ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎತ್ತಿನಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ಕೋಟಿ ಕೋಟಿ ಹಣ: ಎಚ್ಡಿಕೆ

Rashmi Kasaragodu
Updated On : 25 Dec 2013, 2:25 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ. 24
ಬಿಜೆಪಿ ನಾಯಕರು ಹೂ ಮುಡಿಸುವುದು, ಕಾಂಗ್ರೆಸ್‌ನವರು ಟೋಪಿ ಹಾಕುವುದು, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತೆ ಟಾಟಾ ಮಾಡೋದು ಬೇಡ... ಎತ್ತಿನಹೊಳೆ ಯೋಜನೆಯಿಂದ ಹಣ ಲೂಟಿ ಮಾಡುತ್ತಾರೋ, ನೀರು ಕೊಡುತ್ತಾರೋ ಮೊದಲು ಸ್ಪಷ್ಟಪಡಿಸಲಿ ಎಂದು ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಎತ್ತಿನಹೊಳೆ ಯೋಜನೆ ಬಗ್ಗೆ ಬಯಲುಸೀಮೆಯ ಐದು ಜಿಲ್ಲೆಯ ಜನರನ್ನು ಕತ್ತಲಲ್ಲಿ ಇಡಲಾಗಿದೆ. ಹಿಂದಿನ  ಬಿಜೆಪಿ ಸರ್ಕಾರ ಬಂದ ನಂತರವಂತೂ ಎತ್ತಿನಹೊಳೆ ಯೋಜನೆ ಎಂದು ಹೇಳಿಕೊಂಡು ಹಣ ಲೂಟಿ ಮಾಡಲಾಗುತ್ತಿದೆ. ಇವರ ಜತೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಕೂಡ ಸೇರಿಕೊಂಡರು. ನಾಲ್ಕು ವರ್ಷದಿಂದ ಎತ್ತಿನಹೊಳೆ ಯೋಜನೆ ಮೂಲಕ ಶಾಶ್ವತ ನೀರು ಕೊಡುತ್ತೇವೆ ಎಂದು ಹೇಳಿ ಹಣ ಲೂಟಿ ಮಾಡುತ್ತಿದ್ದಾರೆ. ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಟೀಕಿಸಿದರು.
ಆದಿಚುಂಚನಗಿರಿ ಸ್ವಾಮೀಜಿ ಅಭಿನಂದನಾ ಸಮಾರಂಭದಲ್ಲಿ ಇತ್ತೀಚೆಗೆ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ,  ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಸಚಿವ ಬಚ್ಚೇಗೌಡ ಶಾಶ್ವತ ನೀರಾವರಿ ಬಗ್ಗೆ ಮಾತನಾಡಿ, ಎತ್ತಿನಹೊಳೆ ಬಗ್ಗೆ ಹೇಳಿದ್ದಾರೆ. ಹೇಳುತ್ತಲೇ ಹೋದರೆ ಯೋಜನೆ ಜಾರಿ ಆಗುವುದು ಯಾವಾಗ ಎಂದು ಪ್ರಶ್ನಿಸಿದರು.
 ಸುಳ್ಳು ಹೇಳುವುದು ಮೊಯ್ಲಿ ಜನ್ಮಗುಣ. ಎತ್ತಿನಹೊಳೆ ಬಗ್ಗೆ ಸುಳ್ಳು ಹೇಳಿಕೊಂಡೆ ಮತ್ತೊಮ್ಮೆ ಮತ ಪಡೆಯಲು ಮುಂದಾಗಿದ್ದಾರೆ. ಅದನ್ನು ಬಿಟ್ಟು, ಇದೀಗ ಹೆಚ್ಚುವರಿಯಾಗಿ ಅರಣ್ಯ ಖಾತೆಯನ್ನೂ ಹೊಂದಿರುವ ಅವರು ಎತ್ತಿನಹೊಳೆ ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಅರಣ್ಯ ಇಲಾಖೆಯಿಂದ  ಅನುಮತಿಯನ್ನು ಕೂಡಲೇ ದೊರಕಿಸಿಕೊಡಲಿ ಎಂದು ಆಗ್ರಹಿಸಿದರು.
 ರಾಜ್ಯ ಸರ್ಕಾರ 2012ರಲ್ಲೇ 2689 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ಎತ್ತಿನಹೊಳೆ ಯೋಜನೆಗೆ ಟೆಂಡರ್ ಸಿದ್ಧವಾಗಿಲ್ಲ ಎಂದು ನೀರಾವರಿ ನಿಗಮ ಹೇಳುತ್ತಿದೆ. ಒಟ್ಟಾರೆ 8263 ಕೋಟಿ ವೆಚ್ಚದ ಕಾಮಗಾರಿ ಆರಂಭವಾಗಿರುವುದಾದರೂ ಎಲ್ಲಿ? ಅಲ್ಲದೆ, ಯೋಜನಾ ವರದಿ ತಯಾರಿಕೆಗೇ 1000 ಕೋಟಿಯನ್ನು ಈ ಬಾರಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
 ಅಂದರೆ ಆರಂಭವಾಗಿರುವ ಕಾಮಗಾರಿ ಯಾವುದು? ಜನರಿಗೆ ಎತ್ತಿನಹೊಳೆ ಹೆಸರಿನಲ್ಲಿ ಬಿಜೆಪಿ ಹಾಗೂ ಮೊಯ್ಲಿ  ಇಬ್ಬರೂ ಸೇರಿಕೊಂಡು ಮೋಸ ಮಾಡುತ್ತಿದ್ದಾರೆ. ಹಣ ಹೊಡೆಯುವ ಯೋಜನೆ ಇದಾಗಿದೆ ಎಂದು ಟೀಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement