ಬಾಲ್ಯದಲ್ಲಿಯೇ ಮೌಲ್ಯಾಧಾರಿತ ಶಿಕ್ಷಣ ನೀಡಿ
ಮಾಗಡಿ: ಮಕ್ಕಳಿಗೆ ಬಾಲ್ಯದಲ್ಲಿಯೇ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸೀಬೇ ಗೌಡ ಶಿಕ್ಷಕರಿಗೆ ಕರೆ ನೀಡಿದರು. ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಜ್ಞಾನ ಭಂಡಾರವನ್ನು ಮಕ್ಕಳಿಗೆ ತುಂಬುವ ಮೂಲಕ ಅವರನ್ನು ಸತ್ಪ್ರಜೆಗಳಾಗಿ ರೂಪಿಸಬೇಕಿದೆ. ಇಂದಿನ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಸ್ವದೇಶಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ತುಂಬುವ ಕೆಲಸ ಶಿಕ್ಷಕರು ಮಾಡಬೇಕಿದೆ ಎಂದರು.
ಧ್ವಜ ಸ್ತಂಬ ತೆರವು: ಗ್ರಾಮಸ್ಥರ ಖಂಡನೆ
ಸೂಲಿಬೆಲೆ: ಪಟ್ಟಣದ ಮುಖ್ಯ ನಿಲ್ದಾಣದಲ್ಲಿರುವ ಧ್ವಜ ಸ್ತಂಬವೊಂದನ್ನು ಭಾನುವಾರ ತೆರೆವು ಮಾಡಿರುವುದನ್ನು ಗ್ರಾಮಸ್ಥರು ಖಂಡಸಿದ್ದು, ಕೂಡಲೇ ಈ ಬಗ್ಗೆ ಕ್ರಮ ಜರುಗಿಸುವಂತೆ ಕೋರಿ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಹಳೇ ಬಸ್ ನಿಲ್ದಾಣದಲ್ಲಿ ಕೆಲ ವರ್ಷಗಳಿಂದ ರಾಜ್ಯೋತ್ಸವ ನಡೆಸಲು ಧ್ವಜ ಸ್ತಂಬವೊಂದನ್ನು ನೆಡಲಾಗಿತ್ತು. ಈ ಕಂಬವನ್ನು ಭಾನುವಾರ ಕೆಲವರು ಅಲ್ಲಿಂದ ತೆರೆವು ಮಾಡಿದ್ದು, ಇದನ್ನು ಖಂಡಸಿ ಸೋಮವಾರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಯಾವ ಉದ್ದೇಶಕ್ಕೆ ಇಲ್ಲಿಂದ ತೆರೆವು ಮಾಡಲಾಯಿತು ಎಂದು ಪ್ರಶ್ನಿಸಿರುವ ಗ್ರಾಮಸ್ಥರು ಇದೊಂದು ಉದ್ದೇಶಪೂರ್ವಕ ಕೃತ್ಯವಾಗಿದ್ದು, ತೆರೆವು ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ದೂರು ನೀಡಲಾಗಿದೆ.
ನಗದು, ಚಿನ್ನಾಭರಣ ದೋಚಿ ಪರಾರಿ
ನೆಲಮಂಗಲ: ಮನೆಯೊಂದರ ಬೀಗ ಒಡೆದು ಸುಮಾರು 50 ಸಾವಿರ ಬೆಲೆ ಬಾಳುವ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ಭಾನುವಾರ ರಾತ್ರಿ ತಾಲ್ಲೂಕಿನ ಬರದಿ ಗ್ರಾಮದಲ್ಲಿ ನಡೆದಿದೆ. ಮನೆ ಮಾಲೀಕ ರಾಮಕೃಷ್ಣ ಅವರು ನೆಂಟರ ಮನೆಗೆಂದು ಹೋಗಿದ್ದಾಗ ಮನೆ ಬೀಗ ಹಾಕಿರುವುದನ್ನು ಗಮನಿಸಿರುವ ಕಳ್ಳರು ಬೀಗ ಒಡೆದು ಸುಮಾರು 12 ಗ್ರಾಂ ಚಿನ್ನ ಮತ್ತು 20 ಸಾವಿರ ರು.ಗಳನ್ನು ಮನೆಯಲ್ಲಿದ್ದ ಬೀರುವನ್ನು ಒಡೆದು ದೋಚಿದ್ದಾರೆ. ಮನೆಯ ಅಕ್ಕ ಪಕ್ಕದವರಿಂದ ಬೀಗ ಒಡೆದಿರುವ ವಿಷಯ ತಿಳಿದ ಮನೆ ಮಾಲೀಕ ರಾಮಕೃಷ್ಣ ಬಂದು ನೋಡಿದಾಗ ಕಳ್ಳತನವಾಗಿರುವುದನ್ನು ಕಂಡು ಈ ಬಗ್ಗೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಜೃಂಭಣೆ ಹನುಮ ಜಯಂತಿ
ರಾಮನಗರ: ನಗರದ ಅಗ್ರಹಾರ ಬಡಾವಣೆಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿಸಲ್ಪಟ್ಟ ಪುರಾತನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾಮನಗರ ತಾಲೂಕು ವಿಪ್ರ ಯುವ ಸೇವಾ ಟ್ರಸ್ಟ್ನಿಂದ ಹನುಮ ಜಯಂತಿಯನ್ನು ಆಯೋಜಿಸಲಾಗಿತ್ತು. ಜಯಂತಿಯ ಪ್ರಯುಕ್ತ ಆಂಜನೇಯಸ್ವಾಮಿಗೆ 108 ಲೀಟರ್ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನೆರವೇರಿದವು. ಬಳಿಕ ದೇವಾಲಯದಿಂದ ಹೊರಟ ಶ್ರೀರಾಮ ಹಾಗೂ ಆಂಜನೇಯಸ್ವಾಮಿ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ನಗರದ ಅಗ್ರಹಾರ, ಎಂ.ಜಿ.ರಸ್ತೆ, ಮಂಡಿಪೇಟೆ, ಮುಖ್ಯರಸ್ತೆ, ಛತ್ರದ ಬೀದಿಗಳಲ್ಲಿ ಸಂಚರಿಸಿ. ಮಾರ್ಗದ ಉದ್ದಕ್ಕೂ ಉತ್ಸವ ಮೂರ್ತಿಗಳಿಗೆ ಭಕ್ತಾದಿಗಳು ಪೂಜೆ ಸಲ್ಲಿಸಿ, ಭಕ್ತಿ-ಭಾವ ಮೆರೆದರು, ವಿಪ್ರ ಯುವಕರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ತಾಲೂಕು ವಿಪ್ರ ಯುವ ಸೇವಾ ಟ್ರಸ್ಟ್ನ ಅಧ್ಯಕ್ಷ ಎಸ್. ಬಾಲಸುಬ್ರಹ್ಮಣ್ಯಂ, ಕಾರ್ಯದರ್ಶಿ ಪಿ.ವೈ.ರವೀಂದ್ರ ಹೇರ್ಳೆ, ಖಜಾಂಚಿ ಎನ್.ಮಹೇಶ್, ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್, ಕಾರ್ಯದರ್ಶಿ ಶೇಷಾದ್ರಿ ಅಯ್ಯರ್, ವಿಪ್ರ ಮುಖಂಡರಾದ ಕೆ.ಎಲ್.ಶೇಷಗಿರಿರಾವ್, ಕೆ.ವೆಂಕಟೇಶ್, ರಮೇಶ್, ವಿಶ್ವನಾಥ್, ಉಮೇಶ್, ಶ್ರೀನಿವಾಸರಾವ್, ಕೆ.ಆರ್.ವಿಜಯಕುಮಾರ್, ಸೂರ್ಯಪ್ರಕಾಶ್ ಭಾಗವಹಿಸಿದ್ದರು.
ಬುದ್ಧಿಮಾಂದ್ಯ ಮಕ್ಕಳಿಗೆ ಸಹಕಾರ ನೀಡಿ
ರಾಮನಗರ: ಬುದ್ಧಿಮಾಂದ್ಯ ಮಕ್ಕಳಿಗೆ ಶೈಕ್ಷಣಿಕ ತರಬೇತಿ ನೀಡುವ ಶಾಲೆಗಳು ಮತ್ತು ಶಿಕ್ಷಕರಿಗೆ ಸಂಘ ಸಂಸ್ಥೆಗಳು ಮತ್ತು ಸಮಾಜ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ರೋಟರಿ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್ ಕರೆ ನೀಡಿದರು. ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಶ್ರೀವೈಷ್ಣವಿ ವಿಶೇಷ ಮಕ್ಕಳ ಶಾಲೆಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ವಿಶೇಷ ಮಕ್ಕಳಿಗೆ ತರಬೇತಿ ಕೊಡುವುದು ಸುಲಭದ ಮಾತಲ್ಲ. ಈ ಮಕ್ಕಳಿಗೆ ಅಗತ್ಯವಿರುವ ಪರಿಕರಗಳು, ತರಬೇತಿ ಹೊಂದಿದ ಶಿಕ್ಷಕರನ್ನು ನಿಯೋಜಿಸಿಕೊಂಡು ಶಾಲೆಯನ್ನು ನಡೆಸುವುದು ಸಹ ಕ್ಲಿಷ್ಟಕರ, ಹೀಗಾಗಿ ನಾಗರೀಕರು ತಮ್ಮ ಸಹಾಯ ಹಸ್ತವನ್ನು ಈ ಶಾಲೆಗಳಿಗೆ ನೀಡಬೇಕು ಎಂದರು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ರೋಟರಿ ತನ್ನದೇ ಆದ ರೀತಿಯಲ್ಲಿ ಸ್ಪಂದಿಸುತ್ತಿದೆ. ಇದೀಗ ವಿಶೇಷ ಮಕ್ಕಳಿಗೂ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿದೆ ಎಂದರು. ರೋಟರಿ ಪ್ರಮುಖರಾದ ಎಂ.ಕೆ.ಮರಿಸ್ವಾಮಿ, ಎಚ್.ಚಂದ್ರಶೇಖರ್, ಆರ್.ಕುಮಾರಸ್ವಾಮಿ, ಅಲ್ತಾಫ್ ಅಹಮದ್, ಎಲ್.ಸಿದ್ದಪ್ಪಾಜಿ, ಆರ್.ವಿ.ಸುರೇಶ್, ಶಿವಕುಮಾರ್ಮ್ತ್ತಿತರರು ಹಾಜರಿದ್ದರು.