ಕರ್ನಾಟಕ ವೈನ್ ಟೂರಿಸಂ, ದ್ರಾಕ್ಷಾರಸ ಉತ್ಸವ
ಕ.ಪ್ರ.ವಾರ್ತೆ , ರಾಮನಗರ , ಡಿ.18
ಕರ್ನಾಟಕ ದ್ರಾಕ್ಷಾರಸ ಮಂಡಳಿ, ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಎರಡು ದಿನದ ಕರ್ನಾಟಕ ವೈನ್ ಟೂರಿಸಂ ಹಾಗೂ ದ್ರಾಕ್ಷಾರಸ ಉತ್ಸವವನ್ನು ಚನ್ನಪಟ್ಟಣ ಸಮೀಪದ ಬೈರಾಪಟ್ಟಣ ತೋಟಗಾರಿಕೆ ಕ್ಷೇತ್ರದ ಎದುರು ಡಿ.21, 22 ರಂದು ಆಯೋಜಿಸಲಾಗಿದೆ.
ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಿರುವ ದ್ರಾಕ್ಷಾರಸ ಸೇವನೆಯತ್ತ ಜನರನ್ನು ಸೆಳೆಯುವುದು, ಈ ಭಾಗದಲ್ಲಿ ದ್ರಾಕ್ಷಿ ಬೆಳೆಗೆ ರೈತರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಮಗ್ಗುಲಲ್ಲಿ ಈ ಮೇಳಕ್ಕೆ ಸಿದ್ಧತೆ ಪ್ರಾರಂಭಗೊಂಡಿದೆ.
ಈ ವಿಷಯವನ್ನು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಮತ್ತು ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ಬೆಳ್ಳೂರು ಅವರು ಉತ್ಸವದ ಸಿದ್ಧತೆ, ಉದ್ದೇಶಗಳನ್ನು ವಿವರಿಸಿದರು.
40ಕ್ಕೂ ಹೆಚ್ಚು ಬ್ರಾಂಡ್: ಕರ್ನಾಟಕ ವೈನ್ ಟೂರಿಸಂ ಮತ್ತು ದ್ರಾಕ್ಷಾರಸ ಉತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರೆಡೆಯ ಪ್ರಮುಖ ವೈನರಿಗಳು ಭಾಗವಹಿಸಲಿದ್ದು, ತಮ್ಮ ಉತ್ಪಾದನೆಯ 40ಕ್ಕೂ ಹೆಚ್ಚು ವೈನ್ಬ್ರಾಂಡ್ಗಳನ್ನು ಪರಿಚಯಿಸಲಿದ್ದಾರೆ. ರೈತ ಮತ್ತು ಗ್ರಾಹಕ ಸ್ನೇಹಿಯಾಗಿ ಈ ಮೇಳವನ್ನು ಸಂಘಟಿಸಲಾಗುತ್ತಿದೆ ಎಂದು ಡಾ.ಬೆಳ್ಳೂರು ಕೃಷ್ಣ ಹೇಳಿದರು.
ಜಿಲ್ಲೆಯ ರೈತರಿಗೆ ವೈನ್ ದ್ರಾಕ್ಷಿ ಬೆಳೆಯನ್ನು ಪರಿಚಯಿಸಿ, ಪ್ರೋತ್ಸಾಹಿಸುವ ಪ್ರಮುಖ ಉದ್ದೇಶ ಹೊಂದಲಾಗಿದೆ. ಮೇಳದಲ್ಲಿ ರೈತರಿಗೆ ದ್ರಾಕ್ಷಿ ಬೆಳೆಯ ಬಗ್ಗೆ ಪ್ರಾತ್ಯಕ್ಷಿಕೆ, ತರಬೇತಿ ಹಾಗೂ ಸಂವಾದವನ್ನೂ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ವೈನ್ ಸೇವನೆಯಿಂದ ಆಗುವ ಅನುಕೂಲತೆಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು. ಕರ್ನಾಟಕ ವೈನ್ ಟೂರ್ನಿಂದ ಸಿಗುವ ಸವಲತ್ತುಗಳ ಬಗ್ಗೆಯೂ ತಿಳಿಸಿಕೊಡಲಾಗುವುದು. ಉತ್ಪಾದಕರಿಂದ ಗ್ರಾಹರಿಗೆ ರಿಯಾಯಿತಿ ದರದಲ್ಲಿ ವೈನ್ ಮಾರಾಟ ವ್ಯವಸ್ಥೆಯನ್ನು ಏರ್ಪಾಟು ಮಾಡಲಾಗಿದೆ ಎಂದು ಹೇಳಿದರು.
ರೈತರಿಗೆ ಪ್ರೋತ್ಸಾಹ ಧನ: ವೈನ್ ದ್ರಾಕ್ಷಿ ಬೆಳೆಯನ್ನು ವಿಸ್ತರಿಸುವ ದೃಷ್ಟಿಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಪ್ರತಿ ಎಕರೆಗೆ ರು.30 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲೂ ವೈನ್ ದ್ರಾಕ್ಷಿ ಬೆಳೆಗೆ ಅನುದಾನ ನೀಡಲಾಗುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಂದು ಡಾ.ಕೃಷ್ಣ ಸಲಹೆ ನೀಡಿದರು.
ದ್ರಾಕ್ಷಿಯು ಪ್ರಮುಖ ಹಣ್ಣಿನ ಬೆಳೆಯಾಗಿದೆ. ದ್ರಾಕ್ಷಿ ಉತ್ಪಾದನೆ, ಬಳಕೆಯಲ್ಲಿ ವೈವಿಧ್ಯತೆ, ಮೌಲ್ಯವರ್ಧನೆ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ವೈನ್ ಉತ್ಪಾದನೆಗೆ ಇರುವ ವಿಫುಲ ಅವಕಾಶ ಮನಗಂಡ ಸರ್ಕಾರ 2007ರಲ್ಲಿ ವೃನ್ ನೀತಿ ಜಾರಿಗೆ ತಂದು, ಉತ್ಪಾದಕರು ಮತ್ತು ರೈತರಿಗೆ ನೆರವಾಗಿದೆ ಎಂದರು.
ಪ್ರಾರಂಭದಲ್ಲಿ 500 ಎಕರೆ ಇದ್ದ ವೈನ್ ದ್ರಾಕ್ಷಿ ಬೆಳೆ ಪ್ರದೇಶ ಈಗ 2 ಸಾವಿರ ಎಕರೆಗೆ ವಿಸ್ತರಣೆಯಾಗಿದೆ. 17 ವೈನ್ ಉತ್ಪಾದಕ ಘಟಕಗಳಿದ್ದು, ವೈನ್ ಉತ್ಪಾದನೆಯು 40.76 ಲಕ್ಷ ಲೀಟರ್ ದಾಟಿದೆ. ದ್ರಾಕ್ಷಿ ಬೆಳೆಯು ಸರಾಸರಿ 40 ವರ್ಷದವರೆಗೆ ನಿಖರ ಆದಾಯ ತರುವುದು. ಸೂಕ್ತ ಮಾರುಕಟ್ಟೆಯೂ ಲಭ್ಯವಿದೆ ಎಂದು ತಿಳಿಸಿದರು.
ಉತ್ತಮ ವಾತಾವರಣ: ದ್ರಾಕ್ಷಿ ಬೆಳೆಗೆ ರಾಜ್ಯದ 16 ಜಿಲ್ಲೆಗಳಲ್ಲಿ ವಾತಾವರಣ ಹೇಳಿ ಮಾಡಿಸಿದೆ. ನೀರಿನ ಅಗತ್ಯತೆ ಕಡಿಮೆ ಇರುವ ಈ ಬೆಳೆಗೆ ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಸಹಿತ ಬಯಲುಸೀಮೆ ಜಿಲ್ಲೆಗಳು ಸೂಕ್ತವಾಗಿವೆ ಎನ್ನುವುದು ತಜ್ಞರ ಅಭಿಪ್ರಾಯ ಎಂದು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ರಾಮನಗರ ಜಿಲ್ಲೆಯ ಹವಾಮಾನ ಮತ್ತು ಮಣ್ಣು ದ್ರಾಕ್ಷಿ ಬೆಳೆಗೆ ಉಳಿದೆಡೆಗಿಂತ ಹೆಚ್ಚಿನ ಮಟ್ಟದಲ್ಲಿ ಪೂರಕವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆ ಮುಂದಾಗುವ ರೈತರಿಗೆ ಜಿ.ಪಂ. ಮತ್ತು ಸರ್ಕಾರದಿಂದ ಅಗತ್ಯ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಆರೋಗ್ಯಕ್ಕೆ ಅನುಕೂಲ: ರೈತರು ಮೌಲ್ಯವರ್ಧಿತ ಕೃಷಿಗೆ ಒತ್ತು ನೀಡಿ ಆರ್ಥಿಕವಾಗಿ ಲಾಭ ಪಡೆಯಬೇಕು. ಈ ನಿಟ್ಟಿನಲ್ಲಿ ದ್ರಾಕ್ಷಿ ಬೇಸಾಯ ಸೂಕ್ತವಾಗಿದೆ. ಇತರೆ ಮದ್ಯಗಳಿಗೆ ಹೋಲಿಸಿದಾಗ ದ್ರಾಕ್ಷಾರಸದಲ್ಲಿ ಮಾದಕ ವಸ್ತುಗಳಿಲ್ಲ. ಹೀಗಾಗಿ ಆರೋಗ್ಯದ ದುಷ್ಪರಿಣಾಮವಿಲ್ಲ. ದ್ರಾಕ್ಷಾರಸ ಸೇವನೆಯಿಂದ ಹೃದಯ, ಮೆದುಳಿನ ಆರೋಗ್ಯಕ್ಕೆ ಅನುಕೂಲವೆಂದು ಸಂಶೋಧನೆಗಳು ಹೇಳಿವೆ ಎಂದರು.
ವರ್ಷದ ಎಲ್ಲಾ ದಿನ, ಎಲ್ಲಾ ವಾತಾವರಣದಲ್ಲೂ ದ್ರಾಕ್ಷಾ ರಸವನ್ನು ಸೇವಿಸಬಹುದಾಗಿದೆ. ಮಿತವಾಗಿ ಬಳಸಿದ್ದಲ್ಲಿ ದುಷ್ಪರಿಣಾಮಗಳಿಲ್ಲ. ಹೀಗಾಗಿಯೇ ದೇಶಾದ್ಯಂತ ಪೂರಕ ವಾತಾವರಣ ಇರುವೆಡೆಯಲ್ಲೆಲ್ಲಾ ದ್ರಾಕ್ಷಾರಸ ತಯಾರಿಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ ಎಂದು ಡಾ.ವೆಂಕಟೇಳ್ ತಿಳಿಸಿದರು. ಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಚ್.ಎನ್.ಹೇಮಾ ಹಾಜರಿದ್ದರು.
21ರಂದು ಉದ್ಘಾಟನೆ
ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ತೋಟಗಾರಿಕೆ ಫಾರಂ ಎದುರಿನ ಕದಂಬ ಹೊಟೇಲ್ ಪಕ್ಕ ಡಿ.21ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ವೈನ್ ಟೂರಿಸಂ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ದ್ರಾಕ್ಷಾರಸ ಉತ್ಸವವನ್ನು ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ, ದ್ರಾಕ್ಷಾರಸ ಮಳಿಗೆಗಳನ್ನು ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಶಾಸಕ ಸಿ.ಪಿ.ಯೋಗೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.