ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಕಲ ಸಾಹಿತ್ಯಕ್ಕೂ ಜನಪದವೇ ತಾಯಿ

Vishwanath S
Updated On : 23 Dec 2013, 1:05 am

ರಾಮನಗರ: ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಜನಪದ ಸಾಹಿತ್ಯವೇ ಮೂಲವಾಗಿದೆ. ಜನಪದ ಕಲಾವಿದರು ಸಂಸ್ಕೃತಿಯನ್ನು ಪ್ರಸರಿಸುವ ವಕ್ತಾರರು, ಸಮಾಜವನ್ನು ತಿದ್ದುವ ಅನಧಿಕೃತ ಶಾಸನಕರ್ತರು. ಇವರನ್ನು ಸತ್ಕರಿಸಿ, ಅನುಸರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರೊ.ಸಿ.ಯಲ್ಲಾರೆಡ್ಡಿ ಅಭಿಪ್ರಾಯಪಟ್ಟರು.
ಕನಕಪುರದ ಕೋಡಿಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಚಲನ ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಗೀತಗಾಯನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಕಲಾವಿದರನ್ನು ಗೌರವಿಸುವಂತಹ ಮಹತ್ಕಾರ್ಯ ಮಾಡುತ್ತಿರುವ ಸಂಚಲನ ಟ್ರಸ್ಟ್ ಕಾರ್ಯ ನಿಜಕ್ಕೂ ಅಭಿನಂದನಾರ್ಹ ಎಂದು ಅಭಿಪ್ರಾಯಪಟ್ಟರು.
ಯುವ ಸಮಾಜ ಎಚ್ಚೆತ್ತುಕೊಳ್ಳಲಿ: ಜನಪದರು ಯಾವ ಪ್ರತಿಫಲವನ್ನು ನಿರೀಕ್ಷಿಸದೆ ಪಾರಂಪರಿಕ ವಚನ, ಕೀರ್ತನ ಸಾಹಿತ್ಯ, ತತ್ವಪದಗಳು, ಮಂಟೇಸ್ವಾಮಿ, ಮಾದೇಶ್ವರನ ಪದಗಳೂ ಸೇರಿದಂತೆ ಇನ್ನಿತರೆ ವಿವಿಧ ಜನಪದದ ಪ್ರಕಾರಗಳನ್ನು ತಮ್ಮ ಬದುಕಿನೊಂದಿಗೆ ಹೆಜ್ಜೆಗುರುತುಗಳನ್ನಾಗಿಸಿಕೊಂಡು ಅದನ್ನು ಸಮಾಜಕ್ಕೂ ಉಣಬಡಿಸುತ್ತಿರುವುದು ವಿಶೇಷ ಎಂದರು.
ಜನಪದರು ಜಂಗಮ ರೂಪಿಗಳಾಗಿದ್ದು ಇವರ ಜಾನಪದ ಶ್ರೀಮಂತಿಕೆಗಳನ್ನು ಇಂದಿನ ಯುವ ಸಮಾಜ ಸ್ವೀಕರಿಸುವ ಅನುಸರಿಸುವ ಅವರನ್ನು ಗೌರವಿಸುವ ಉದಾರ ಭಾವವನ್ನು ತೋರಬೇಕಿದೆ. ಅವರನ್ನು ಅನುಸರಿಸಿ ಸತ್ಕರಿಸದಿದ್ದಲ್ಲಿ ಸಮಾಜ ಸಂಸ್ಕೃತಿಯ ಹೆಜ್ಜೆ ಹಿಂದೆ ಸರಿಯುವ ಅಪಾಯವಿದ್ದು ಅದರ ಬಗ್ಗೆ ಯುವ ಸಮಾಜ ಎಚ್ಚರ ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ನೆಲದ ಸಿರಿ, ಸಂಸ್ಕಾರದ ಕೈಂಕರ್ಯ ಅಂತಸ್ಥಗೊಂಡಿದೆ. ಸಂಗೀತ, ಸಾಹಿತ್ಯ, ಸಂಸ್ಕೃತಿಯ ಯಾವ ಪ್ರಕಾರಕ್ಕೂ ಆಕಾರ ನೀಡಿದವರು ನಮ್ಮ ನೆಲದ ಜನಪದರು. ಅವರ ಮಾತಿನಲ್ಲಿ, ಬೈಗುಳದಲ್ಲಿ ಅವರಾಡೋ ಹಾಡಿನಲ್ಲಿ, ಕಥೆ, ಕಾವ್ಯಗಳಲ್ಲಿ ಅವರ ನಿತ್ಯ ಬದುಕಿನಲ್ಲಿ ಸಂಗೀತವೇ ದನಿಗೂಡಿಸಿದೆ. ಬದುಕಿನ ಜಂಜಾಟದಲ್ಲಿ ಎದುರಾಗುವ ಕಷ್ಟಕೋಟಲೆಗಳಿಗೆ ಇವರ ಹಾಡಿನಲ್ಲಿ ಪರಿಹಾರವಿದೆ, ಪರಿಹಾಸ್ಯವಿದೆ, ಜೀವನ ಮಂತ್ರವಿದೆ, ತಂತ್ರವಿದೆ, ನೊಂದ ಮನಸ್ಸಿಗೆ ದಿವ್ಯೌಷಧವೂ ಇದಾಗಿದೆ ಎಂದು ಸಂಚಲನ ಟ್ರಸ್ಟ್ ಖಜಾಂಚಿ ಕೆ.ಎಸ್.ಸರ್ವಮಂಗಳ ತಿಳಿಸಿದರು.
ಟ್ರಸ್ಟ್ ವತಿಯಿಂದ ಜಾನಪದ ಹಾಡುಗಾರರಾದ ಮಾಯಮ್ಮ ಅವರಿಗೆ ಸೋಬಾನೆ ಸಿರಿ ಹಾಗೂ ಮಲ್ಲಯ್ಯ ಅವರಿಗೆ ಜಾನಪದ ಗಾರುಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯಶಾಸ್ತ್ರ ಪ್ರಾಧ್ಯಾಪಕ ಧರಣೀಶ್, ಕನ್ನಡ ಪ್ರಾಧ್ಯಾಪಕ ಕೃಷ್ಣಮೂರ್ತಿ, ಸಮಾಜ ಸೇವಕ ಗುರುಮಲ್ಲಯ್ಯ, ಜಾನಪದ ಕಲಾವಿದ ಮಾದಯ್ಯ ಮತ್ತಿತರರು ಭಾಗವಹಿಸಿದ್ದರು.
ಮಾಯಮ್ಮ ಕಿರು ಪರಿಚಯ: ಕನಕಪುರ ತಾಲೂಕಿನ ತಿಮ್ಮೇಗೌಡನದೊಡ್ಡಿ ಗ್ರಾಮದ ಮಾಯಮ್ಮ ಅವರದು 75ರ ಹರೆಯದಲ್ಲೂ ಬತ್ತದ ಉತ್ಸಾಹ. ಅಣ್ಣ-ತಂಗಿಯರ ಬಾಂಧವ್ಯ, ರಾಗಿ ಬೀಸುವ ಪದ, ಮಹದೇಶ್ವರನ ಹಾಡು, ಶ್ರೀನಿವಾಸ ಕಲ್ಯಾಣ, ಮದುವೆಶಾಸ್ತ್ರ, ಒಸಗೆ ಪದ ಮತ್ತು ಸೋಬಾನೆ ಪದಗಳನ್ನು ಹಾಡುವ ಧಾಟಿಯು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದೆ.
ಇನ್ನು ಚನ್ನಪಟ್ಟಣ ತಾಲೂಕಿನ ಕರಿಯಪ್ಪನದೊಡ್ಡಿ ಗ್ರಾಮದ ಮಲ್ಲಯ್ಯ ಅವರು ಮೈಲಾರಲಿಂಗ, ಜೋಗಿಹಾಡು, ಮಾದೇಶ್ವರ ಜುಂಜಪ್ಪ, ಮಂಟೇಸ್ವಾಮಿ, ಸಂಕಮ್ಮನ ಸಾಲು, ಬಂಜೆ ಹೊನ್ನಮ್ಮ, ಮೈಲಾರರಾಮ ಪದಗಳನ್ನು ಹಾಡುವ ಮೂಲಕ ಜಾನಪದ ಜಗತ್ತನ್ನು ಶ್ರೀಮಂತಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement