ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮನುಷ್ಯ ಪ್ರೀತಿ ಬಿತ್ತಿದ ಕವಿ ಡಾ.ಜಿಎಸ್‌ಎಸ್

Vishwanath S
Updated On : 24 Dec 2013, 12:49 pm

ದೊಡ್ಡಬಳ್ಳಾಪುರದಲ್ಲಿ ತಾ.ಕಸಾಪ, ಸಂಸ್ಕೃತಿ ನೇತೃತ್ವದಲ್ಲಿ ನಮನ, ವಿಶ್ವಮಾನವ ತತ್ವವನ್ನು ವಸ್ತುನಿಷ್ಠವಾಗಿ ಅನುಷ್ಠಾನಕ್ಕೆ ತಂದ ವ್ಯಕ್ತಿ

ದೊಡ್ಡಬಳ್ಳಾಪುರ: ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಸ್ಕೃತಿ ಟ್ರಸ್ಟ್ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಪುರಭವನದಲ್ಲಿ ಸೋಮವಾರ ಸಂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಲವು ಸಾಹಿತಿಗಳು ಮತ್ತು ಹೋರಾಟಗಾರರು,  ಮನುಷ್ಯ ಪ್ರೀತಿಯ ನೈಜ ಭಾವನೆಗಳನ್ನು ಕಾವ್ಯದ ಮೂಲಕ ಬಿತ್ತಿದ ಕಾರ್ತೀಕದ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸಾಹಿತ್ಯವನ್ನು ಮಾನವೀಯ ಅಂತಃಕರಣದ ಮೌಲ್ಯ ಪ್ರತಿಪಾದನೆಗೆ ಯಶಸ್ವಿಯಾಗಿ ಬಳಸಿಕೊಂಡ ಕವಿ. ಕುವೆಂಪು ಅವರ ಶಿಷ್ಯರಾಗಿ ಅವರ ವಿಶ್ವಮಾನವ ತತ್ವವನ್ನು ವಸ್ತುನಿಷ್ಠವಾಗಿ ಅನುಷ್ಠಾನಕ್ಕೆ ತಂದ ವ್ಯಕ್ತಿ ಅವರು. ಸಹಜ ಮತ್ತು ಸಾತ್ವಿಕ ಬಂಡಾಯದ ಮೂಲಕ ವೈಚಾರಿಕ ಪ್ರಜ್ಞೆಯನ್ನು ಬಿತ್ತುವ ಮಹತ್ವದ ಕೆಲಸವನ್ನು ಅವರು ಮಾಡಿದರು ಎಂದರು.
ಎದೆತುಂಬಿ ಹಾಡಿದ ಕವಿ ಭಾವಜೀವಿಯಾಗಿ ಕನ್ನಡದ ಭಾವನೆಗಳನ್ನು ಮನೆಮನದಲ್ಲಿ ಬಿತ್ತುವ ಮೂಲಕ ಜಾತಿ-ಧರ್ಮದ ನೆಲೆಗಟ್ಟುಗಳನ್ನು ಮೀರಿದವರು. ಕಾವ್ಯ ಮೀಮಾಂಸೆ, ವಿಮರ್ಶೆ, ಕಾವ್ಯ, ಅಲಂಕಾರ ಶಾಸ್ತ್ರ ಸೇರಿದಂತೆ ಸಾಹಿತ್ಯದ ಅನೇಕ ಮೌಲಿಕ ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ಕೊಟ್ಟ ಅವರ ಸಾಹಿತ್ಯ ಸಾಧನೆ ಅಪಾರ. ಸುವರ್ಣ ರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಕವಿಗಳಾಗಿ ಬಿರುದಾಂಕಿತರಾದ ಶಿವರುದ್ರಪ್ಪ ಹಲವು ಬಾರಿ ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಭವಿಷ್ಯದ ಹಿತಚಿಂತನೆ ಹೊಂದಿದ್ದ ಜಿಎಸ್‌ಎಸ್ ಕತ್ತಲನ್ನು ಗೆದ್ದು ನಿಲ್ಲುವ ಹುಂಬ ಧೈರ್ಯ ಮಾಡದೆ, ಇರುವಷ್ಟು ಹೊತ್ತು ಬೆಳಕಿನ ಅಂದವನ್ನು, ಸೌಖ್ಯವನ್ನು ಪಡೆಯುವ ತವಕ ತೋರಿದ ಕಾವ್ಯಜೀವಿ. ಬೆಂಗಳೂರು, ಮೈಸೂರು ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಹತ್ತು ಹಲವು ಕವನ ಸಂಕಲನಗಳು, ಸೌಂದರ್ಯ ಮೀಮಾಂಸೆ, ಕಾರ್ವಾರ್ಥ ಚಿಂತನ, ವಿಮರ್ಶೆಯ ಪೂರ್ವ ಪಶ್ಚಿಮ, ಗೋಡೆ, ಕಾರ್ತೀಕ ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡದ ಓದುಗರಿಗೆ ನೀಡಿದವರು. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದರು. ಅವರ ಅಗಲಿಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಕಂಬನಿ ಮಿಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಆರ್.ರವಿಕಿರಣ್, ಹಿರಿಯ ಸಾಹಿತಿ ಡಾ.ಎ.ಓ.ಆವಲಮೂರ್ತಿ, ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್, ಜಿ.ಸತ್ಯನಾರಾಯಣ್, ಸಂಸ್ಕೃತಿ ಟ್ರಸ್ಟ್‌ನ ಅಧ್ಯಕ್ಷ ಎಚ್.ಎಸ್.ನಾಗೇಶ್, ಕನ್ನಡಪಕ್ಷದ ಅಧ್ಯಕ್ಷ ಸಂಜೀವನಾಯಕ್, ಡಿ.ಪಿ.ಆಂಜನೇಯ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಬಿ.ಎಸ್.ಚಂದ್ರಶೇಖರ್ ಸಾಹಿತಿ ಎಂ.ಇ. ಖಲೀಲುಲ್ಲಾಖಾನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ಡಿ.ಆರ್.ನಟರಾಜ್, ತಾ.ಕಸಾಪ ಕಾರ್ಯದರ್ಶಿ ಪ್ರವೀಣ್, ಕೋಶಾಧ್ಯಕ್ಷ ಚಿಕ್ಕಣ್ಣ ಮತ್ತಿತರರು ಮಾತನಾಡಿದರು. ವಿವಿಧ ಕನ್ನಡಪರ ಸಂಘಟನೆಗಳ ಹತ್ತಾರು ಕಾರ್ಯಕರ್ತರು, ಜಿಎಸ್‌ಎಸ್ ಅಭಿಮಾನಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗಾಯಕ ಅನಂತ್ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಲೆ ಮಕ್ಕಳಿಂದ ನುಡಿನಮನ
ದೊಡ್ಡಬಳ್ಳಾಪುರ:
ಇಲ್ಲಿನ ಸ್ವಾಮಿ ವಿವೇಕಾನಂದ ಕನ್ನಡ ಶಾಲೆಯಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಗೌರವಾರ್ಥ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಶಿವರುದ್ರಪ್ಪ ಅವರು ಕನ್ನಡದ ಸಾತ್ವಿಕ ಪರಂಪರೆಯ ಕವಿ. ಕವನಗಳ ಮೂಲಕ ಸಾಹಿತ್ಯ, ಛಂದಸ್ಸು, ಮೀಮಾಂಸೆ, ವಿಜ್ಞಾನ, ಸಾಮಾಜಿಕ ಚಿಂತನೆಗಳನ್ನು ಬಿತ್ತಿದ ಜಿಎಸ್‌ಎಸ್ ನವೋದಯ ಕನ್ನಡ ಸಾಹಿತ್ಯದ ಮಹತ್ವದ ಕವಿಗಳಲ್ಲಿ ಒಬ್ಬರು. ಪ್ರಕೃತಿ ಮತ್ತು ಮಾನವೀಯತೆಯ ವಿಚಾರಗಳೇ ಅವರ ಸಾಹಿತ್ಯದ ಮಹತ್ವದ ವಿಚಾರಗಳಾಗಿದ್ದವು ಎಂದರು.
ತಾ.ಕಸಾಪ ಅಧ್ಯಕ್ಷ ರವಿಕಿರಣ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಸೇರಿದಂತೆ ಶಾಲೆಯ ಅನೇಕ ಶಿಕ್ಷಕರು, ನೂರಾರು ಮಕ್ಕಳು ಭಾಗವಹಿಸಿದ್ದರು.
ಜಿಎಸ್‌ಎಸ್ ಅವರ ಗೀತೆಗಳನ್ನು ಇದೇ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು.

ಎದೆ ತುಂಬಿ ಹಾಡಿದ ಕವಿ
ಮಾಗಡಿ:
ಎದೆ ತುಂಬಿ ಹಾಡಿದ ಕವಿ, ಪ್ರೀತಿಯನ್ನೇ ದೇವರೆಂದು ಕಲಿಸಿದ ಹೆಮ್ಮೆಯ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಕಾಣದ ಕಡಲಿನ ಕಡೆಗೆ ತಮ್ಮ ಬದುಕಿನ ದೋಣಿಯನ್ನು ತೇಲಿ ಬಿಟ್ಟರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್  ಅಧ್ಯಕ್ಷ ಗಂ. ದಯಾನಂದ್ ತಿಳಿಸಿದರು. ಅವರು ತಾಲೂಕಿನ ಕುದೂರು ಹೋಬಳಿ ಗುಂಡೀಗೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್  ಏರ್ಪಡಿಸಿದ್ದ ಎದೆ ತುಂಬಿ ಹಾಡಿದ ಕವಿಗೆ ಅಶ್ರುನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿ.ಎಸ್.ಶಿವರುದ್ರಪ್ಪ ಅವರು ನಿಸರ್ಗದ ಕುರಿತು ಸೊಗಸಾದ ಕಾವ್ಯ ಸೃಷ್ಟಿ ಮಾಡಿದವರು. ಇದರ ನಡುವೆ ನಮ್ಮ ನಾಡಿನ ಸ್ಥಿತಿಯ ಬಗ್ಗೆ ವೇದನೆ ಅನುಭವಿಸಿದ್ದವರು ಎಂದರು.
ಹಿರಿಯ ಸಾಹಿತಿ ಕೆ.ಜಿ. ಗಂಗಯ್ಯ ಮಾತನಾಡಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಕುವೆಂಪು ಅವರ ತಲೆಮಾರಿನ ಕೊಂಡಿಯಾಗಿದ್ದರು. ಜಿಎಸ್‌ಎಸ್  ಅವರ ಕಾವ್ಯ ಜೀವಸ್ಪಂದನೆ ನೀಡುವಂತಿದ್ದವು ಎಂದರು. ಇದೇ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪ ಅವರು ಬರೆದ ಕವಿತೆಗಳನ್ನು ಹಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
  ಗುಂಡೀಗೆರೆ ಬಸವರಾಜು, ಹುಲೀಕಲ್ ಗ್ರಾಪಂ ಅಧ್ಯಕ್ಷ ಶಶಿಧರ್, ವೀರಭದ್ರಪ್ಪ, ಬಸವರಾಜು, ನಟರಾಜು, ಟಿ.ಎಂ.ಶ್ರೀನಿವಾಸ್, ಕು.ಮು. ದಯಾನಂದ್, ಗುರುಪ್ರಸಾದ್, ಪ್ರಭುದೇವ್, ಮಾರಣ್ಣ, ಮಂಜುನಾಥ್, ಇತರರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

ನಾವಿನ್ಯತೆಯ ಹೊಳಪು ನೀಡಿದ ಕವಿ
ಕನಕಪುರ:
ಕನ್ನಡ ಸಾಹಿತ್ಯಕ್ಕೆ ನಾವೀನ್ಯತೆಯ ಹೊಳಪು ನೀಡಿದ ಎಲ್ಲರ ಮೆಚ್ಚಿನ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಮರಣ ಕನ್ನಡ ಸಾಹಿತ್ಯ, ಸಂಸ್ಕೃತಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕಸಾಪ ಕಾರ್ಯದರ್ಶಿ ಸ್ಟುಡಿಯೋ ಚಂದ್ರು ಹೇಳಿದ್ದಾರೆ.
ವಚನ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಕರ್ನಾಟಕ ಸಂಘದ ಅಧ್ಯಕ್ಷ ಮರಳವಾಡಿ ಉಮಾಶಂಕರ್, ಜಯಕರ್ನಾಟಕ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕರವೇ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ, ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ, ಸಹಕಾರಿಗಳ ಕಲಾಕೂಟದ ಸಂಚಾಲಕ ಜಗದೀಶ್ವರಾಚಾರ್ಯ, ಸಿ.ರವೀಂದ್ರ, ಪ್ರಾಂಶುಪಾಲರಾದ ಪ್ರೊ.ಎಲ್ಲಾರೆಡ್ಡಿ, ಪ್ರೊ.ವೃಷಭೇಂದ್ರಮೂರ್ತಿ,
ಪ್ರೊ.ನೀಲಮ್ಮ, ದೊಡ್ಡರಸಿನಕೆರೆ ಮಾಯಪ್ಪ, ಪ್ರಾಧ್ಯಾಪಕರಾದ ಡಾ.ಭುವನೇಶ್ವರ್, ಡಾ.ಮುನಿರಾಜಪ್ಪ,ಪ್ರೊ.ಲಕ್ಷ್ಮೀನಾರಾಯಣ, ಎಚ್.ಎಸ್.ನಾಗೇಶ್, ಸಾಹಿತಿಗಳಾದ ಸಾ.ಮ.ಶಿವಮಲ್ಲಯ್ಯ, ಕೂ.ಗಿ. ಗಿರಿಯಪ್ಪ,ಪ್ರೊ.ಕೆ.ಬಿ.ಶ್ರೀಕಾಂತ್, ಯಾಕೂಬ್, ಮಲ್ಲಿಕಾರ್ಜುನ ಛಬ್ಬಿ, ಗಟ್ಟಿಗುಂದ ಮಹದೇವ್ ಮೊದಲಾದವರು ಜಿಎಸ್‌ಎಸ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಕವಿಗೆ ಶ್ರದ್ಧಾಂಜಲಿ
ನೆಲಮಂಗಲ:
ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಯಿತು.
ಸಭೆಯಲ್ಲಿ ಯಂಟಗಾನಹಳ್ಳಿ ಕಾಲೇಜಿನ ಪ್ರಾಂಶುಪಾಲರಾದ ಎಂ.ವಿ. ನೆಗಳೂರ್ ಮಾತನಾಡಿ, ಹಲವಾರು ರೀತಿ ಚಿಂತನೆಗಳಿಂದ ನಾಡಿನ ಜನರ ಮನಸ್ಸಿನಲ್ಲಿ ಹಾಗೂ ಸುಲಲಿತವಾಗಿ ನಾಲಿಗೆಯಲ್ಲಿ ಹರಿದಾಡುವಂತಹ ಸುಶ್ರಾವ್ಯ ಕವಿತೆಗಳನ್ನು ರಚಿಸಿ ಕನ್ನಡಾಭಿಮಾನಿಗಳ ಮನಸ್ಸು ಗೆದ್ದಿದ್ದವರು ಡಾ.ಜಿ.ಎಸ್.ಎಸ್ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಹಾಗೂ ದೇಶದ ಮೂರನೇ ರಾಷ್ಟ್ರಕವಿ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಜಿ.ಎಸ್.ಎಸ್ ಅವರ ದೇಹವಷ್ಟೇ ನಮ್ಮನ್ನು ಅಗಲಿದ್ದಾರೆ  ಹೊರತು ಅವರ ಆತ್ಮ ಅವರು ನೀಡಿದ ಸಾಹಿತ್ಯ ಗೀತೆಗಳ ಮೂಲಕ ಅಮರರಾಗಿದ್ದಾರೆ ಎಂದು ಕ.ಸಾ.ಪ ಮಾಜಿ ಅಧ್ಯಕ್ಷ ಎನ್.ಜಿ. ಗೋಪಾಲ್ ಹೇಳಿದರು.
ತಾ.ಕ.ಸಾ.ಪ ಅಧ್ಯಕ್ಷ ಎನ್.ರಾಜಶೇಖರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪರಶಿವಮೂರ್ತಿ, ಹೊಯ್ಸಳ ಸೇನೆ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಕಸಾಪ ಕಾರ್ಯದರ್ಶಿ ಸೂರ್ಯಪ್ರಕಾಶ್, ಖಜಾಂಚಿ ಕೆ.ಸಿ.ಅಣ್ಣಪ್ಪ,  ಕವಿ ಕಂಡಕ್ಟರ್ ಗಂಗರಾಜು, ಪದಾಧಿಕಾರಿಗಳಾದ ಭೀಮರಾಜ್, ನಾಗೇಶ್, ಪ್ರಸನ್ನಕುಮಾರ್, ರಂಗನಾಥ್ ಸೇರಿದಂತೆ ನೂರಾರು ಜನ  ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement