ಸಂಪಿಗೆ ಬಿದ್ದು ಮಗು ಸಾವು
ರಾಮನಗರ: ಮನೆ ಮುಂದೆ ಇದ್ದ ಸಂಪಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಗ್ರಾಮದ ಶೀಲ ಮತ್ತು ರಾಜು ಎಂಬುವರ ಪುತ್ರ ಹರ್ಷ (3) ಮೃತ ಬಾಲಕ. ಮನೆ ಬಳಿ ಆಟವಾಡುತ್ತಿದ್ದ ಆತ ಮನೆ ಮುಂದೆ ಆಟವಾಡುತ್ತಿದ್ದಾಗ ಕಾಲು ಜಾರಿ ಸಂಪಿಗೆ ಬಿದ್ದು, ಸಾವನ್ನಪ್ಪಿದ್ದಾನೆ. ಮೃತ ಬಾಲಕನ ತಂದೆ ರಾಜು ಕೈಲಾಂಚ ಗ್ರಾಮದವರಾಗಿದ್ದು, ತಾಯಿ ಶೀಲ ಬನ್ನಿಕುಪ್ಪೆಯವರು. ಶೀಲ ಎರಡನೇ ಮಗುವಿನ ಬಾಣಂತನಕ್ಕಾಗಿ ತವರು ಮನೆಗೆ ಬಂದಿದ್ದರು. ಆಕೆಯೊಟ್ಟಿಗೆ ಹರ್ಷ ಕೂಡ ಅಜ್ಜಿ ಮನೆಯಲ್ಲಿದ್ದನು. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಒಂದಾಗಿರುವ ಬನ್ನಿಕುಪ್ಪೆಗೆ ನೀರು ಸರಬರಾಜು ಮಾಡುವ ಟ್ಯಾಂಕರ್ ಸೋಮವಾರ ಬೆಳಗ್ಗೆ 10.30ರಲ್ಲಿ ಬಂದಿತ್ತು. ನೀರು ಹಿಡಿಯಲು ಬಂದ ಅಜ್ಜಿ ಹಿಂದೆ ಹರ್ಷ ಕೂಡ ಮನೆ ಹೊರಕ್ಕೆ ಬಂದಿದ್ದನು.
ಪುಟ್ಟದೊಂದು ಬಿಂದಿಗೆ ಹಿಡಿದಿದ್ದ ಹರ್ಷ ತಾನೂ ನೀರು ಹಿಡಿಯುತ್ತೇನೆಂದು ಹೇಳಿಕೊಂಡು ಅಜ್ಜಿಯ ಹಿಂದಿಂದೆ ಸುತ್ತುತ್ತಿದ್ದ. ಅಜ್ಜಿ ನೀರು ಹಿಡಿದುಕೊಂಡು ಮನೆಯೊಳಗೆ ಹೋದಾಗ ಆತ ಆಕಸ್ಮಿಕವಾಗಿ ಕಾಲು ಜಾರಿ ಪಕ್ಕದಲ್ಲೇ ಇದ್ದ ಸಂಪಿಗೆ ಬಿದ್ದಿದ್ದನು.
ಹರ್ಷ ಪಕ್ಕದಲ್ಲಿ ಎಲ್ಲೋ ಆಟವಾಡುತ್ತಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಮಧ್ಯಾಹ್ನವಾದರೂ ಆತನ ಸುಳಿವಿಲ್ಲದಿದ್ದಾಗ ಹುಡುಕಾಡಿದರು. ಅಷ್ಟರಲ್ಲಿ ಆತನ ಸಂಪಿನಲ್ಲಿ ಶವವಾಗಿದ್ದನು. ತಂದೆಯ ಊರಾದ ಕೈಲಾಂಚಕ್ಕೆ ಶವ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಸಂಬಂಧ ಪೊಲೀಸ್ ದೂರು ದಾಖಲಾಗಿಲ್ಲ.