ಮುದುಡಲಾರಂಭಿಸಿದೆ ಚನ್ನಪಟ್ಟಣದ ಚಿಗುರೆಲೆ
ಕ.ಪ್ರ.ವಾರ್ತೆ ಚನ್ನಪಟ್ಟಣ ಡಿ.18
ರೈತರ ಪಾಲಿನ ಧನಲಕ್ಷ್ಮಿ ಎನಿಸಿದ ವೀಳ್ಯೆದೆಲೆಗೆ ಇದೀಗ ಗಂಗವ್ವನ ಕೃಪೆ ಇಲ್ಲವಾಗಿದೆ. ರಾಜ್ಯದಲ್ಲಿ ತನ್ನದೇ ಆದ ಪ್ರಾಧಾನ್ಯತೆ ಪಡೆದಿದ್ದ ಚನ್ನಪಟ್ಟಣದ ಚಿಗುರೆಲೆ ನೀರಿನ ಕೊರತೆಯಿಂದಾಗಿ ಮುದುಡಲಾರಂಭಿಸಿದೆ.
ಕಳೆದೊಂದು ದಶಕದಿಂದ ತಾಲೂಕನ್ನು ಕಾಡಿದ ಬರಗಾಲದಿಂದಾಗಿ ಕೆರೆಕಟ್ಟೆಗಳಿರಲಿ ಸಾವಿರ ಅಡಿಗಳ ಆಳಕ್ಕಿಳಿದರೂ ಬೊಗಸೆಯಷ್ಟು ಗಂಗೆ ಸಿಗದಾಗಿದ್ದು, ವೀಳ್ಯೆದೆಲೆ ಬೆಳೆ ಉಳಿಸಿಕೊಳ್ಳಲು ರೈತರ ಮಾಡಿದ ಕಸರತ್ತುಗಳೆಲ್ಲ ವಿಫಲ ಗೊಂಡು ಎಲೆತೋಟ ಮತ್ತು ತೋಟದ ಮಾಲೀಕನ ಬದುಕು ಎರಡಕ್ಕೂ ಸಂಕಷ್ಟದ ಕಾಲ ಎದುರಾಗಿದೆ.
ಅತಿ ಹೆಚ್ಚು ವೀಳ್ಯದೆಲೆ ಉತ್ಪಾದಿಸುವ ತಾಲೂಕಿನ ಭೂಹಳ್ಳಿ, ಸಿಂಗರಾಜಪುರ, ಚಿಕ್ಕೇನಹಳ್ಳಿ, ಬೇವೂರು, ಮೆಣಸಿಗನಹಳ್ಳಿ ಗ್ರಾಮಗಳಲ್ಲಿ ಬಹುಪಾಲು ತೋಟಗಳು ನೀರಿಲ್ಲದೆ ಒಣಗಿ ಹೋಗಿವೆ. ಒಂದೆಡೆ ಮಳೆಗಾಲದಲ್ಲಿ ಮಳೆ ಕೈಕೊಟ್ಟರೆ, ಇನ್ನೊಂದೆಡೆ ತೋಟಗಳಲ್ಲಿ ಕೊರೆಸಿದ್ದ ಬೋರ್ವೆಲ್ಗಳು ಬತ್ತಿ ಹೋಗಿರುವುದು ರೈತರು ಕೈಕಟ್ಟಿ ಕೂರುವಂತೆ ಮಾಡಿವೆ.
ಇಲ್ಲದ ಆಸರೆ: ಹಲವು ವರ್ಷಗಳಿಂದ ಬೆಳೆಗಾರರ ಕುಟುಂಬವನ್ನು ಸಲುಹಿದ್ದ ಎಲೆ ಬಳ್ಳಿಗಳು ಇದೀಗ ಆಸರೆ ಇಲ್ಲದಂತಾಗಿದ್ದು, ಹೊಣಗಿದ ತೋಟದಲ್ಲಿ ಕಣ್ಣೀರಿಡುವುದನ್ನು ಬಿಟ್ಟು ರೈತ ಬೇರೇನು ಮಾಡಲಾಗದ ಅಸಹಾಯಕನಾಗಿದ್ದಾನೆ. ಕೆಲ ರೈತರು ವಿಧಿ ಇಲ್ಲದೆ ತೋಟಗಳನ್ನು ತೆರವುಗೊಳಿಸುವ ಕಠಿಣ ನಿರ್ಧಾರಕ್ಕೆ ರೈತರು ಬಂದಿದ್ದಾರೆ. ಪ್ರಸ್ತುತ ಮಳೆಗಾಲದಲ್ಲೂ ಸಮರ್ಪಕವಾಗಿ ಮಳೆಯಾಗಿಲ್ಲದಿರುವುದರಿಂದ ಭವಿಷ್ಯದಲ್ಲಿ ಇನ್ನಷ್ಟು
ತೋಟಗಳು ಬರಡಾಗುವ ಆತಂಕ ಎದುರಾಗಿದೆ.
ಬೆಲೆ ಇದ್ರೂ ಬೆಳೆ ಇಲ್ಲ: ಈ ಹಿಂದೆ ಚನ್ನಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆದಿದ್ದ ವೀಳ್ಯದೆಲೆ ಪಿಂಡಿಗಳು ಇದೀಗ ಬೆರಳೆಣಿಕೆಯಷ್ಟಾಗಿವೆ. ಪ್ರತಿದಿನ 2000-3000 ಪಿಂಡಿಗಳು ಚನ್ನಪಟ್ಟಣದ ಮಾರುಕಟ್ಟೆಯಿಂದ ರಾಜ್ಯದ ವಿವಿಧೆಡೆಗೆ ಹಾಗೂ ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಿಗೂ ರವಾನೆಯಾಗುತ್ತಿದ್ದವು. ಈಗ ಕೇವಲ 400-500 ಪಿಂಡಿಗಳು ಮಾತ್ರ ಮಾರುಕಟ್ಟೆಗೆ ಬರುತ್ತಿವೆ.
ಮದುವೆ ಸುಗ್ಗಿಯಲ್ಲಿ ವೀಳ್ಯದೆಲೆ ಪಿಂಡಿಗೆ ಬಹುಬೇಡಿಕೆ. ಈ ಕಾಲದಲ್ಲಿ ಬೆಳೆಗಾರರಿಗೆ ಇಲ್ಲವೆಂದರೂ ಪಿಂಡಿಗೆ 2500 ರು.ನಿಂದ 3500 ರು.ವರೆಗೂ ಬೆಲೆ ಸಿಗುತ್ತದೆ. ಪ್ರಸ್ತುತ ಸಮಯದಲ್ಲೂ 1000 ರು. ನಿಂದ 2000 ರು.ವರೆಗೂ ಬೆಲೆ ಇದೆ. ಆದರೆ ನೀರಿನ ಅಲಭ್ಯತೆಯಿಂದ ಅಗತ್ಯವಿರುವಷ್ಟು ವೀಳ್ಯದೆಲೆ ಮಾರುಕಟ್ಟೆಗೆ ಬರುತ್ತಿಲ್ಲ.
ನೀರಾವರಿ ಯೋಜನೆಯೇ ದಾರಿ: ಪ್ರಮುಖವಾಗಿ ತಾಲೂಕಿನಲ್ಲಿ ಅಂತರ್ಜಲ ಪಾತಾಳಕ್ಕಿಳಿದಿರುವುದು ವೀಳ್ಯದೆಲೆ ವಿನಾಶದತ್ತ ಸಾಗಲು ಪ್ರಮುಖ ಕಾರಣವಾಗಿರುವುದರಿಂದ ಅಂತರ್ಜಲ ಮರುಪೂರಣವಾದರೆ ಬೆಳೆಯನ್ನು ಉಳಿಸಿಕೊಳ್ಳಬಹುದು. ಇದಕ್ಕಾಗಿ ತಾಲೂಕಿಗೆ ಅಗತ್ಯವಿರುವ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕಾದ ಅಗತ್ಯತೆ ಸಾಕಷ್ಟಿದೆ.
ಹಲವಾರು ದಶಕಗಳಿಂದ ತಾಲೂಕಿನ ರೈತರ ಬದುಕಿಗೆ ಆಸರೆಯಾಗಿದ್ದ ವೀಳ್ಯದೆಲೆ ಇದೀಗ ನೀರಿನ ಅಲಭ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಚನ್ನಪಟ್ಟಣದ ಚಿಗುರೆಲೆ ಮುಂದಿನ ದಿನಗಳಲ್ಲಿ ಹೆಸರಿಗೆ ಮಾತ್ರ ಉಳಿದುಕೊಳ್ಳುವುದು ನಿಶ್ಚಿತವಾಗಿದೆ.
ನೀರಿನ ಅಲಭ್ಯತೆಯಿಂದ ತಾಲೂಕಿನ ಹಲವು ಗ್ರಾಮಗಳಲ್ಲಿ ವೀಳ್ಯದೆಲೆ ತೋಟಗಳು ಒಣಗಿಹೋಗಿವೆ. ಗರಕಹಳ್ಳಿ ಭಾಗದಲ್ಲಿ ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಹೆಚ್ಚಿಸಿರುವಂತೆ ತಾಲೂಕಿನ ಇತರ ಕಡೆಗಳಲ್ಲೂ ಕೆರೆಗಳಿಗೆ ನೀರು ಹರಿಸಿದರೆ ಅಂತರ್ಜಲ ಹೆಚ್ಚಿ ಬೋರ್ವೆಲ್ಗಳು ಮರು ಚಾಲನೆಯಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ನೀರಾವರಿ ಕಾಮಗಾರಿ ಚುರುಕುಗೊಳಿಸಲು ಮುಂದಾಗಬೇಕು.
- ಸಿಂ.ಲಿಂ.ನಾಗರಾಜು,
ವೀಳ್ಯದೆಲೆ ಬೆಳೆಗಾರ.
-ಸು.ನಾ.ನಂದಕುಮಾರ್