ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಶಾಸಕ ಬಾಲಕೃಷ್ಣ ಶಂಕುಸ್ಥಾಪನೆ
ಮಾಗಡಿ: ತಾಲೂಕಿಗೆ 13 ಹೈಟೆಕ್ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ, ಅಂದಾಜು ರು.1.50 ಕೋಟಿ ಮಂಜೂರಾಗಿದ್ದು ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು. ಅವರು ತಾಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ನೂತನ ಹೈಟೆಕ್ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರು. 1.95 ಲಕ್ಷ ವೆಚ್ಚದಲ್ಲಿ ತಲಾ ಹೈಟೆಕ್ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲಾಗುವುದು. ಇಲ್ಲಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಪೂರಕವಾದ ವಾತಾವರಣ ನಿರ್ಮಿಸಲಾಗುವುದು ಎಂದರು.
ಯೋಜನೆ ದುರುಪಯೋಗವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಗುತ್ತಿಗೆದಾರರು ಸಹ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಬೇಕು.ಕಟ್ಟಡದ ಗುಣಮಟ್ಟ ಕಾಪಾಡುವಂತೆ ಎಚ್ಚರಿಕೆ ಸಹ ನೀಡಲಾಗಿದೆ. ಕಾರ್ಯಕರ್ತೆರು ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳ ವಿತರಣೆ ಮಾಡುವಂತೆ ಈಗಾಗಲೇ ಎಲ್ಲಾ ಅಂಗವಾಡಿ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಹೈಟೆಕ್ ಅಂಗನವಾಡಿ ಕೇಂದ್ರಗಳು ಹೆಚ್ಚೆಚ್ಚು ಮಕ್ಕಳನ್ನು ಆಕರ್ಷಿಸಲು ವಿಶೇಷ ಕಾರ್ಯಕ್ರಮ ರೂಪಿಸಲು ಚಿಂತಿಸಲಾಗಿದೆ. ಮಕ್ಕಳು ದೇವರಿಗೆ ಸಮ, ಮಕ್ಕಳಿಗೆ ವಂಚನೆ ಸಲ್ಲದು, ಈ ಬಗ್ಗೆ ದೂರುಗಳು ಬಂದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು. ತಾಪಂ ಅಧ್ಯಕ್ಷ ಜಿ. ಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಕಾಂತರಾಜು, ಸಾತನೂರು ಗ್ರಾಪಂ ಅಧ್ಯಕ್ಷ ಮಂಜುನಾಥ್, ಶಾಂತರಾಜು, ಶ್ರೀನಿವಾಸ್, ಗುತ್ತಿಗೆದಾರ ಯತಿರಾಜ್, ಮೂರ್ತಿ, ವೆಂಕಟೇಶ್, ಗಂಗಾಧರ್, ನಾಗರಾಜು ಜಯರಾಮು ಇತರರು ಇದ್ದರು.