ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೃತ್ತ-ವೃತ್ತಗಳಲ್ಲೂ ಕಸದ ಹುತ್ತ!

Vishwanath S
Updated On : 23 Dec 2013, 1:06 am

ದೊಡ್ಡಬಳ್ಳಾಪುರ: ಇಲ್ಲಿನ ಬಹುತೇಕ ವೃತ್ತಗಳು ಕಸದ ತೊಟ್ಟಿಗಳಾಗಿವೆ. ಕಳೆದ ಕೆಲ ವರ್ಷಗಳ ಹಿಂದೆ ನಿರ್ಮಲ ನಗರ ಯೋಜನೆ ಬಂದಾಗ ಇತರ ನಗರಸಭೆಗಳಿಗೆ ಮಾದರಿ ಎಂಬ ಹಣೆಪಟ್ಟಿ ಪಡೆದಿದ್ದ ದೊಡ್ಡಬಳ್ಳಾಪುರದಲ್ಲೀಗ ಅಸಮರ್ಪಕ ಕಸ ನಿರ್ವಹಣೆ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದೆ.
ಇಲ್ಲಿನ ನಗರಸಭೆ ವ್ಯಾಪ್ತಿ 31 ವಾರ್ಡುಗಳ ವ್ಯಾಪ್ತಿಯಲ್ಲಿ ಬಹಳ ಕಡೆ ಜನ ಕಸ ತಂದು ಸುರಿಯಲು ಕಸದ ಡಬ್ಬಿಗಳೇ ಇಲ್ಲ. ಇಲ್ಲಿನ ಸೌಂದರ್ಯ ಮಹಲ್ ವೃತ್ತ ಊರಿನ ಅತ್ಯಂತ ಜನನಿಬಿಡ ಮತ್ತು ಹೆಚ್ಚಿನ ಟ್ರಾಫಿಕ್ ಹೊಂದಿರುವ ವೃತ್ತವಾಗಿದೆ. ಇಲ್ಲಿ ರಸ್ತೆ ಬದಿಯಲ್ಲೇ ರಾಶಿ ರಾಶಿ ಕಸ ತಂದು ಸುರಿಯಲಾಗುತ್ತಿದೆ. ಈ ಹಿಂದೆ ನಗರಸಭೆ ವತಿಯಿಂದ ಇಲ್ಲೊಂದು ಕಸ ಸಂಗ್ರಹ ತೊಟ್ಟಿ ಇಡಲಾಗಿತ್ತು. ಆದರೆ ಜನ ಆ ತೊಟ್ಟಿಯಿದ್ದರೂ ಹೊರಗೇ ಕಸ ಸುರಿಯುತ್ತಾರೆ ಎಂಬ ನೆಪವೊಡ್ಡಿ ಈಗ ತೊಟ್ಟಿ ಮಾಯವಾಗಿದೆ. ಆದರೆ ಜನ ಅಲ್ಲಿ ಕಸ ತಂದು ಸುರಿಯುವುದಂತೂ ನಿಂತಿಲ್ಲ. ಇದು ಸೃಷ್ಟಿಸಿರುವ ಸಮಸ್ಯೆಗಳು ಹಲವು. ಇದು ಇಲ್ಲಿನ ಜನರಿಗೆ ನಿತ್ಯ ನರಕವಾಗಿ ಪರಿಣಮಿಸಿದೆ.
ಪಶುಗಳ ಪಾಲಿಗೆ ನರಕ: ಇಲ್ಲಿ ಕಸದ ತೊಟ್ಟಿ ಇಲ್ಲದಿರುವುದು ಮತ್ತು ರಸ್ತೆ ಬದಿಯಲ್ಲೇ ಕಸ ತಂದು ಸುರಿಯುತ್ತಿರುವುದು ಅನೇಕ ಪ್ರಾಣಿಗಳ ಪಾಲಿಗೆ ನರಕ ಸೃಷ್ಟಿಸಿದೆ. ಇಲ್ಲಿನ ಸುರಿಯುವ ಹೋಟೆಲ್ ಮತ್ತು ಬೇಕರಿ ಕಸ, ಮನೆಗಳ, ವಾಣಿಜ್ಯ ಕೇಂದ್ರಗಳ ಕಸದಲ್ಲಿನ ಆಹಾರದ ತುಣುಕುಗಳನ್ನು ತಿನ್ನಲು ಬರುವ ಹಸು, ದನ,ಕರುಗಳು ಇಲ್ಲಿ ಮೇಯುತ್ತಾ ನಿಲ್ಲುವುದು ಸಹಜವಾಗಿದೆ. ಬಸ್‌ನಿಲ್ದಾಣದಿಂದ ಬರುವ ಎಲ್ಲ ಬಸ್ಸುಗಳು ಇದೇ ವೃತ್ತದಲ್ಲಿ ಹಾದು ಹೋಗಬೇಕು. ಜೊತೆಗೆ ಕಿಷ್ಕಿಂದೆಯಾಗಿರುವ ವೃತ್ತದಲ್ಲಿ ದೊಡ್ಡ ವಾಹನಗಳನ್ನು ತಿರುಗಿಸಿಕೊಳ್ಳುವುದು ವಾಹನ ಸವಾರರಿಗೆ ಸಾಹಸದ ಕೆಲಸ. ಹೀಗಿರುವಾಗ ದನಕರುಗಳೂ ಅಡ್ಡ ನಿಂತರೆ ದೇವರೇ ಗತಿ. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚೆಗಷ್ಟೇ ಹಸುವೊಂದರ ಮೇಲೆ ಬಸ್ ಹರಿದು ಹಸು ತೀವ್ರವಾಗಿ ಗಾಯಗೊಂಡ ಘಟನೆ ನಡೆಯಿತು. ಈ ಬಗೆಯ ಘಟನೆಗಳು ಸಹಜವಾಗಿ ನಡೆಯುತ್ತಲೇ ಇವೆ. ಇದೆಲ್ಲಕ್ಕೂ ಕಾರಣ ನಗರಸಭೆ ನಿರ್ಲಕ್ಷ್ಯ.
ರಸ್ತೆಗಳಲ್ಲೇ ಕಸದ ಗುಡ್ಡೆ: ಇನ್ನು ಇಲ್ಲಿನ ಚಿಕ್ಕಪೇಟೆಯ ಪದ್ಮಾ ವಿದ್ಯಾನಿಕೇತನ ಬಳಿ ರಸ್ತೆಯಲ್ಲೇ ಕಸದ ರಾಶಿ, ಕೊಳೆತ ಹಣ್ಣುಗಳು, ಕೋಳಿಪುಕ್ಕ, ಘನತ್ಯಾಜ್ಯ ಚೆಲ್ಲಾಡಿರುತ್ತದೆ. ನಗರಸಭೆ ಮಂದಿ ಎಷ್ಟು ದಿನಕ್ಕೊಮ್ಮೆ ಇಲ್ಲಿ ಕಸ ವಿಲೇವಾರಿ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆ. ಸ್ಥಳೀಯವಾಗಿಯೇ ಶಾಲೆ, ಬ್ಯಾಂಕು ಎಲ್ಲವೂ ಇದ್ದರೂ ಯಾರಿಗೂ ನೈರ್ಮಲ್ಯ ಬೇಕಾದಂತಿಲ್ಲ. ಇದೇ ರೀತಿ ನಗರ ವ್ಯಾಪ್ತಿಯ ಕುಚ್ಚಪ್ಪನಪೇಟೆ(ಮಾರುಕಟ್ಟೆ ಶಾಲೆ ಹಿಂದೆ), ಕಾಲೇಜು ರಸ್ತೆ, ಕರೇನಹಳ್ಳಿ, ವಿನಾಯಕನಗರ, ಮಾರುಕಟ್ಟೆ ಪ್ರದೇಶ ಸೇರಿದಂತೆ ಹಲವೆಡೆ ರಸ್ತೆ ಬದಿಯೇ ಕಸದ ಗುಡ್ಡೆಗಳನ್ನು ಕಾಣಬಹುದು.
ಕೊಳೆತು ನಾರುತ್ತಿದೆ ನಗರಸಭೆ ಜಾಗ: ಇನ್ನು ಸೌಂದರ್ಯಮಹಲ್ ಚಿತ್ರಮಂದಿರದ ಹಿಂದೆ ಇರುವ ನಗರಸಭೆಗೆ ಸೇರಿದ ಜಾಗ ಆಸ್ಪತ್ರೆ, ಹೋಟೆಲ್, ವಾಣಿಜ್ಯ ಸಂಕೀರ್ಣಗಳ ಕಸದಿಂದ ಕೊಳೆತು ನಾರುತ್ತಿದೆ. ಸ್ಥಳೀಯವಾಗಿರುವ ಹಲವು ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳ ತ್ಯಾಜ್ಯ ತಂದು ಸುರಿಯಲು ಇದು ಮುಕ್ತ ಪ್ರದೇಶವಾಗಿದೆ. ಇನ್ನು ಮಲಮೂತ್ರ ವಿಸರ್ಜನೆಗೇ ಸೀಮಿತವಾಗಿ ಗಬ್ಬೆದ್ದು ನಾರುತ್ತಿದೆ. ಈ ಜಾಗವನ್ನು ಅಭಿವೃದ್ಧಿ ಪಡಿಸಿ ದ್ವಿಚಕ್ರವಾಹನಗಳ ಪಾರ್ಕಿಂಗ್ ಸ್ಥಳವಾಗಿ ಅಥವಾ ಆಟೋ ನಿಲ್ದಾಣವಾಗಿ ಪರಿವರ್ತಿಸಿ ಎಂಬುದು ಬಹುದಿನಗಳ ಬೇಡಿಕೆ. ಆದರೆ ನಗರಸಭೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಇಲ್ಲಿಯವರೆಗೆ ಗಂಭೀರ ಕ್ರಮ ಕೈಗೊಂಡಿಲ್ಲ.
ಶಾಸಕರು ನಗರಸಭೆಯ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ನಾಗರಿಕರ ಕಷ್ಟ-ಸುಖ ವಿಚಾರಿಸುತ್ತಿದ್ದಾರೆ. ತಮ್ಮೊಂದಿಗೆ ಅಧಿಕಾರಿ-ಜನಪ್ರತಿನಿಧಿಗಳನ್ನು ಕರೆದೊಯ್ಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಜ್ವಲಂತ ಸಮಸ್ಯೆಯಾಗಿರುವ ನೈರ್ಮಲ್ಯ ಸಮಸ್ಯೆ ಬಗೆಹರಿಸಲು ಗಂಭೀಯ ಪ್ರಯತ್ನ ಮಾಡಬೇಕಿದೆ ಎಂಬುದು ಜನರ ಒತ್ತಾಯ.



- ಕೆ.ಆರ್.ರವಿಕಿರಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement