ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಶಾಲೆಗೆ ಶತಕ ಸಂಭ್ರಮ

Rashmi Kasaragodu
Updated On : 25 Dec 2013, 2:24 am

 ಮತ್ತೀಕೆರೆ ಜಯರಾಮ್
ರಾಮನಗರ: ಶತಮಾನದ ಸಂಭ್ರಮಾಚರಣೆಯಲ್ಲಿರುವ ಈ ಶಾಲೆ ಅದೆಷ್ಟೋ ಎಂಜಿನಿಯರುಗಳು, ವೈದ್ಯರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹಸ್ರಾರು ಮಂದಿಗೆ ಪಾಠ ಕಲಿಸಿ ಭವಿಷ್ಯ ರೂಪಿಸಿದೆ. ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಖ್ಯಾತನಾಮರೆನಿಸಿದ ಸಾಕಷ್ಟು ಗಣ್ಯರು ಈ ಶಾಲೆ ಸೂರಿನಡಿಯೇ ಕಲಿತು ಬೆಳೆದಿದ್ದಾರೆ.
ಸುದೀರ್ಘ ಇತಿಹಾಸದ ಜತೆಗೆ ನಾನಾ ಹಿರಿಮೆ, ಗರಿಮೆಗಳಿಗೆ ಪಾತ್ರವಾಗಿರುವ ಈ ಶಾಲೆ  ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿ ಅವಳಿ ಗ್ರಾಮದಲ್ಲಿದೆ. 1913ರಲ್ಲಿ ಸ್ಥಾಪಿತವಾದ ಈ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವು ಅವಳಿ ಗ್ರಾಮಸ್ಥರ ಸಹಕಾರದೊಂದಿಗೆ ಎಸ್‌ಡಿಎಂಸಿ ನೇತೃತ್ವದಲ್ಲಿ ಡಿ.26ಕ್ಕೆ ಆಯೋಜನೆಗೊಂಡಿದೆ.
ಶೆಟ್ಟಿಹಳ್ಳಿಯಲ್ಲಿ ಮೊದಲಿಗೆ 1896ರಲ್ಲಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿತ್ತು. ಅದನ್ನು 1913ರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ನಾಲ್ಕೂವರೆ ಎಕರೆಯಲ್ಲಿ ಪ್ರಾರಂಭವಾದ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ ವಿಲೀನಗೊಳಿಸಲಾಯಿತು. ದಶಕದ ಹಿಂದೆ ಈ ಶಾಲೆಯನ್ನು ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಶಾಲೆಯೆಂದು ಮರು ನಾಮಕರಣಗೊಳಿಸಲಾಗಿದೆ.
ಸಾಕಷ್ಟು ಖ್ಯಾತಿ: ಒಂದೆಡೆ ಬೆಂಗಳೂರು-ಮೈಸೂರು ಹೆದ್ದಾರಿ, ಇನ್ನೊಂದು ಕಡೆ ರೇಲ್ವೆ ಮಾರ್ಗ. ಶೆಟ್ಟಿಹಳ್ಳಿಯಲ್ಲೇ ರೈಲು ನಿಲ್ದಾಣ ಸೌಲಭ್ಯ. ಹೀಗಾಗಿಯೇ ಆ ಕಾಲಕ್ಕೆ ನೆರೆಯ ಮದ್ದೂರು, ಮಂಡ್ಯ, ರಾಮನಗರ, ಕನಕಪುರ ಸಹಿತ ನಾನಾ ಕಡೆಯಿಂದ ಈ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ತಂದು ದಾಖಲು ಮಾಡುತ್ತಿದ್ದರೆನ್ನುವ ಇತಿಹಾಸವಿದೆ.  ಸುಸಜ್ಜಿತ ಕಟ್ಟಡ, ವಿಶಾಲವಾದ ಆಟದ ಮೈದಾನವೂ ಸೇರಿದಂತೆ ಉತ್ತಮ ಪರಿಸರದಲ್ಲಿ ಈ ಶಾಲೆ ಇದೆ. ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಅತ್ಯುತ್ತಮ ಫಲಿತಾಂಶದಿಂದಲೂ ಶಾಲೆ ಗಮನ ಸೆಳೆಯುತ್ತಾ ಬಂದಿದೆ. ಈಗಲೂ ಶಾಲೆ ತನ್ನದೇ ಆದ ಸುದೀರ್ಘ ಇತಿಹಾಸ ಮತ್ತು ವೈಶಿಷ್ಟ್ಯ ತೆಯ ಕಾರಣಕ್ಕೆ ಮೆರಗು ಪಡೆದಿದೆ.
ಕಲಿತ ಗಣ್ಯರಿವರು: ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಸಂಸದ ಪ್ರೊ.ಜಿ.ವೆಂಕಟಗಿರಿಗೌಡ, ಸಮಾಜವಾದಿ ಬಿ.ಕೆ.ಪುಟ್ಟರಾಮಯ್ಯ, ಮಾಜಿ ಸಚಿವ ವಿ.ವೆಂಕಟಪ್ಪ, ಮೈಸೂರು ವಿವಿ ವಿಶ್ರಾಂತ ಕುಲಪತಿ ಹಾಗೂ ಸಾಹಿತಿ ಡಾ.ದೇ.ಜವರೇಗೌಡ ಈ ಶಾಲೆಯಲ್ಲಿ ಕಲಿತು ಎತ್ತರಕ್ಕೆ ಬೆಳೆದ ಮಹನೀಯರಾಗಿದ್ದಾರೆ.
ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರಾದ ಎಂ.ವರದೇಗೌಡ, ಡಿ.ಟಿ.ಜಯಕುಮಾರ್, ಮಾಜಿ ಶಾಸಕ ಡಿ.ಟಿ.ರಾಮು, ಬಿ.ಜೆ.ಲಿಂಗೇಗೌಡ, ಕೃಷಿ ತಜ್ಞ ಎಂ.ಬಿ.ಚನ್ನೇಗೌಡ, ನೆರೆಯ ಮಂಡ್ಯದ ಮೈಷುಗರ್ ಅಧಿಕಾರಿ ಬಿ.ಜಿ.ದಾಸೇಗೌಡ, ಪೊಲೀಸ್ ಉನ್ನತ ಹುದ್ದೆ ಅಲಂಕರಿಸಿದ್ದ ಮಂಚಯ್ಯ, ಖ್ಯಾತ ವೈದ್ಯ ಡಾ.ಎಸ್. ವಿಶ್ವನಾಥ್ ಸಹಿತ ಪ್ರಮುಖರನ್ನು ನಾಡಿಗೆ ಕೊಡುಗೆ ನೀಡಿದ ಖ್ಯಾತಿಗೂ ಈ ಶಾಲೆ ಭಾಜನವಾಗಿದೆ.  
ಲೇಖಕಿ ಎಂ.ಟಿ.ಸರಸ್ವತಿಗೌಡ ಕಲಿತಿದ್ದೂ ಇದೇ ಶಾಲೆಯಲ್ಲೇ. ಇಲ್ಲಿ ಓದಿದ ಸುಮಾರು 200ಕ್ಕೂ ಹೆಚ್ಚು ಮಂದಿ ಎಂಜಿನಿಯರ್, 100ಕ್ಕೂ ಹೆಚ್ಚು ಮಂದಿ ವೈದ್ಯರು, 1 ಸಾವಿರಕ್ಕೂ ಹೆಚ್ಚು ಮಂದಿ ಶಿಕ್ಷಕರಾಗಿದ್ದಾರೆ. ಪೊಲೀಸ್, ಮಿಲಿಟರಿ, ಪ್ಯಾರಾ ಮಿಲಿಟರಿಯಲ್ಲೂ ಸಾಕಷ್ಟು ಮಂದಿ ಸೇವೆ ಸಲ್ಲಿಸಿದ್ದಾರೆ. ಹಲವರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಾಗಿದ್ದಾರೆ.


ಹಳೆಯ ಕಟ್ಟಡ ನೆಲಸಮ
1913-14ರಲ್ಲಿ ನಿರ್ಮಿಸಲಾದ ಮಂಗಳೂರು ಹೆಂಚಿನ ಸುಂದರ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಅಲ್ಲೀಗ ಕೇಂದ್ರ ಪಠ್ಯ ಕ್ರಮದ ಆದರ್ಶ ವಿದ್ಯಾಲಯ ನಿರ್ಮಾಣವಾಗುತ್ತಿದೆ. 1896ರಲ್ಲೇ ನಿರ್ಮಿಸಿರುವ ಮತ್ತೊಂದು ಪುಟ್ಟ ಕಟ್ಟಡವು ಹಾಲಿ ಇರುವ ಸುಸಜ್ಜಿತ ಕಟ್ಟಡದ ಮಗ್ಗುಲಲ್ಲೇ ಉತ್ತಮ ಸ್ಥಿತಿಯಲ್ಲಿರುವುದು ವಿಶೇಷ. ಕಾನ್ವೆಂಟ್ ಹಾವಳಿಗೂ ಮುನ್ನ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಮಕ್ಕಳ ಸಂಖ್ಯೆ 750-800ರಷ್ಟಿತ್ತು. ಇದೀಗ 175ರಷ್ಟಿದೆ. ಆದರ್ಶ ವಿದ್ಯಾಲಯದಲ್ಲಿ 337 ಮಂದಿಯು ಕೇಂದ್ರ ಪಠ್ಯ ಕ್ರಮದಲ್ಲಿ ಆಂಗ್ಲ ಭಾಷಾ ಮಾಧ್ಯಮದ ಶಿಕ್ಷಣ ಪಡೆಯುತ್ತಿದ್ದಾರೆ. ಊರಿನಲ್ಲಿ ಎರಡು ಹಾಸ್ಟೆಲ್ ಸೌಲಭ್ಯವಿದ್ದು, ಹೊರಗಿನ ಮಕ್ಕಳಿಗೆ ಅನುಕೂಲವಾಗಿದೆ.



ಶಾಲೆಯ ವೈಶಿಷ್ಟ್ಯಗಳು
ಬೆಂಗಳೂರು-ಮೈಸೂರು ಹೆದ್ದಾರಿ ನಡುವಿನ ಗ್ರಾಮೀಣ ಭಾಗದ ಚೊಚ್ಚಲ ಶಾಲೆಯಿದು. ವೆಂಕಟಗಿರಿಗೌಡ, ವಿ.ವೆಂಕಟಪ್ಪ, ದೇಜಗೌ ಸಹಿತ ನಾನಾ ಪ್ರಮುಖರ ವ್ಯಾಸಂಗ ಇಲ್ಲಿಯೇ. ಹೋಬಳಿಯಿಂದ ರಾಜ್ಯ ಮಟ್ಟದವರೆಗೆ ನಾನಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಶಾಲೆ. ಕಾನ್ವೆಂಟ್ ವ್ಯಾಮೋಹ ಹೆಚ್ಚಿರುವ ನಡುವೆಯೂ ತನ್ನ ಅಸ್ತಿತ್ವ ಉಳಿವಿನಲ್ಲಿ ಯಶಸ್ವಿ.


ಊರ ಹಬ್ಬದಂತೆ ಆಚರಣೆ
ಡಿ.26ರಂದು ನಡೆಯುತ್ತಿರುವ ಈ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮಸ್ಥರು ಒಗ್ಗಟ್ಟಿನಿಂದ ಊರ ಹಬ್ಬದಂತೆಯೇ ಆಚರಿಸುತ್ತಿದ್ದಾರೆ. ಕಾರ್ಯಕ್ರಮದ ಸಿದ್ಧತೆಗಾಗಿ ಮೂರ್‌ನಾಲ್ಕು ಪೂರ್ವಭಾವಿ ಸಭೆಗಳನ್ನು ನಡೆಸಿ, ಅಂತಿಮ ಹಂತದ ಅದ್ಧೂರಿ ಸಿದ್ಧತೆ ನಡೆಸಿದ್ದಾರೆ. ಡಿ.26ರಂದು ಮಧ್ಯಾಹ್ನ 3ಕ್ಕೆ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಲಿದ್ದು, ಸಚಿವ ಕೆ.ಜೆ.ಜಾರ್ಜ್, ಸಂಸದ ಡಿ.ಕೆ.ಸುರೇಶ್, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಪುಟ್ಟಣ್ಣ ಸಹಿತ ವಿಧಾನ ಪರಿಷತ್ ಸದಸ್ಯರು ಚುನಾಯಿತ ಪ್ರತಿನಿಧಿಗಳನೇಕರು ಪಾಲ್ಗೊಳ್ಳಲಿದ್ದಾರೆ.


ನಗೆಹಬ್ಬ, ಹಲವರಿಗೆ ಸನ್ಮಾನ
ಶತಮಾನೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಂದು ಸಂಜೆ 6ಕ್ಕೆ ಮೈಸೂರಿನ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಮತ್ತು ತಂಡದಿಂದ ನಗೆಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಡೋಜ ದೇಜಗೌ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಶಾಲೆಯ 20ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ವಿಶೇಷ. ಅಗಲಿದ ಮೂವರು ಪ್ರಮುಖರನ್ನೂ ನೆನೆಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement