ಗ್ರಾಮೀಣ ಜನತೆ ಮನೆ ಬಾಗಿಲಿಗೆ ಆರ್ಥಿಕ ಸೇವೆ
ಕ.ಪ್ರ.ವಾರ್ತೆ , ರಾಮನಗರ , ಡಿ.23
ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ಆರ್ಥಿಕ ಸೇವೆಗಳನ್ನು ತಲುಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನಬಾರ್ಡ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ವ್ಯವಸ್ಥಾಪಕ ಎ.ಕೆ.ನಾರಾಯಣಮೂರ್ತಿ ಹೇಳಿದರು.
ನಬಾರ್ಡ್ ಹಾಗೂ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಿಂದ ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ಆರ್ಥಿಕ ಸಾಕ್ಷರ ಆಂದೋಲನದ ಅಂಗವಾಗಿ ಜರುಗಿದ ಬೀದಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಗೋಡೆ ಬರಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮತನಾಡಿದರು.
ಉಳಿತಾಯ, ಸಾಲ, ವಿಮೆ, ಹಣ ವರ್ಗಾವಣೆ, ಆರ್ಥಿಕ ಸಲಹೆಗಳನ್ನೊಳಗೊಂಡ ಹಲವು ಕಾರ್ಯ ಯೋಜನೆಗಳನ್ನು ವಿಸ್ತರಿಸಲು ವಾಣಿಜ್ಯ ಬ್ಯಾಂಕ್‌ಗಳು ಪ್ರತಿ ಗ್ರಾಮದಲ್ಲೂ ವ್ಯವಹಾರ ಪ್ರತಿನಿಧಿಗಳನ್ನು ನೇಮಿಸುವ ಯೋಜನೆಯನ್ನು ಹಮ್ಮಿಕೊಂಡಿವೆ. 18 ವರ್ಷ ತುಂಬಿದ ಎಲ್ಲರೂ ಬ್ಯಾಂಕ್‌ನ ಗ್ರಾಹಕನಾಗುವ ಮೂಲಕ ಬ್ಯಾಂಕಿಂಗ್ ಕ್ಷೇತ್ರವನ್ನು ಸಾರ್ವರ್ತ್ರೀಕರಣಗೊಳಿಸಬೇಕು ಎಂದರು.
ರೈತರು ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಾಲದ ಉದ್ದೇಶಗಳನ್ನು ಅರ್ಥೈಸಿಕೊಂಡು ಸುಸ್ಥಿದಾರರಾಗದೆ ಸಾಲವನ್ನು ಮರುಪಾವತಿಸಬೇಕು. ಹೀಗಾದಾಗ ಸಂಕಷ್ಟದಲ್ಲಿರುವ ಮತ್ತೊಬ್ಬ ರೈತನಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದರು.
ಬ್ಯಾಂಕಿನ ವಹಿವಾಟುಗಳಿಗೆ ನೆರವಾಗಲು ಸರ್ಕಾರೇತರ ಸಂಸ್ಥೆಗಳು, ರೈತಕೂಟಗಳು ಇತರೆ ಸ್ವಾಯತ್ತ ಸಂಸ್ಥೆಗಳು ಮುಂದಾಗಬೇಕು. ನಬಾರ್ಡ್ ಪ್ರವರ್ಧಮಾನಕ್ಕೆ ತಂದ ಜಂಟಿ ಬಾಧ್ಯತಾ ಗುಂಪುಗಳ ರಚನೆ ಹಾಗೂ ರೈತಕೂಟಗಳನ್ನು ರಚಿಸಿಕೊಂಡು ರಿಸರ್ವ್ ಬ್ಯಾಂಕ್ ನಿರ್ದೇಶಾನುಸಾರ ಆದ್ಯತಾ ವಲಯದಲ್ಲಿ ಕಿರುಸಾಲ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ. ಯೋಗೇಶ್ ತಿಳಿಸಿದರು.
ಸಾಲದ ಮರುಪಾವತಿ ಮಾಡುವುದರಿಂದ ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳಬಹುದು. ಗ್ರಾಮೀಣ ಜನತೆಗೆ ಆರ್ಥಿಕ ಸಾಕ್ಷರತೆಯ ಅರಿವು ಅವಶ್ಯಕತೆ ಇದೆ. ಬ್ಯಾಂಕ್‌ನ ಉತ್ತಮ ಗ್ರಾಹಕನಾಗಲು ಸಾಲ ಮರುಪಾವತಿ ಮತ್ತು ಸಾಲ ಪಡೆಯುವಿಕೆಯಲ್ಲಿ ಅತಿ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ವಿಜಯ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಪಿ. ಅಭಿಲಾಷ್ ಹೇಳಿದರು.
ಗ್ರಾ.ಪಂ. ಸದಸ್ಯ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಅಭ್ಯುದಯ, ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನ ಟ್ರಸ್ಟ್‌ನ ಸುರೇಶ್‌ಬಾಬು, ಗ್ರಾ.ಪಂ. ಸದಸ್ಯ ನರಸಿಂಹಮೂರ್ತಿ, ಸೇಕ್ರೆಟ್ ಸಂಸ್ಥೆಯ ಪುಟ್ಟಸ್ವಾಮಿ, ಟಿ.ಡಿ.ಸೆಲ್ವ, ನವೀನ, ಮುಖಂಡರಾದ ಅಪ್ಪಾಜಿ ಮತ್ತಿತರರು ಭಾಗವಹಿಸಿದ್ದರು. ಪರಿಸರ ಸಂಸ್ಥೆಯ ಕಲಾವಿದರು ಬೀದಿ ನಾಟಕ ಪ್ರಸ್ತುತಪಡಿಸಿದರು.