'ಭಾರತೀಯ ಭಾಷೆಗಳಲ್ಲೆಲ್ಲ್ಲ ಕನ್ನಡವೇ ಭಿನ್ನ'
ದೊಡ್ಡಬಳ್ಳಾಪುರ: ಕನ್ನಡ ಅತ್ಯಂತ ವೈಜ್ಞಾನಿಕತೆಯಿಂದ ರೂಪಿಸಲ್ಪಟ್ಟ ಭಾಷೆ. ಈ ನಿಟ್ಟಿನಲ್ಲಿ ಪದ ಸಂಪತ್ತು ಮತ್ತು ವೈವಿಧ್ಯತೆಯಲ್ಲಿ ಇತರ ಯಾವುದೇ ಭಾರತೀಯ ಭಾಷೆಗಳಿಗಿಂತ ಭಿನ್ನವಾಗಿದ್ದು, ಅನನ್ಯವಾಗಿ ನಿಲ್ಲುವ ಶಕ್ತಿ ಕನ್ನಡಕ್ಕಿದೆ ಎಂದು ಭಾಷಾ ವಿಜ್ಞಾನಿ ಕೈಪ ಶೇಷಾದ್ರಿ ಹೇಳಿದರು. ಇಲ್ಲಿನ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದ ಕೆಲ ಭಾಷೆಗಳಿಗಷ್ಟೆ ಕನ್ನಡದಷ್ಟು ಭಾಷಾ ಸೌಂದರ್ಯ ಮತ್ತು ವೈವಿಧ್ಯತೆ ಸಾಧ್ಯವಾಗಿದೆ ಎಂದ ಅವರು, ಅಕ್ಷರ ಶಾಸ್ತ್ರದಲ್ಲಿ ರೂಪಗೊಂಡಿರುವ ವೇದಗಳು, ಮಹಾಭಾರತ, ರಾಮಾಯಣಗಳು ಕನ್ನಡ ಮತ್ತು ತೆಲುಗು ಭಾಷೆಗಳ ಅಕ್ಷರಗಳಲ್ಲಿ ಕಾಣಸಿಗುತ್ತವೆ. ಹೀಗಾಗಿ ಈ ಎರಡೂ ಭಾಷೆಗಳು ಪರಿಪೂರ್ಣ ದ್ರಾವಿಡ ಭಾಷೆಗಳಾಗಿವೆ ಎಂದರು. ಕನ್ನಡ ಭಾಷೆಯ ಸಿರಿವಂತಿಕೆ ಕೇವಲ ವೈಭವೀಕರಣ ಅಲ್ಲ. ಅದೊಂದು ವೈಜ್ಞಾನಿಕ ಪ್ರಕ್ರಿಯೆ ಎಂದರು. ನ್ಯಾಯಾಧೀಶರಾದ ಕುಮಾರಸ್ವಾಮಿ, ನಾಗಿರೆಡ್ಡಿ, ಗಣಪತಿ ಪ್ರಶಾಂತಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಜನಾರ್ದನ್, ಎಂ.ಕೃಷ್ಣಮೂರ್ತಿ, ಬೈರೇಗೌಡ, ಖಜಾಂಚಿ ರೇಣುಕಾಮೂರ್ತಿ ಮತ್ತು ಸಂಘದ ಪದಾಧಿಕಾರಿಗಳು, ವಕೀಲರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ರೈತ ದಿನಾಚರಣೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಿ.23 ರಂದು ರೈತರ ದಿನಾಚರಣೆ ಆಯೋಜಿಸಿದ್ದು ಶಾಸಕರು ಹಾಗೂ ತಾಲೂಕಿನ ನಾಲ್ಕು ಹೋಬಳಿಗಳ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಮತ್ತು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನ ರೈತರು ತಪ್ಪದೆ ಭಾಗವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಿಕೋತ್ಸವ
ಸೂಲಿಬೆಲೆ: ಇಲ್ಲಿಗೆ ಸಮೀಪದ ಮಲ್ಲಿಮಾಕನಪುರ ಗ್ರಾಮದಲ್ಲಿ ಬೇಗೂರು ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಕ್ಲಸ್ಟರ್ ಸಂಪನ್ಮೂಲಧಿಕಾರಿ ಹರೀಶ್ ಮಾತನಾಡಿ, ಕಲಿಕೆ ಪ್ರತಿಯೊಂದು ಮಗುವಿನಲ್ಲಿ ಯಾವ ರೀತಿಯಾಗಿ ನಡೆದಿದೆ ಎಂಬುದನ್ನು ಸಾಮೂಹಿಕವಾಗಿ ಸ್ವರ್ಧೆಗಳ ಮೂಲಕ ನಡೆಸು ಕಲಿಕೋತ್ಸವ ಗ್ರಾಮೀಣ ಭಾಗದಲ್ಲಿರುವ ಮಕ್ಕಳಿಗೆ ಹೆಚ್ಚು ಸೂಕ್ತವಾಗಿದೆ ಎಂದರು.ಗ್ರಾಪಂ ಸದಸ್ಯೆ ವೀಣಾ ಶ್ರೀನಿವಾಸ್, ಎಸ್ಡಿಎಂಸಿ ಸದಸ್ಯ ಕೃಷ್ಣಪ್ಪ, ಶಿಕ್ಷಕ ವಾಜೀರಾಜ್, ಮುಖ್ಯ ಶಿಕ್ಷಕಿ ಭಾಗೀರತಮ್ಮ, ವಿದ್ಯಾಸಾಗರ್, ಅರುಣ್, ಸೇರಿದಂತೆ ಗ್ರಾಮದ ಹಲವರು ಭಾಗವಹಿಸಿದ್ದರು.