ಕಳ್ಳತನಕ್ಕೆ ಬಂದು ಹಿಗ್ಗಾಮುಗ್ಗಾ ಗೂಸಾ ತಿಂದರು
ದೊಡ್ಡಬಳ್ಳಾಪುರ: ನಡುರಾತ್ರಿಯಲ್ಲಿ ಕಳವು ಮಾಡಲು ಬಂದ ನಾಲ್ವರು ಸಾರ್ವಜನಿಕರ ಕೈಗೆ ಸಿಕ್ಕಿ ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಘಟನೆ ಸೋಮವಾರ ರಾತ್ರಿ ದೊಡ್ಡಬಳ್ಳಾಪುರ ಹೊರವಲಯದ ಪ್ರಿಯದರ್ಶಿನಿ ಬಡಾವಣೆಯಲ್ಲಿ ನಡೆದಿದೆ. ಆರೋಪಿಗಳು ನೆಲಮಂಗಲದ ಗಂಗರಾಜು, ಚಂದ್ರ, ಹುಬ್ಬಳ್ಳಿ ಮೂಲದ ದೇವರಾಜ, ಸುರೇಶ್ ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಲಕ್ಷ್ಮೀನಾರಾಯಣರೆಡ್ಡಿ ಎಂಬುವವರ ಮನೆ ಮುಂದೆ ಅರ್ಧರಾತ್ರಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತ, ಮನೆ ಮುಂದೆ ಜೋಡಿಸಿಟ್ಟಿದ್ದ ಸೆಂಟ್ರಿಂಗ್ ಶೀಟುಗಳನ್ನು ಟಾಟಾ ಏಸ್ ವಾಹನಕ್ಕೆ ತುಂಬಿಕೊಂಡು ಕಳವು ಮಾಡಲು ಯತ್ನಿಸಿದ ವೇಳೆ ಸುತ್ತಮುತ್ತಲ ಜನ ಈ ನಾಲ್ವರನ್ನು ಸ್ಥಳದಲ್ಲೇ ಹಿಡಿದು ಥಳಿಸಿದ್ದಾರೆ. ಕಳುವು ಮಾಡುವ ಮುನ್ನ ರಸ್ತೆಯ ಬೀದಿದೀಪಗಳನ್ನು ಆರಿಸಿ, ಸುತ್ತಮುತ್ತಲ ಮನೆಗಳ ಮುಂಬಾಗಿಲ ಚಿಲಕಗಳನ್ನು ಜಡಿದು ಜಾಣತನ ಮೆರೆಯಲೆತ್ನಿಸಿರುವ ಆರೋಪಿಗಳು ಒದೆ ತಿಂದು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಕಳೆದ 1 ತಿಂಗಳಿಂದೀಚೆಗೆ ಈ ರೀತಿಯಾಗಿ ಸೆಂಟ್ರಿಂಗ್ ಶೀಟುಗಳು ಹಲವು ಬಾರಿ ಕಳುವಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯರೇ ಹೊಂಚು ಹಾಕಿ ಕಾದು ಕಳ್ಳರನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದು, ನಂತರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಮತ್ತು ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.