ಗ್ರಾಪಂ ನಿರ್ಲಕ್ಷ್ಯಕ್ಕೆ ನಿದರ್ಶನ ಸಾಕೇ?
ಮಾಗಡಿ ತಾಲೂಕಿನ ಕೆಂಚನಹಳ್ಳಿ ಬಳಿ ಕುಡಿಯುವ ನೀರಿನ ತೊಂಬೆ ಟ್ಯಾಂಕ್ ಮೇಲೆ ಹಸಿರು ಬಳ್ಳಿ ಬೆಳೆದಿರುವುದು ನೋಡಿದರೆ ಸಾಕು, ಅಲ್ಲಿನ ಪಂಚಾಯ್ತಿಗೆ ಎಷ್ಟರ ಮಟ್ಟಿಗೆ ಜನಪರ ಕಾಳಜಿ ಇದೆ ಎನ್ನುವುದು ಸಾಬೀತಾಗುತ್ತದೆ.
ಈ ಮಿನಿ ಟ್ಯಾಂಕ್ನಿಂದಲೇ ನಿತ್ಯ ಮನೆಗಳಿಗೆ ಮಹಿಳೆಯರು ನೀರು ಕೊಂಡೊಯ್ಯುತ್ತಿರುವುದು. ಟ್ಯಾಂಕ್ ಮೇಲೆ ಬಳ್ಳಿ, ಕೆಳಗೆ ಗಿಡಗೆಂಟಿಗಳು ಬೆಳೆದು ನಿಂತಿವೆ. ಟ್ಯಾಂಕ್ ಸುತ್ತಲು ಅನೈರ್ಮಲ್ಯ ತಾಂಡವಾಡುತ್ತಿದೆ.
ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಈ ಟ್ಯಾಂಕ್ ಆವರಣವು ಹಾವು, ಚೇಳು ವಿಷಜಂತುಗಳ ಆವಾಸ
ಸ್ಥಾನವಾಗಿದೆ. ನೈರ್ಮಲ್ಯ, ಪರಿಸರದ ಬಗ್ಗೆ ತೋರಿಕೆಗೆ ಕಾಳಜಿ ವಹಿಸುವ ಸ್ಥಳೀಯ ಸಂಸ್ಥೆಗಳು ಜನರ ಜೀವದ ಜತೆ ಹೀಗೆ ಚೆಲ್ಲಾಟವಾಡುವುದು ಎಷ್ಟರಮಟ್ಟಿಗೆ ಸರಿ? ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಸಾಂಕ್ರಾಮಿಕ ರೋಗ ಭೀತಿಯೂ ಹೆಚ್ಚಾಗಿದೆ. ಹೀಗಾಗಿ ಗ್ರಾ.ಪಂ. ಆಡಳಿತವು ಅನೈರ್ಮಲ್ಯ ಕೊನೆಗಾಣಿಸಲು ತಕ್ಷಣ ಮುಂದಾಗಬೇಕು. ಈ ಬಗ್ಗೆ ತಾ.ಪಂ. ಸಹಿತ ಮೇಲಧಿಕಾರಿಗಳು ಗಮನ ಹರಿಸಬೇಕು.
ಮಹಾಲಕ್ಷ್ಮೀ, ಕೆಂಚನಹಳ್ಳಿ.
ಕುವೆಂಪು ಪುತ್ಥಳಿ ನಿರ್ಲಕ್ಷ್ಯ
ಬೊಂಬೆಯನಾಡು ಚನ್ನಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಮಗ್ಗುಲಲ್ಲಿ ಹೆದ್ದಾರಿಯಲ್ಲಿ ಸ್ಥಾಪಿಸಿರುವ ರಾಷ್ಟ್ರಕವಿ ಕುವೆಂಪು ಪುತ್ಥಳಿಗೆ ರಕ್ಷಣೆಯೇ ಇಲ್ಲವಾಗಿದ್ದು, ವಿಶ್ವಮಾನವ ಬಿಸಿಲಲ್ಲಿ ಒಣಗುತ್ತಾ ಮಳೆಯಲ್ಲಿ ನೆನೆಯುತ್ತಾ ನಿಂತಿದೆ. ಇಷ್ಟಲ್ಲದೆ ಪುತ್ಥಳಿಯನ್ನು ಧೂಳು ಆವರಿಸಿಕೊಂಡಿದೆ.
2003 ರಲ್ಲಿ ತಾಲೂಕು ಕನ್ನಡ ಮಿತ್ರ ಸಂಘದ ವತಿಯಿಂದ ಕುವೆಂಪು ಪುತ್ಥಳಿಯನ್ನು ಅನಾವರಣ ಗೊಳಿಸಲಾಯಿತು. ನಂತರ ಬೆಂ-ಮೈ ಹೆದ್ದಾರಿ ಎತ್ತರಗೊಂಡ ಹಿನ್ನೆಲೆಯಲ್ಲಿ ಪುತ್ಥಳಿ ಸಾಕಷ್ಟು ತಗ್ಗು ಪ್ರದೇಶಕ್ಕೆ ಇಳಿದಂತಾಗಿದೆ. ಪುತ್ಥಳಿಯ ಕೇಳ ಭಾಗದಲ್ಲಿ ಬರೆಯಲಾಗಿರುವ ವಿಶ್ವಮಾನವ ಗೀತೆ ಮತ್ತು ಸಂದೇಶ ಅದಾಗಲೇ ಮುಚ್ಚಿ ಹೋಗಿದೆ.
ಹೆದ್ದಾರಿ ಬದಿಯಲ್ಲಿ ಕೇವಲ ಪುತ್ಥಳಿಯನ್ನು ಮಾತ್ರ ನಿಲ್ಲಿಸಲಾಗಿದ್ದು, ಕುವೆಂಪು ಜನ್ಮದಿನ ಮತ್ತು ಕನ್ನಡ ರಾಜ್ಯೋತ್ಸ ಸೇರಿದಂತೆ ವಿಶೇಷ ದಿನಗಳಲ್ಲಿ ಮಾತ್ರ ಇಲ್ಲಿಗೊಂದು ಹಾರ ಹಾಕುತ್ತಾ ಕಾಳಜಿ ತೋರುವ ಕನ್ನಡಪ್ರೇಮಿಗಳು ನಂತರದ ದಿನಗಳಲ್ಲಿ ಇತ್ತ ಸುಳಿಯುವುದೇ ಇಲ್ಲ. ಬಿಸಿಲು ಮಳೆಯಿಂದಾಗಿ ಪುತ್ಥಳಿ ಹಾಳಾಗುತ್ತಿದೆ. ಹೆದ್ದಾರಿ ಬದಿಯಲ್ಲಿದ್ದ ಈ ಪುತ್ಥಳಿಗೆ ಹಿಂದೊಮ್ಮೆ ವಾಹನ ಡಿಕ್ಕಿ ಹೊಡೆದು, ಸುತ್ತಲೂ ಅಳವಡಿಸಿದ್ದ ಕಬ್ಬಿಣದ ಗ್ರಿಲ್ಗಳು ಹಾಳಾಗಿವೆ. ಇನ್ನಾದರೂ ತಾಲೂಕಿನ ಕನ್ನಡ ಪರ ಸಂಘಟನೆಗಳು, ನಗರಸಭೆ ಇತ್ತ ಗಮನಹರಿಸಿ ಕುವೆಂಪು ಪುತ್ಥಳಿಗೆ ಸೂಕ್ತ ವ್ಯವಸ್ಥೆ ಮಾಡೀತೆ ಎಂದು ಕಾಯ್ದು ನೋಡಬೇಕಿದೆ.
ಎಂ.ಆರ್.ಅಶೋಕ್, ಕೋಟೆ, ಚನ್ನಪಟ್ಟಣ.
ಧೂಳಿಗೆ ಕೊನೆ ಎಂದಾಗುವುದೋ?
ಚನ್ನಪಟ್ಟಣವು ಹೆಸರಿಗಷ್ಟೇ ಚೆಂದದ ಪಟ್ಟಣ. ಈ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವುದು ಅಷ್ಟಕ್ಕಷ್ಟೇ. ಈ ನಗರದಲ್ಲಿ ಧೂಳು ಕುಡಿದು ಅದೆಷ್ಟೋ ಮಂದಿ ಅಸ್ತಮಾ, ಅಲರ್ಜಿಯಂತಹ ಕಾಯಿಲೆಯಿಂದ ನರಳಾಡುತ್ತಿದ್ದಾರೆ.
ನಗರದ ಯಾವ ರಸ್ತೆಯಲ್ಲಿ ಹೋದರೂ ಮಂಡಿಯುದ್ದ ಗುಂಡಿಗಳನ್ನೇ ಕಾಣಬಹುದಾಗಿದೆ. ದ್ವಿಕಚ್ರ ವಾಹನವಷ್ಟೇ ಸಾಗಿದರೂ ಧೂಳು ಆವರಿಸಿಕೊಳ್ಳುತ್ತಿರುತ್ತದೆ. ಮಾಸ್ಕ್ ಇಲ್ಲದೆ ಇಲ್ಲಿ ಪಾದಚಾರಿಗಳು, ವಾಹನ ಸವಾರರು ಸಾಗಿದರೆ ಧೂಳು ಕುಡಿಯಲೇಬೇಕು.
ಸಾಕಷ್ಟು ಜನರು ಧೂಳು ಸೇವಿಸಿ ಚಿಕಿತ್ಸೆಗಾಗಿ ವೈದ್ಯರಿಗೆ ಹಣ ಪಾವತಿಸಿಯೇ ಹೈರಾಣಾಗಿದ್ದಾರೆ. ರಸ್ತೆ ಅದ್ವಾನಕ್ಕೆ ಕೊನೆ ಯಾವಾಗ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಕೇಳಿದರೆ ಯುಜಿಡಿ ಕಾಮಗಾರಿ ಮುಗಿಯಲಿ ಎನ್ನುತ್ತಾರೆ.
ಏಳೆಂಟು ವರ್ಷದಿಂದ ಯುಜಿಡಿ ಕಾಮಗಾರಿ ಗೋಳು ಮುಗಿದೇ ಇಲ್ಲ. ರಸ್ತೆ ಸ್ಥಿತಿಯೂ ಸುಧಾರಿಸಿಲ್ಲ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಕೊನೆಗಾಣಿಸಿ ಜನಪರ ಕಾಳಜಿ ಮೆರೆಯಲಿ.
ಶಶಿ ರಾಮ್, ಚನ್ನಪಟ್ಟಣ.
ಸ್ಲ್ಯಾಬ್ ಅಳವಡಿಸಿ ನೈರ್ಮಲ್ಯ ಕಾಪಾಡಿ
ರಾಮನಗರದಲ್ಲಿ ಅದೆಷ್ಟೋ ಚರಂಡಿ, ಮೋರಿಗಳು ತೆರೆದುಕೊಂಡು ಸುತ್ತಮುತ್ತಲ ಪರಿಸರಕ್ಕೆ ಧಕ್ಕೆ ತಂದೊಡ್ಡಿವೆ. ಬಹುತೇಕ ಕಡೆ ಸ್ಲ್ಯಾಬ್ ಅವಳಡಿಸುವ ಗೋಜಿಗೆ ನಗರಸಭೆ ಅಧಿಕಾರಿಗಳು ಮುಂದಾಗಿಯೇ ಇಲ್ಲ.
ಅಲ್ಲಲ್ಲಿ ಕುಡಿಯುವ ನೀರಿನ ಪೈಪ್ಲೈನ್ಗಳು ಚರಂಡಿಯೊಳಗೆ ಇಲ್ಲವೇ ಪಕ್ಕದಲ್ಲೇ ಹಾದು ಹೋಗಿವೆ. ಅಧಿಕಾರಿಗಳ ಅಸಡ್ಡೆಯಿಂದಾಗಿ ಆಗಾಗ್ಗೆ ಜನರಿಗೆ ಮೋರಿಯ ಕೊಳಚೆ ನೀರು ಕುಡಿಯುವ ದೌರ್ಭಾಗ್ಯವೂ ಎದುರಾಗುತ್ತಿದೆ.
ಸಾಕಷ್ಟು ಮಂದಿಯು ತಮ್ಮ ಮನೆಗಳ ಶೌಚಾಲಯದ ಪೈಪುಗಳನ್ನು ಒಳ ಚರಂಡಿ ಬದಲು ಚರಂಡಿಗೇ ಸಂಪರ್ಕ ಕಲ್ಪಿಸಿದ್ದಾರೆ. ಈಗೆ ತೆರೆದ ಮೋರಿಯಲ್ಲಿ ಮಲ, ಮೂತ್ರವೇ ಹಾದು ಹೋಗುತ್ತಿದ್ದು, ಸುತ್ತಮುತ್ತಲ ನಿವಾಸಿಗಳು ಮೂಗು ಮುಚ್ಚಿಕೊಂಡು ವಾಸಿಸುತ್ತಿದ್ದಾರೆ.
ನಗರಸಭೆ ಆಡಳಿತವು ಇನ್ನಾದರೂ ಎಚ್ಚೆತ್ತುಕೊಂಡು ಎಲ್ಲ ಮೋರಿ, ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಸುವ ಮೂಲಕ ನೈರ್ಮಲ್ಯದ ಜತೆಗೆ ನಗರದ ಅಂದವನ್ನೂ ಕಾಪಾಡಬೇಕು. ಈ ದುರಂತ ಕೊನೆಯಾಗಬೇಕು.
ಶಶಿಕುಮಾರ್, ರಾಮನಗರ.