'ಸರ್ಕಾರದ ಸವಲತ್ತು ಸದುಪಯೋಗವಾಗಲಿ'
ರಾಮನಗರ: ಸರ್ಕಾರ ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕೆಂಗಲ್ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಅಧ್ಯಕ್ಷ ಕೆ.ಶಿವಲಿಂಗಯ್ಯ ತಿಳಿಸಿದರು.
ತಾಲೂಕಿನ ಬನ್ನಿಕುಪ್ಪೆಯ ಕೆಂಗಲ್ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಪಡೆಯುವ ಮೂಲಕ ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಹೀಗಾದಾಗ ಸರ್ಕಾರದ ಯೋಜನೆಗಳ ಉದ್ದೇಶ ಸಾರ್ಥಕವಾಗುತ್ತವೆ ಎಂದರು.
ಸರ್ಕಾರ ನೀಡುತ್ತಿರುವ ಸೈಕಲ್ಗಳನ್ನು ಬಳಸಿಕೊಂಡು ಶಾಲಾ ಮಕ್ಕಳು ಸಕಾಲಕ್ಕೆ ಶಾಲೆಗೆ ತಲುಪಿ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಬಡ ಮತ್ತು ಮಧ್ಯಮ ವರ್ಗದ ಶಾಲಾ ಮಕ್ಕಳಿಗೆ ಸರ್ಕಾರ ಸೈಕಲ್ ನೀಡುತ್ತಿದೆ. ಬಡಮಕ್ಕಳಲ್ಲಿ ಸೈಕಲ್ ಇದ್ದಿದ್ದರೆ ಬೇಗ ಶಾಲೆ ತಲುಪಬಹುದಿತ್ತು ಎನ್ನುವ ಕನಸನ್ನು ಸರ್ಕಾರ ಸಾಕಾರ ಮಾಡಿದೆ. ಮಕ್ಕಳು ನಿತ್ಯ ಸೈಕಲಲ್ಸವಾರಿ ಮಾಡುತ್ತಾ ಶಾಲೆಗೆ ಬರುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಬೈಸಿಕಲ್ ಭಾಗ್ಯ ಯೋಜನೆಯಿಂದ ಮಕ್ಕಳ ದೈಹಿಕ ಸಾಮರ್ಥ್ಯ ಮತ್ತು ಶೈಕ್ಷಣಿಕ ಪ್ರಗತಿ ಸುಧಾರಣೆಯಾಗಲಿದೆ. ಪರಿಸರ ಸ್ನೇಹಿಯೂ ಆಗಿದೆ. ಮಕ್ಕಳಲ್ಲಿ ಕೀಳರಿಮೆ ತೊಲಗಿಸಲು, ಸಮಾನತೆ ಸಾಧಿಸಲು, ಪರಿಸರ ಪ್ರಜ್ಞೆ ಬೆಳೆಸಲು ಸಹಕಾರಿಯಾಗಿದೆ ಎಂದು ಕಾರ್ಯದರ್ಶಿ ಆರ್. ಚಿಕ್ಕಬೈರೇಗೌಡ ಅಭಿಪ್ರಾಯಪಟ್ಟರು.
ಈ ವೇಳೆ ಉಪಾಧ್ಯಕ್ಷ ಶಿವರುದ್ರಯ್ಯ, ಶಾಲಾ ಶಿಕ್ಷಕರು, ಗ್ರಾಮಸ್ಥರು ಭಾಗವಹಿಸಿದ್ದರು.