ಜಿಪಂ ಸದಸ್ಯೆ ಮಂಜುಳಾ ಮರಿದೇವರು ಆಯ್ಕೆ ಅನೂರ್ಜಿತ
ರಾಮನಗರ: ರಾಮನಗರ ಜಿಲ್ಲಾ ಪಂಚಾಯಿತಿಯ ಕೂಟಗಲ್ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಮಂಜುಳಾ ಮರಿದೇವರು ಆಯ್ಕೆಯನ್ನು ಅನೂರ್ಜಿತಗೊಳಿಸಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪರಾಜಿತ ಜೆಡಿಎಸ್ ಅಭ್ಯರ್ಥಿ ಸುಮಿತ್ರಮ್ಮ ಅವರನ್ನು ವಿಜೇತೆ ಎಂದು ಘೋಷಿಸಿ ತೀರ್ಪು ನೀಡಿದೆ.
2011ರ ಜ.4ರಂದು ನಡೆದ ಮತ ಎಣಿಕೆಯಲ್ಲಿ ಮಂಜುಳಾ ಮರಿದೇವರು ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಆಗಿನ ಉಪ ವಿಭಾಗಾಧಿಕಾರಿ ವಿಜಯಕುಮಾರ್ ಘೋಷಿಸಿದ್ದರು. ಇದರ ವಿರುದ್ಧ ಪರಾಜಿತ ಸುಮಿತ್ರಮ್ಮ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈಗಾಗಲೇ ಪ್ರಧಾನ ಸಿವಿಲ್ ನ್ಯಾಯಾಲಯವು ಮರು ಮತ ಎಣಿಕೆಗೆ ಆದೇಶಿಸಿತ್ತು. ಅದರಲ್ಲೂ ಮಂಜುಳಾ ಮರಿದೇವರು ಅವರನ್ನೇ ವಿಜೇತೆ ಎಂದು ಘೋಷಿಸಲ್ಪಟ್ಟಿದ್ದರು. ಪ್ರತಿಸ್ಪರ್ಧಿಗಳಿಬ್ಬರೂ ಮೇಲ್ಮನವಿ ಸಮೇತ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್ ಅವರು ಮಂಗಳವಾರ ತೀರ್ಪು ಪ್ರಕಟಿಸಿದ್ದು, ಮಂಜುಳಾ ಮರಿದೇವರು ಆಯ್ಕೆ ಅಸಿಂಧು ಎಂದಿದ್ದಾರೆ. ತೀರ್ಪಿನ ಪ್ರಕಾರ ಸುಮಿತ್ರಮ್ಮ ಅವರೀಗ ಕೂಟಗಲ್ ಕ್ಷೇತ್ರದ ಜಿ.ಪಂ. ಸದಸ್ಯೆ.
ಪ್ರಕರಣ ವಿವರ: 23 ತಿಂಗಳ ಹಿಂದೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೂಟಗಲ್ ಕ್ಷೇತ್ರವು ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಾಗಿತ್ತು. 108 ಮತಗಳ ಅಂತರದಿಂದ ಮಂಜುಳಾ ಮರಿದೇವರು ಗೆಲವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಆಗಿನ ಉಪ ವಿಭಾಗಾಧಿಕಾರಿ ವಿಜಯಕುಮಾರ್ ಫಲಿತಾಂಶ ಘೋಷಿಸಿದ್ದರು.
ಸದರಿ ಮೀಸಲಿನಡಿ ಸ್ಪರ್ಧೆಗೆ ಮಂಜುಳಾ ಮರಿದೇವರು ಅನರ್ಹರು, ಅವರು ನಾಮಪತ್ರದ ಜತೆ ಸಲ್ಲಿಸಿರುವುದು ಸುಳ್ಳು ಪ್ರಮಾಣ ಪತ್ರ ಹಾಗೂ ಫಲಿತಾಂಶ ಘೋಷಣೆಯೂ ನ್ಯಾಯ ಸಮ್ಮತವಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿ ಪರಾಜಿತೆ ಸುಮಿತ್ರಮ್ಮ ಪ್ರಧಾನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.
ಮರು ಎಣಿಕೆ ನಡೆದಿತ್ತು: ಸುಮಿತ್ರಮ್ಮ ಅವರ ಮನವಿಯನ್ನು ಪುರಸ್ಕರಿಸಿದ್ದ ಪ್ರಧಾನ ಸಿವಿಲ್ ನ್ಯಾಯಾಲಯವು ಮಂಜುಳಾ ಮರಿದೇವರು ಆಯ್ಕೆ ತಡೆ ಹಿಡಿದು, ಮರು ಮತ ಎಣಿಕೆಗೆ ಆದೇಶಿಸಿತ್ತು. ಅಂತೆಯೇ ಅರ್ಜಿದಾರರಿಗೆ ಕೋರ್ಟ್ ಶುಲ್ಕ ಪಾವತಿಸಲು ಉಪ ವಿಭಾಗಾಧಿಕಾರಿಗೆ ನಿರ್ದೇಶನ ನೀಡಿತ್ತು. ಮರು ಎಣಿಕೆಯಲ್ಲೂ ಮಂಜುಳಾ ಮರಿದೇವರು ಅವರೇ ವಿಜೇತೆ ಎಂದಾಯಿತು. ಮರು ಎಣಿಕೆಯೂ ಸಮರ್ಪಕವಲ್ಲ ಎಂದು ಸುಮಿತ್ರಮ್ಮ ಅವರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅದೀಗ ಇತ್ಯರ್ಥವಾಗಿದೆ.