ಸಂಸದ ಡಿ.ಕೆ. ಸುರೇಶ್‌ಗೆ ರೇಲ್ವೆ ಪ್ರಯಾಣಿಕರ ವೇದಿಕೆ ಅಭಿನಂದನೆ
ಚನ್ನಪಟ್ಟಣ: ಎಲೇಕೇರಿ ರೇಲ್ವೆ ಗೇಟ್ ಸಮಸ್ಯೆ ಬಗ್ಗೆ ಕೇಂದ್ರ ರೇಲ್ವೆ ಸಚಿವರ ಗಮನ ಸೆಳೆಯುವ ಮೂಲಕ ಈ ಭಾಗದ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿರುವ ಸಂಸದ ಡಿ.ಕೆ.ಸುರೇಶ್‌ಗೆ ರೇಲ್ವೆ ಪ್ರಯಾಣಿಕರ ವೇದಿಕೆ ಪ್ರಧಾನ ಕಾರ್ಯದರ್ಶಿ ದೇವರಹೊಸಹಳ್ಳಿ ಬಸವರಾಜು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೇಲ್ವೆಗೇಟ್‌ಗೆ ಪರ್ಯಾಯವಾಗಿ ಕೆಳಸೇತುವೆ ನಿರ್ಮಾಣ ಮಾಡಿದ್ದೇ ಆದಲ್ಲಿ ಕೆಲ ಸಮಸ್ಯೆಗಳಿಗೆ ಕಾರಣವಾಗಲಿದ್ದು ಇದಕ್ಕೆ ಪರ್ಯಾಯವಾಗಿ ಮೇಲುಸೇತುವೆ ನಿರ್ಮಾಣ ಮಾಡಲು ಸಂಸದರು ರೇಲ್ವೆ ಇಲಾಖೆಯ ಗಮನ ಸೆಳೆಯ ಬೇಕೆಂದು ಸಲಹೆ ಇತ್ತಿದ್ದಾರೆ.
ಅತಿಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಮಂಗಳಾ ಎಕ್ಸ್‌ಪ್ರೆಸ್ ಮತ್ತು ತಾಂಜಾವೂರು ಎಕ್ಸ್‌ಪ್ರೆಸ್ ರೈಲುಗಾಡಿಗಳ ನಿಲುಗಡೆಗೆ ಸಂಬಂಧಿಸಿದಂತೆ ಸಂಸದರು ಮುಂದಾಗಬೇಕು, ಬೆಳಗಿನ ಜಾವ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದು ಈ ಕಾರ್ಮಿಕರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 7 ರಿಂದ 9 ಗಂಟೆಯ ವೇಳೆಯಲ್ಲಿ ಹೆಚ್ಚಿನ ರೈಲು ಗಾಡಿಗಳು ಈ ಮಾರ್ಗದಲ್ಲಿ ಸಂಚರಿಸುವಂತೆ ನೋಡಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.