ವಿಷ ಸೇವಿಸಿ ಕುಟುಂಬದ ಮೂವರ ಆತ್ಮಹತ್ಯೆ
ಸೂಲಿಬೆಲೆ: ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹಲಸಹಳ್ಳಿ ಗೇಟ್ ಬಳಿ ಕಾರಿನಲ್ಲಿಯೇ ವಿಷ ಸೇವಿಸಿ ಮೂವರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ರವಿ (45), ಈತನ ಪತ್ನಿ ಕಲ್ಪನಾ(38), ಹಾಗೂ ಮಗ ನಿಕೇಶ್(17) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಹೊಸಕೋಟೆಗೆ ಸಮೀಪದಲ್ಲಿರುವ ಕೋಲಾರ ರಸ್ತೆ ಮಾರ್ಗದಲ್ಲಿ ಬರುವ ಗೋಟ್ಟಿಪುರ-ಹಲಸಹಳ್ಳಿ ಗೇ ಟ್ ಸನಿಹದಲ್ಲಿ ನ್ಯಾನೋ ಕಾರೊಂದು ರಸ್ತೆ ಬದಿ ಅನುಮಾನ್ಪಾದವಾಗಿ ನಿಂತಿತ್ತು.
ಸ್ಥಳೀಯರು ಇದನ್ನು ಗಮನಿಸಿದಾಗ ಕಾರಿನಲ್ಲಿ ಮೂವರು ಸಾವನ್ನಪ್ಪಿರುವ ಸ್ಥಿತಿಯಲ್ಲಿರುವುದನ್ನು ಕಂಡು ತಕ್ಷಣ ಹೊಸಕೋಟೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ನ್ಯಾನೋ ಕಾರಿನ ಒಳಗಡೆಯಿದ್ದ ವ್ಯಕ್ತಿಗಳನ್ನು ಪರಿಶೀಲನೆ ಮಾಡಿದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ.
ಕೆ.ಆರ್. ಪುರ ಬಳಿಯ ದ್ಯಾವಸಂದ್ರ ನಿವಾಸಿಗಳಾದ ರವಿ, ಈತನ ಪತ್ನಿ ಕಲ್ಪನಾ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಕೆ.ಆರ್. ಪುರ ಕಡೆಯಿಂದ ಕಾರಿನಲ್ಲಿ ಹೊಸಕೋಟೆಯತ್ತ ಹಾದು ಹೋಗಿರುವುದು ಹೊಸಕೋಟೆ ಬಳಿ ಕೋಡಿಯಲ್ಲಿನ ಟೋಲ್ಗೇಟ್ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ಇಲ್ಲಿಂದ ಕೆಲವೇ ಕಿಮೀ ಅಂತರದಲ್ಲಿರುವ ಗೋಟ್ಟಿಪುರ-ಹಲಸಹಳ್ಳಿ ಬಳಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ತಂಪು ಪಾನೀಯಕ್ಕೆ ಮೂವರು ವಿಷ ಬೆರೆಸಿಕೊಂಡು ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಘಟನೆ 5 ಗಂಟೆ ಒಳಗೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೂಲತಃ ತಮಿಳುನಾಡಿನ ಈ ಕುಟುಂಬದವರು ಸಾವಿಗೂ ಮುನ್ನ ಪತ್ರ ಬರೆದಿಟ್ಟಿರುವುದು ಪತ್ತೆಯಾಗಿದೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.
ಪ್ರಕರಣ ದಾಖಲಿಸಿಕೊಂಡ ಹೊಸಕೋಟೆ ಪೊಲೀಸರು ಶವಗಳನ್ನು ಎಂವಿಜೆ ಆಸ್ಪತ್ರೆಯಲ್ಲಿ ಇಟ್ಟಿದ್ದಾರೆ. ಘಟನ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.