ಲೋಕಸಭೆ ಚುನಾವಣೆಗೆ ಸ್ಪರ್ಧಿಸೊಲ್ಲ
ರಾಮನಗರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲವೆಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಕುರಿತು ಒಂದೊಮ್ಮೆ ಮುಖಂಡರು ಮತ್ತು ಕಾರ್ಯಕರ್ತರು ಒತ್ತಡ ಹೇರಿದರೂ ತೀರ್ಮಾನ ಬದಲಿಸುವುದಿಲ್ಲ. ಅವರನ್ನೇ ಮನವೊಲಿಸಿ, ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಸ್ಪರ್ಧೆಗೆ ಇಳಿಯುವ ತವಕ ತಮಗೇನಿಲ್ಲ. ನನ್ನ ಗುರಿ ಏನಿದ್ದರೂ ರಾಜ್ಯಾದ್ಯಂತ ಪ್ರವಾಸ ನಡೆಸಿ, ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವುದಷ್ಟೇ ಆಗಿದೆ. ಈ ನಿಟ್ಟಿನಲ್ಲಿ ಕಾರ್ಯತಂತ್ರ, ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ತೃತೀಯ ರಂಗಕ್ಕೆ ಜೆಡಿಎಸ್: ಬಿಜೆಪಿ ಮತ್ತು ಕಾಂಗ್ರೆಸ್ ಜತೆ ಸಮಾನ ಅಂತರ ಕಾಯ್ದುಕೊಂಡು, ತೃತೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸಲು ಜೆಡಿಎಸ್ ಸಜ್ಜಾಗಿರುವ ಸಂಗತಿಯನ್ನು ಕುಮಾರಸ್ವಾಮಿ ಅವರು ಇದೇ ವೇಳೆ ಹೊರಗೆಡವಿದರು.
ಜನವರಿ ಅಂತ್ಯ ಇಲ್ಲವೇ ಫೆಬ್ರವರಿ ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ತೃತೀಯ ರಂಗದಲ್ಲಿ ಪಾತ್ರ ವಹಿಸುತ್ತಿರುವ 15ಕ್ಕೂ ಹೆಚ್ಚು ಅಂಗಪಕ್ಷಗಳ ನಾಯಕರನ್ನು ಆಹ್ವಾನಿಸಿ, 8-9 ಲಕ್ಷ ಜನರನ್ನು ಸೇರಿಸುವ ಮೂಲಕ
ಬೃಹತ್ ಸಮಾವೇಶ ಆಯೋಜಿಸುವುದಾಗಿ ಅವರು ಬಹಿರಂಗ ಪಡಿಸಿದರು. ಇದಕ್ಕೂ ಮುನ್ನ ಜ.15ಕ್ಕೆ ಬೆಂಗಳೂರಿನಲ್ಲಿ ಪಕ್ಷದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಬೃಹತ್ ಸಮಾವೇಶ, ಜ.22ಕ್ಕೆ ಚಿತ್ರದುರ್ಗದಲ್ಲಿ ಮಹಿಳಾ ಸಮಾವೇಶ ಆಯೋಜನೆ ಮಾಡಲಾಗುವುದು. ತೃತೀಯ ರಂಗದ ಪಕ್ಷಗಳಿಗೆ ಒಂದೆರಡು ಸ್ಥಾನ ಬಿಟ್ಟುಕೊಟ್ಟು, ಉಳಿದೆಲ್ಲೆಡೆ ಜೆಡಿಎಸ್ ಕಣಕ್ಕಿಳಿಯಲಿದೆ ಎಂದರು.