ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗಿಳಿ ಪಾಠಕ್ಕೆ ತಲೆದೂಗಿದ ಉಸ್ತುವಾರಿ ಸಚಿವ

Vishwanath S
Updated On : 24 Dec 2013, 12:49 pm

ಕ.ಪ್ರ.ವಾರ್ತೆ ,  ರಾಮನಗರ ,  ಡಿ.23
ಗಿಲೀಟಿನಿಂದ ಅಧಿಕಾರಿಗಳು ಒಪ್ಪಿಸಿದ ಗಿಳ ಪಾಠಕ್ಕೆ ತಲೆದೂಗಿದ ಉಸ್ತುವಾರಿ ಸಚಿವ. ಕಾಣದ ಪ್ರಗತಿಯ ಬಗ್ಗೆ ಒಣ ಚರ್ಚೆ. ಎಚ್ಚರಿಕೆ ನೀಡಿದ್ದರೂ ಎಚ್ಚೆತ್ತುಕೊಳ್ಳದೆ ತಪ್ಪು ಪುನರಾವರ್ತಿಸಿದ ಅಧಿಕಾರಿಗಳ ಮೊಂಡುತನದ ಅನಾವರಣ. ಕುಡಿಯುವ ನೀರು, ಕರೆಂಟಟ್ಸಮಸ್ಯೆ ಕುರಿತು ವ್ಯಕ್ತವಾದ ಕೊಂಚ ಕಳಕಳಿ.
ಇವಿಷ್ಟು ಗೃಹ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜರುಗಿದ 20 ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಪ್ರಮುಖ ಸಂಗತಿಗಳು. ಇದನ್ನು ಹೊರತಾಗಿ ನಡೆದಿದ್ದೆಲ್ಲ ಬಹುತೇಕ ರಾಜಕೀಯ ಒಣ ಪ್ರತಿಷ್ಠೆ, ಹಗ್ಗ ಜಗ್ಗಾಟವೇ ಆಗಿತ್ತು.  ಉಸ್ತುವಾರಿ ಸಚಿವರಾದ ನಂತರ ಜಾರ್ಜ್ ನಡೆಸುತ್ತಿರುವ ಎರಡನೇ ಪ್ರಗತಿ ಪರಿಶೀಲನಾ ಸಭೆ ಇದಾಗಿತ್ತು. ಈ ನಡುವೆ ರಾಮನಗರಕ್ಕೆ ಬರಲು ಪುರುಸೊತ್ತಿಲ್ಲದ ಸಚಿವರು ಒಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು
ಬೆಂಗಳೂರಿಗೇ ಕರೆಸಿಕೊಂಡು, ರಾಮನಗರ ಜನರ ಯೋಗಕ್ಷೇವು ವಿಚಾರಿಸಿ ಕಳುಹಿಸಿದ್ದರು.
ಅದೇ ರಾಗ, ಅದೇ ಹಾಡು: 3 ತಿಂಗಳ ಹಿಂದಿನ ಸಭೆಯಲ್ಲಿ ಒಪ್ಪಿಸಿದ ವರದಿಯನ್ನೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಅಧಿಕಾರಿಗಳು ಈ ಸಭೆಯಲ್ಲೂ ಮಂಡಿಸಿದರು. ಹಳೆಯದ್ದಾಗಲೇ ಸಚಿವರು, ಜನ ನಾಯಕರಿಗೆ ಮರೆತೇ ಹೋಗಿತ್ತು. ಈಗಿನದ್ದನ್ನು ಕೇಳಿ ಇನ್ನಷ್ಟು ಸಾಧಿಸಬೇಕೆನ್ನುವ ಸೂಚನೆ ನೀಡಿ, ಸುಮ್ಮನಾದರು.
ಒಬ್ಬಿಬ್ಬರು ಅಧಿಕಾರಿಗಳಿಗೆ ತಬ್ಬಿಬ್ಬಾಗುವಂತೆ ಪ್ರಶ್ನಿಸಿದ್ದನ್ನು ಹೊರತುಪಡಿಸಿದರೆ ಬಹುತೇಕರು ಮಂಡಿಸಿದ ಪ್ರಗತಿ ನೋಟದಿಂದ ಸಚಿವರು ಸಂಪ್ರೀತರಾದಂತೆಯೇ ಕಂಡು ಬಂದರು. ರಾಮ-ಕೃಷ್ಣನ ಲೆಕ್ಕ ಸಿದ್ಧಪಡಿಸಿಕೊಂಡು ಬಂದಿದ್ದ ಅಧಿಕಾರಿಗಳು ತಮ್ಮ ಸರದಿ ಮುಗಿಯುತ್ತಲೇ ಅತ್ತಿತ್ತ ಸುತ್ತಾಡಿಕೊಂಡಿದ್ದರು.
ಶಹಬಾಷ್‌ಗಿರಿ: ರಾಮನಗರ ಜಿಲ್ಲೆಯು ನರೇಗಾ ಅನುಷ್ಠಾನದಲ್ಲಿ 2 ರಿಂದ 27ನೇ ಸ್ಥಾನಕ್ಕೆ ಕುಸಿದು ಅದೆಷ್ಟೋ ದಿನಗಳಾಗಿವೆ. ಈ ಯೋಜನೆ ಕುರಿತು ಜಿ.ಪಂ. ಸಿಇಒ ತಮ್ಮದೇ ಶೈಲಿಯಲ್ಲಿ ವಿವರ ಮಂಡಿಸಿದಾಗ ಚನ್ನಪಟ್ಟಣ ಹೊರತುಪಡಿಸಿ ಉಳಿದೆಡೆ ಬಹುದೊಡ್ಡ ಸಾಧನೆ ಆಗಿದೆ ಎನ್ನುವಂತೆ ಚಕಾರವೆತ್ತದೆ ಜಾರ್ಜ್ ಶಹಬಾಷ್‌ಗಿರಿ ನೀಡಿದರು.
ನರೇಗಾ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ವಿಷಯದಲ್ಲಿ ಪ್ರಗತಿ ನೋಟವನ್ನು ಗಮನಿಸಿದ ಸಂಸದ ಸುರೇಶ್, ಅಧೀನ ಅಧಿಕಾರಿಗಳು ಕೊಟ್ಟ ಅಂಕಿ-ಅಂಶ ಓದದೆ, ಪ್ರವಾಸ ಮಾಡಿ ವಸ್ತುಸ್ಥಿತಿ ಮನದಟ್ಟು ಮಾಡಿಕೊಳ್ಳಿ ಎಂದು ಸಿಇಒ ವೆಂಕಟೇಶ್ ಅವರಿಗೆ ಸೂಚಿಸಿದರು.  
ಮರೆತರೇ ಎಚ್‌ಡಿಕೆ: ರಾಮನಗರದಲ್ಲಿ ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿದ ರಾಸುಗಳಿಗೆ ಪರಿಹಾರ ನೀಡಿಕೆ ಕಾರ್ಯಕ್ರಮ ತಮ್ಮನ್ನು ಕೈಬಿಟ್ಟ ವಿಷಯದಲ್ಲಿ ಕುಮಾರಸ್ವಾಮಿ ಗುಡುಗುವ ಗೋಜಿಗೆ ಹೋಗಲಿಲ್ಲ. ಆದರೆ, ರಾಮನಗರಕ್ಕೆ ಮಾತ್ರ ಹಣ ಬಿಡುಗಡೆಗೊಳಿಸಿ ಅತಿ ಹೆಚ್ಚು ಸಂತ್ರಸ್ತರಿರುವ ಚನ್ನಪಟ್ಟಣ ಕೈಬಿಟ್ಟಿದ್ದೇಕೆ ಎಂದು ಯೋಗೇಶ್ವರ್ ಪ್ರಶ್ನಿಸಿದರು.
1.35ಕ್ಕೆ ಮೌನಾಚರಣೆ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನ ವಾರ್ತೆ ಜಿ.ಪಂ. ಸಭಾಂಗಣಕ್ಕೆ ತಲುಪಲು ಸಮಯ ಮಧ್ಯಾಹ್ನ 1.35 ಆಗಿತ್ತು. ಈ ವಿಷಯವನ್ನು ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಅಷ್ಟರಲ್ಲಿ ಕುಮಾರಸ್ವಾಮಿ ಕೂಡ ಅದೇ ವಿಷಯ ಪ್ರಸ್ತಾಪಿಸಲು ಮುಂದಾಗಿದ್ದರು.
ತಕ್ಷಣವೇ ಎಚ್ಚೆತ್ತ ಜಾರ್ಜ್ ಒಂದು ನಿಮಿಷ ಮೌನಾಚರಣೆ ಸೂಚಿಸಿದರು. ನಂತರ ಸಭೆ ಮುಂದುವರೆಯಿತು. ಇದು, ಮನರಂಜನಾ ಕಾರ್ಯಕ್ರಮವಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆ ಆಗಿದ್ದರಿಂದ ಮುಂದುವರೆಸಿದೆವೆನ್ನುವ ಸಮಜಾಯಿಷಿಯನ್ನು ಜಾರ್ಜ್ ಸುದ್ದಿಗಾರರಿಗೆ ನೀಡಿದರು.
ಎಚ್‌ಡಿಕೆಗೆ ತಹಸೀಲ್ದಾರ್ ತಿರುಗೇಟು
ನಾನೊಬ್ಬ ವಿಪಕ್ಷ ನಾಯಕ. ನಾನು ಫೋನ್ ಮಾಡಿದ್ರೆ ಸ್ವೀಕರಿಸುವುದಿಲ್ಲ. ಕೆಲವೊಮ್ಮೆ ಸ್ವೀಕರಿಸಿದರು ಕಟ್ ಮಾಡ್ತೀರ. ಎಷ್ಟಮ್ಮ ನಿಮ್ಗೆ ದುರಂಹಕಾರ. ನನ್ನ ವಿಷಯದಲ್ಲೇ ಹೀಗೆ ನಡೆದುಕೊಂಡರೆ, ಇನ್ನು ಶ್ರೀಸಾಮಾನ್ಯರ ವಿಷಯದಲ್ಲಿ ಹೇಗೆ ಸ್ಪಂದಿಸ್ತೀರಿ... ಹೀಗೆಂದು, ಎಚ್.ಡಿ.ಕುಮಾರಸ್ವಾಮಿ ಅವರು ಕನಕಪುರ ತಹಸೀಲ್ದಾರ್ ದಾಕ್ಷಾಯಿಣಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸಭೆಯ ಅಂತಿಮ ಘಟ್ಟದಲ್ಲಿ ಕುಮಾರಸ್ವಾಮಿ ಎಗರಾಡಿದಾಗ ದಾಕ್ಷಾಯಿಣಿ ಸುಮ್ಮನೆ ಕೂರದೆ ತಿರುಗೇಟು ನೀಡಿದರು.  ಇಲ್ಲಾ ಸಾರ್ ನೀವು ಫೋನ್ ಮಾಡೋದಕ್ಕೂ ಮೊದ್ಲೇ ನಿಮ್ಮ ಪಿಎ ಫೋನ್ ಮಾಡಿದ್ರು. ನೀವು ಫೋನ್ ಮಾಡ್ತೀರಾ. ಆ ಕರೆಯನ್ನು ಸ್ವೀಕರಿಸಬೇಡಿ ಎಂದು ನನ್ಗೆ ಸೂಚಿಸಿದ್ದರೆಂದರು. ಇದರಿಂದ ಕೆರಳಿದ ಕುಮಾರಸ್ವಾಮಿ ಆ ಪಿಎ ಯಾರು, ನಿಮಗೇಕೆ ಅವರು ಫೋನ್ ಮಾಡಿ ಹಾಗೆ ಏಳ್ತಾರೆ, ಆ ಫೋನ್ ನಂಬರ್ ಕೊಡಿ ಎಂದು ಕೂಗಾಡಿ ಬಾಯಿ ಮುಚ್ಚಿಸಿದರು.  
ವೇದಿಕೆಯಲ್ಲಿ ಖಾನ್ ಹಾಜರಿ
ರಾಮನಗರ ಜಿಲ್ಲೆಯಲ್ಲಿ ಶಿಷ್ಟಾಚಾರಕ್ಕೆ ಮೂರು ಕಾಸಿನ ಕಿಮ್ಮತ್ತಿಲ್ಲ ಎನ್ನುವುದು ಜಗಜ್ಜಾಹೀರ ಸತ್ಯ. ಇಲ್ಲಿಗೆ ಬರುವ ಸಚಿವರು, ಉನ್ನತ ಅಧಿಕಾರಿಗಳು ಇಲ್ಲಿನ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ. ಇದಕ್ಕೊಂದು ತಾಜಾ ನಿದರ್ಶನವೆಂದರೆ, ಕೆಡಿಪಿ ಸಭೆಯ ವೇದಿಕೆಯಲ್ಲಿ ಶಾಸಕರೊಬ್ಬರ ಆಪ್ತ ಸಹಾಯಕನ ಆಟಾಟೋಪ.  ಶಿಷ್ಟಾಚಾರ ಬದಿಗೊತ್ತಿ ವೇದಿಕೆಯಲ್ಲಿ ಉಸ್ತುವಾರಿ ಸಚಿವರ ಬೆನ್ನಿಗಂಟಿಕೊಂಡೇ ಆಸೀನರಾಗಿದ್ದ ವ್ಯಕ್ತಿ ನೆಹಮತ್ ಉಲ್ಲಾ ಖಾನ್. ಆತ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಖಾಸಗಿ ಆಪ್ತ ಸಹಾಯಕನೇ  ಹೊರತು ಸರ್ಕಾರಿ ನೌಕರನೂ ಅಲ್ಲ. ಇಷ್ಟಾಗಿಯೂ ಆತನ ಹಾಜರಿಗೆ ಯಾರದೂ ಚಕಾರವಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement