ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

Vishwanath S
Updated On : 21 Dec 2013, 1:50 am

ದೊಡ್ಡಬಳ್ಳಾಪುರ: ತಾಲೂಕಿನ ಪಾಲನಜೋಗಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತ ಸೈಕಲ್‌ಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಕೊಡಿಗೇಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಕಾಶ್‌ರಾವ್ ಸೈಕಲ್ ವಿತರಣೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು,  ಸರ್ಕಾರದ ಮಹತ್ವದ ಯೋಜನೆ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುವ ಮೂಲಕ ಪಾಠ ಪ್ರವಚನಗಳಲ್ಲಿ ತೊಡಗಬೇಕು.
ದೇಶದಲ್ಲಿ ಅಗುವತ್ತಿರುವ ಅಭಿವೃದ್ಧಿ ಯೋಜನೆಗಳು ಗಣನೀಯ  ಆದರೆ ಜನರಿಗೆ ತಲುಪುತ್ತಿರುವುದು ಕೇವಲ ಕೆಲವೇ ಎಂಬುದು ಆತಂಕಕಾರಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು, ಗ್ರಾ.ಪಂ ಸದಸ್ಯ ಶ್ರೀನಿವಾಸಮೂರ್ತಿ, ಕೃಷ್ಣಾನಾಯಕ್, ಲಕ್ಷ್ಮಮ್ಮ, ಮುಖ್ಯ ಶಿಕ್ಷಕಿ ಜಗದಾಂಬ, ಸಿಆರ್‌ಪಿ ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.ನೆಲಮಂಗಲ: ನಾಳೆ ರಾಜ್ಯೋತ್ಸವ
ನೆಲಮಂಗಲ: ತಾಲೂಕು ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಡಿ.22ರಂದು ಬೆಳಗ್ಗೆ 10-30ಕ್ಕೆ ಪಟ್ಟಣದ ಪವಾಡ ಬಸವಣ್ಣ ದೇವರ ಮಠದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಎರಡನೇ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಬೆಳಗ್ಗೆ 9-00 ಗಂಟೆಗೆ ಈಶ್ವರಪ್ಪ ಮತ್ತು ತಂಡದವರಿಂದ ವೀರಗಾಸೆ ನೃತ್ಯದೊಂದಿಗೆ ಭುವನೇಶ್ವರಿ ಮೆರವಣಿಗೆ ಕವಾಡಿ ಮಠದಿಂದ ಪವಾಡ ಬಸವಣ್ಣ ದೇವರ ಮಠದವರೆಗೆ ಏರ್ಪಡಿಸಲಾಗಿದೆ. ಪವಾಡ ಬಸವಣ್ಣ ದೇವರ ಮಠದ ಅಧ್ಯಕ್ಷರಾದ ಸಿದ್ದಲಿಂಗಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ ಧ್ವಜಾರೋಹಣವನ್ನು ನೆರವೇರಿಸಲಿದ್ದು, ಉದ್ಘಾಟನೆಯನ್ನು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಉದ್ಘಾಟಿಸಲಿದ್ದು, ತಾಲೂಕು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆ.ವಿ.ರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಾಲೂಕು ರಂಗಭೂಮಿ ಕಲಾವಿರದ ಸಂಘದ ಗೌರವಾಧ್ಯಕ್ಷ ಬಿ.ಆರ್.ತಿಮ್ಮರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
30 ರಂದು ಮಳಿಗೆ ಹರಾಜು
ಆನೇಕಲ್ಲು: ಪಟ್ಟಣದ ತರಕಾರಿ ಮಾರುಕಟ್ಟೆ ಬಳಿ ಇರುವ ವ್ಯವಸಾಯ ಸೇವಾ ಸಹಕಾರ ಸಂಘವು ಅಂಗಡಿ ಮಳಿಗೆ ನಿರ್ಮಿಸಿದ್ದು, ಬಾಡಿಗೆ ಆಧಾರದ ಮೇಲೆ ಹರಾಜು ನಡೆಸಲಾಗುವುದು.
ಆಸಕ್ತರು ಸಂಘವು ರೂಪಿಸಿರುವ ನಿಯಮಗಳಿಗನುಸಾರವಾಗಿ ಹರಾಜಿನಲ್ಲಿ ಭಾಗವಹಿಸಬಹುದೆಂದು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪಿ. ಜಯರಾಮಯ್ಯ ತಿಳಿಸಿದ್ದಾರೆ.
ಡಿ.30 ರಂದು ಹರಾಜು ಪ್ರಕ್ರಿಯೆ ಬೆಳಗ್ಗೆ 11 ಗಂಟೆಗೆ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆಯಲಿದ್ದು ಠೇವಣಿ ಹಣ ನೀಡಿ ಭಾಗವಹಿಸಲು ಅವಕಾಶವಿದೆ ಎಂದು ಸಿಇಒ ವೆಂಕಟಮಾರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುದ್ಧ ಕುಡಿವ ನೀರು ಘಟಕಕ್ಕೆ ಶಂಕು
ಮಾಗಡಿ: ಪ್ರಧಾನಮಂತ್ರಿ ಕುಡಿಯುವ ಶುದ್ಧ ನೀರನ್ನೇ ಸಾಮಾನ್ಯ ನಾಗರಿಕರು ಕುಡಿಯಬೇಕು ಎಂಬ ಮಹತ್ವಕಾಂಕ್ಷೆಯಿಂದಲೇ ಡಿಕೆಸಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಫಾಪಿಸಿ, ಶುದ್ಧ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ರಂಗಹನುಮಯ್ಯ ತಿಳಿಸಿದರು.  
ಅವರು ಇಲ್ಲಿನ ತಿರುಮಲೆ 3ನೇ ವಾರ್ಡ್‌ನ  ಎಸ್ಸಿ ಕಾಲೋನಿಯಲ್ಲಿ ಡಿಕೆಸಿ ಚಾರಿಟಬಲ್ ಟ್ರಸ್ಟ್ ವತಿಯಿಂದ  ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಲೋಕಸಭಾ ಸದಸ್ಯ ಡಿ.ಕೆ. ಸುರೇಶ್  ಚುನಾವಣೆ ವೇಳೆ ನೀಡಿದ ಭರವಸೆಯಂತೆ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪುರಜನರಿಗೆ ಶುದ್ಧ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮತದಾರರ ಋಣ ತೀರಿಸಲಾಗುತ್ತಿದೆ ಎಂದರಲ್ಲದೆ ನಾಗರಿಕರು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಖಂಡರಾದ ಮಂಗಳರಂಗಯ್ಯ, ಮುದ್ದಮಾಗಡಿ, ಕಾಳರಂಗಯ್ಯ, ವೆಂಕಟಪ್ಪ, ಚಿಕ್ಕಣ್ಣ, ಗೋಪಾಲ, ಲೋಕೇಶ್, ಮೂರ್ತಿ, ವಜ್ರಿ, ರಾಜು, ರಹಮತ್, ಮೋಹನ್, ಕುಮಾರ್, ಇತರರು ಇದ್ದರು.
ಹೋಮಿಯೋಪತಿ ಶಿಬಿರ ನಾಳೆ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ ಸೇವಾ ಪ್ರತಿಷ್ಠಾನ ಹಾಗೂ ಯಲಹಂಕ ಹೋಮಿಯೋ ಕೇರ್ ಕ್ಲಿನಿಕ್ ಸಂಯುಕ್ತ ಆಶ್ರಯದಲ್ಲಿ 100ನೇ ಉಚಿತ ಹೋಮಿಯೋಪತಿ ಶಿಬಿರ ಇಲ್ಲಿನ ಲಯನ್ಸ್  ಸೇವಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಆರ್.ನಾಗರಾಜಯ್ಯ ತಿಳಿಸಿದ್ದಾರೆ. ಮಾಜಿ ಪುರಸಭಾ ಸದಸ್ಯ ಶಿಬಿರ ಉದ್ಘಾಟಿಸಲಿದ್ದು ಡಾ. ಕೆ.ವೈ. ರಾಮಚಂದ್ರನ್, ವಿ.ವೆಂಕಟೇಶ್ ಮತ್ತಿತರೆ ಗಣ್ಯರು ಕಾರ್ಯಕ್ರಮದಲ್ಲಿ  ಭಾಗಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಕುಂದು-ಕೊರತೆ ಸಭೆ
ನೆಲಮಂಗಲ: ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಕುಂದು ಕೊರತೆಗಳ ಸಭೆಯನ್ನು ಡಿ.23ರಂದು ಬೆಳಗ್ಗೆ 11-00 ಗಂಟೆಗೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ  ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಲೆ ಪಾತಕಿಗೆ  ಜೀವಾವಧಿ ಶಿಕ್ಷೆ
ರಾಮನಗರ: ವರದಕ್ಷಿಣೆ ತರದ ಪತ್ನಿಯನ್ನು ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ್ದ ಪತಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಸುರೇಶ್ ಶುಕ್ರವಾರ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ  ಆದೇಶ ಹೊರಡಿಸಿದ್ದಾರೆ. ರಾಮನಗರ ನಗರಸಭೆ ವ್ಯಾಪ್ತಿಯ ಕುಮುಂದನ್ ಮೊಹಲ್ಲಾ ನಿವಾಸಿ ರುಹುಲ್ಲಾ ಜೀವಾವಧಿ ಶಿಕ್ಷೆಗೊಳಗಾಗಿರುವ ಕೊಲೆ ಪಾತಕಿ. ಈತ 8ನೇ ಮಾರ್ಚ್ 2011ರಂದು ಪತ್ನಿ ಶಬೀಹಾ(21) ಎಂಬುವರ ಮೇಲೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆಗೈದಿದ್ದ. ಈ ಸಂಬಂಧ ಮೃತಳ ತಂದೆ ಪ್ಯಾರೇಜಾನ್ನ್‌ಗರದ ಪುರ ಪೊಲೀಸ್ ಠಾಣೆಯಲ್ಲಿ ಮೃತಳ ಪತಿ ರುಹುಲ್ಲಾ ಸೇರಿದಂತೆ ಈತನ ತಾಯಿ ಶರದುನ್ನೀಸಾ, ಅಕ್ಕ ಸಮೀಮುನ್ನಿಸಾ, ತಂಗಿ ತಬಾ ಹಾಗೂ ಬಾವ ಮುಜೀಬ್ ಅಹಮದ್ ವಿರುದ್ಧ ದೂರು ದಾಖಲಿಸಿದ್ದರು.  29 ಸಾಕ್ಷಿದಾರರ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ರುಹುಲ್ಲಾ ತಪ್ಪಿತಸ್ಥ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆಯ ಜತೆಗೆ 10 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಮತ್ತೊಂದು ವರ್ಷ ಸಾದಾ ಸಜೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಉಳಿದ ನಾಲ್ಕು ಮಂದಿಯನ್ನು ಆರೋಪ ಮುಕ್ತಗೊಳಿಸಿ ಖುಲಾಸೆಗೊಳಿಸಿದೆ.  ಆರೋಪಿ ವಿರುದ್ಧ ಸರ್ಕಾರಿ ವಕೀಲ ಬಿ.ದಿನಕರ್ ವಾದ ಮಂಡಿಸಿದ್ದರು.
ನಕಲಿ ಅಂಕಪಟ್ಟಿ: ಉರ್ದು ಶಿಕ್ಷಕಿ ಸೆರೆ
ಚನ್ನಪಟ್ಟಣ: ನಕಲಿ ಅಂಕಪಟ್ಟಿ ಸಲ್ಲಿಸಿ ಸರ್ಕಾರಿ ಶಾಲಾಶಿಕ್ಷಕಿಯಾಗಿ ಸೇರಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಇಲ್ಲಿನ ಪೂರ್ವಠಾಣೆ ಪೊಲೀಸರು ಸಫಲ ಗೊಂಡಿದ್ದಾರೆ. ಪಟ್ಟಣದ ಹಳೆಡೇರಾ ಶಾಲೆಯ ಉರ್ದು ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದ ಕೆ.ಝಕಿಯಾ(40) ಬಂಧಿತ ವ್ಯಕ್ತಿಯಾಗಿದ್ದು, ಕಳೆದ ಎರಡೂವರೆ ವರ್ಷದಿಂದ ತಲೆ ಮರೆಸಿ ಕೊಂಡಿದ್ದ ಈಕೆಯನ್ನು ಬೆಂಗಳೂರಿನ ಗುರುವಪ್ಪನ ಪಾಳ್ಯದಲ್ಲಿ ಪೂರ್ವ ಠಾಣೆ ಪಿಎಸ್‌ಐ ಶಿವರಾಜು ನೇತೃತ್ವದ ತಂಡ ಬಂಧಿಸುವಲ್ಲಿ ಸಫಲ ಗೊಂಡಿದೆ.
ಘಟನೆಯ ಹಿನ್ನೆಲೆ: ಕೋಲಾರ ಮೂಲದ ಝಕಿಯಾ 2007 ರಲ್ಲಿ ತಾಲೂಕಿನ ಒಲ್ಡ್ ಡೇರಾ ಶಾಲೆಯ ಉರ್ದು ಶಿಕ್ಷಕಿಯಾಗಿ ನೇಮಕ ಗೊಂಡಿದ್ದರು. ಬಳಿಕ ಇವರ ಅಂಕಪಟ್ಟಿ ಪರಿಶೀಲನೆಗೆ ಶಿಕ್ಷಣ ಇಲಾಖೆ ಪಿಯು ಬೋರ್ಡ್ ಗೆ ಕಳುಹಿಸಿದಾಗ 2010ರಲ್ಲಿ  ಇವರು ನಕಲಿ ಅಂಕಪಟ್ಟಿ ಸಲ್ಲಿಸಿರುವ ವಿಷಯ ತಿಳಿದು ಬಂದಿದೆ. ಬಳಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳು 2011ರಲ್ಲಿ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕ್ರಮಿನಲ್ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಝಕಿಯಾ ತಲೆ ಮರೆಸಿ ಕೊಂಡಿದ್ದರು. ಶುಕ್ರವಾರ ಪೂರ್ವ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement