ವಂದೇ ಮಾತರಂ ಕಾರ್ಯಕ್ರಮ
ನೆಲಮಂಗಲ: ನದಿ ಜೋಡಣೆ ಹಾಗೂ ಪ್ರಗತಿಪರ ರೈತರಿಗೆ ಉತ್ತೇಜಿಸುವಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸು ಮಾಡುವುದೇ ಬಿಜೆಪಿ ಪಕ್ಷದ ಉದ್ದೇಶ ಎಂದು ತಾಲೂಕು ಬಿಜೆಪಿ ಮುಖಂಡ ಸಿ.ಎಲ್.ಜಗದೀಶ್ ಪ್ರಸಾದ್ ಹೇಳಿದರು.
ಅವರು ಪಟ್ಟಣದ ತಿಮ್ಮಶೆಟ್ಟಪ್ಪ ಬಡಾವಣೆಯಲ್ಲಿರುವ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ವಾಜಪೇಯಿ ಅವರ 89ನೇ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಡಿಸೆಂಬರ್ 24 ರಂದು ವಂದೇ ಮಾತರಂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ. 25ರಂದು ತ್ಯಾಮಗೊಂಡ್ಲುವಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಕಿಡ್ನಿ ಸ್ಟೋನ್ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಾಲೂಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಬ್ಬರು ಪ್ರಗತಿಪರ ರೈತರನ್ನು ಹಾಗೂ ಪ್ರತಿ ಗ್ರಾಮದ ಹಾಲಿನ ಡೈರಿಗೆ ಅತಿ ಹೆಚ್ಚು ಹಾಲು ಹಾಕುತ್ತಿರುವ ರೈತರಿಗೆ ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಖಜಾಂಚಿ ರಾಮಕೃಷ್ಣ ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೇಕಾಯಿ ನಾಗರಾಜು ಇದ್ದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸತೀಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ರಾಮಮೂರ್ತಿ, ಜಿಲ್ಲಾ ಕಾರ್ಯದರ್ಶಿ ಸೌಮ್ಯ, ಮುಖಂಡರಾದ ರಾಜಮ್ಮ, ಸೌಮ್ಯ, ಪ್ರಕಾಶ್, ಪ್ರವೀಣ್ ಇದ್ದರು.