಂದ ತೆಗೆದು, ಕಳೆದ 6 ತಿಂಗಳಿಂದ ಸಂಬಳಕೊಡದೆ ಇರುವ ಧೋರಣೆ ಖಂಡನೀಯ ಎಂದು ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ. ನಾಗೇಂದ್ರಸ್ವಾಮಿ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಟಿ ಫೇಸ್-2 ಕಾರ್ಯಕ್ರಮದಡಿ ಈ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಕೇವಲ 3300 ರು ಸಂಬಳ ನೀಡಲಾಗುತ್ತಿತ್ತು. ಆದರೆ ಅದನ್ನೂ ನೀಡದೆ ವಂಚಿಸಿರುವುದು ದುರದೃಷ್ಟಕರ.
ಸುಮಾರು 3800 ಶಿಕ್ಷಕರು ಈ ಯೋಜನೆಯಡಿ ಕೆಲಸ ಪಡೆದಿದ್ದರು. ಈ ಕೂಡಲೇ ಸರ್ಕಾರ ಈ ಶಿಕ್ಷಕರಿಗೆ ಸಂಬಳ ನೀಡಿ ಪರ್ಯಾಯ ಕೆಲಸದ ಹೊಣೆಗಾರಿಕೆಯನ್ನು ವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಹಲವು ಖಾಸಗಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಕುಂದು-ಕೊರತೆ ಕೇಳಿವವರಿಲ್ಲದಾಗಿದೆ. ವಿದ್ಯಾ ಸಂಸ್ಥೆಗಳ ಧನದಾಹಕ್ಕೆ ಬಡಪಾಯಿ ಶಿಕ್ಷಕರು ಬಲಿಯಾಗುತ್ತಿದ್ದಾರೆ. ಶಿಕ್ಷಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಖಂಡನೀಯ. ಖಾಸಗಿ ಶಾಲಾ ಶಿಕ್ಷಕರುಗಳಿಗೂ ಕನಿಷ್ಠ ವೇತನ ಮತ್ತು ಕಾರ್ಮಿಕ ಕಾನೂನುಗಳು ಅನ್ವಯವಾಗುವಂತೆ ಸರ್ಕಾರ ನಿಯಮಾವಳಿ ಪ್ರಕಟಿಸಬೇಕು. ಖಾಸಗಿ ಶಾಲಾ-ಕಾಲೇಜುಗಳ ಶಿಕ್ಷಕರ ಸಮಗ್ರ ಅಂಕಿ-ಅಂಶ ಸಂಗ್ರಹ ಕಾರ್ಯ ಕೂಡಲೇ ನಡೆಯಬೇಕು. ಆಡಳಿತ ಮಂಡಲಿಗಳಿಗೆ ಶಿಸ್ತು ಸಂಹಿತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಚನ್ನಹಳ್ಳಿ ಶ್ರೀಧರ್, ಖಜಾಂಚಿ ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಮುನೇಂದ್ರಕುಮಾರ್, ನಗರ ಕಾರ್ಯದರ್ಶಿ ಚಂದ್ರಶೇಖರ್, ಬಾಬಾಜಾನ್ ಮತ್ತು ಕಿರಣ್ಕುಮಾರ್ ಹಾಜರಿದ್ದರು.