ಕಲುಷಿತ ಆಹಾರ: 50 ಮಕ್ಕಳು ಅಸ್ವಸ್ಥ
ಚನ್ನಪಟ್ಟಣ: ಕಲುಷಿತ ಆಹಾರ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ಗೊಂಡಿರುವ ಘಟನೆ ತಾಲೂಕಿನ ಎಲೇಕೇರಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿಶಾಲೆಯಲ್ಲಿ ಸಂಭವಿಸಿದೆ.
ಗುರುವಾರ ರಾತ್ರಿ ವಸತಿ ನಿಲಯದಲ್ಲಿ ಮಾಡಿದ್ದ ಹೆಸರುಕಾಳು ಸಾರು ಮತ್ತು ಅನ್ನ ತಿಂದು ಮಲಗಿದ ಕೆಲ ಮಕ್ಕಳಿಗೆ ರಾತ್ರಿಯೇ ವಾಂತಿ, ಬೇಧಿ, ಹೊಟ್ಟೆನೋವು ಕಾಣಿಸಿ ಕೊಂಡಿದೆ. ರಾತ್ರಿಯೇ ನಿಲಯದಲ್ಲಿರುವ ಆರೋಗ್ಯ ಶುಶ್ರೂಷಕಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರಾದರೂ ಮಕ್ಕಳ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ.
ಬೆಳಗಿನ ಜಾವದ ವೇಳೆ ಮಕ್ಕಳು ತೀವ್ರ ನಿತ್ರಾಣ ಗೊಂಡ ಕಾರಣ ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು. ಆರೋಗ್ಯದಲ್ಲಿ ಸುಧಾರಣೆ ಕಂಡ ಕೆಲ ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, ಆರೋಗ್ಯದಲ್ಲಿ ಸುಧಾರಣೆ ಕಾಣದ ಕೆಲ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಿ ಕೊಂಡು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಲುಷಿತ ನೀರು ಕಾರಣ: ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜು ಆಹಾರ ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಬಂದ ಬಳಿಕ ಮಕ್ಕಳ ಆರೋಗ್ಯ ಕೆಡಲು ಕಾರಣ ವೇನೆಂದು ತಿಳಿಸಲಾಗುವುದೆಂದರು.
ವಸತಿ ಶಾಲೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಕೊಳವೆಬಾವಿ ಸಾಕಷ್ಟು ಕಲುಷಿತ ಗೊಂಡಿದ್ದು ಈ ನೀರಿನಿಂದ ಮಕ್ಕಳು ಅಸ್ವಸ್ಥರಾಗಿರಬಹುದೆಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಪ್ರಯೋಗಾಲಯದಿಂದ ವರದಿ ಬಂದ ಬಳಿಕ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದರು.
ಡಿಎಚ್ಒ ಭೇಟಿ: ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಘುನಾಥ್ ಮಕ್ಕಳ ಆರೋಗ್ಯ ವಿಚಾರಿಸಿದರು. ಘಟನೆಯ ಬಗ್ಗೆ ಪರಿಶೀಲಿಸಿ ಸೂಕ್ತ ಕಾರಣ ತಿಳಿದು ಕೊಳ್ಳುವಂತೆ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.