ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರಗತಿ ಪರ ರೈತರಿಗೆ ಸನ್ಮಾನ

Vishwanath S
Updated On : 24 Dec 2013, 12:49 pm

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮತ್ತು ದೇವನಹಳ್ಳಿ ತಾಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರೈತ ದಿನಾಚರಣೆ ಅಂಗವಾಗಿ ಪ್ರಗತಿಪರ ಮೂವರು ರೈತರಿಗೆ ಸನ್ಮಾನ ಸಮಾರಂಭವನ್ನು ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
 ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ಎಲ್ಲ ದಿನಾಚರಣೆಗಳಿಗಿಂತ ರೈತ ದಿನಾಚರಣೆಗೆ ವಿಶೇಷವಾದ ಅರ್ಥವಿದೆ. ಏಕೆಂದರೆ ದೇಶವನ್ನು ಕಾಯುವ ಯೋಧನಿಗೆ ಎಷ್ಟು ಗೌರವ ಕೊಡುತ್ತೇವೋ
ಅದಕ್ಕಿಂತ ಹೆಚ್ಚಿನ ಗೌರವ ಬೆವರು ಸುರಿಸಿ ನಮಗೆಲ್ಲ ಅನ್ನ ಕೊಡುವ ರೈತನಿಗೆ ಕೊಡಬೇಕಾಗುತ್ತದೆ. ಆದರೆ ರೈತನ ಸಮಸ್ಯೆಗೆ ತಕ್ಕಂತೆ ಸರ್ಕಾರಗಳು ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸಮಾಡಿ ತಮ್ಮ ಋಣ ತೀರಿಸಬೇಕು ಎಂದು ಶಾಸಕರು ತಿಳಿಸಿದರಲ್ಲದೆ ತಾಲೂಕಿನ ಹತ್ತು ಕೆರೆಗಳ ಅಭಿವೃದ್ಧಿಗಾಗಿ 22.75 ಕೋಟಿ ರು.ಗಳು ಮಂಜೂರಾಗಿದ್ದು ತಾಲೂಕಿನ 158 ಕೆರೆಗಳಿಗೆ ಸಂಪರ್ಕ ಕಾಲುವೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ನೀರು ಸರಬರಾಜಾಗುತ್ತಿದ್ದು ಮನುಷ್ಯರಿಗೆ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನೀರು ಶುದ್ಧೀಕರಣ ಯಂತ್ರಗಳನ್ನು ಸ್ಥಾಪಿಸಬೇಕು, ಎಲ್ಲ ಹಳ್ಳಿಗಳಲ್ಲಿ ಅನಧಿಕೃತವಾಗಿ ಮಾರಾಟವಾಗುತ್ತಿರುವ ಕಳ್ಳಭಟ್ಟಿ ನಿಯಂತ್ರಣವಾಗಬೇಕು. ಅಲ್ಲದೆ ಇನ್ನು ಮೂರು ತಿಂಗಳಿನೊಳಗಾಗಿ ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿಸಬೇಕು. ಜೊತೆಗೆ ಅಗತ್ಯವಾದ ವೈದ್ಯರು ಇರಬೇಕು. ಇಲ್ಲವಾದರೆ ಸರ್ಕಾರಿ ಆಸ್ಪತ್ರೆಗ ಬೀಗ ಹಾಕುವುದಾಗಿ  ತಿಳಿಸಿದರು.
ನಿಷ್ಕ್ರೀಯ: ರೈತ ಮುಖಂಡ ಸಿದ್ದಾರ್ಥ ಮಾತನಾಡಿ ಶಾಲೆಗಳ ಸಮೀಪವಿರುವ ಸಣ್ಣಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ ಇದನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ ಎಂದರು.
ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿಣಹಣಾಧಿಕಾರಿ ಕೃಷ್ಣಪ್ಪ ಲೋಹಾರ್ ಮಾತನಾಡಿದರು. ತಹಸೀಲ್ದಾರ್ ಡಾ.ವೆಂಕಟರಾಜು, ತಾ.ಪಂ.ಉಪಾಧ್ಯಕ್ಷ ಪಟಾಲಪ್ಪ, ಸದಸ್ಯೆ ಶಾಂತಮ್ಮ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಬೈರದೇನಹಳ್ಳಿ ಜಯರಾಮಪ್ಪ, ಜಿಲ್ಲಾ ಕೃಷಿ ಪ್ರಶಸ್ತಿ ಪಡೆದ ಬೀಡಗಾನಹಳ್ಳಿ ಮಂಜುನಾಥ ಹಾಗೂ ಯುವ ರೈತ ಪ್ರಶಸ್ತಿ ಪಡೆದ ದೊಡ್ಡಸಾಗರಹಳ್ಳಿ ರವಿಕುಮಾರ್ ಅವರಿಗೆ ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು.
ಸಹಾಯಕ ಕೃಷಿ ಅಧಿಕಾರಿ ವಿನೋದಮ್ಮ ಸ್ವಾಗತ ಕೋರಿದರು, ವೆಂಕಟೇಶಪ್ಪ ವಂದನೆ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement