ಡಾ. ಶಿವರುದ್ರಪ್ಪಗೆ ನುಡಿ ನಮನ
ನೆಲಮಂಗಲ: ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಗೌರವಾರ್ಥ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ಮಂಗಳವಾರ ನಡೆಯಿತು.
ಡಾ.ಜಯಪ್ರಸಾದ್ ಅವರು ಸಭೆಯಲ್ಲಿ ಮಾತನಾಡುತ್ತಾ ಡಾ.ಜಿ.ಎಸ್.ಶಿವರುದ್ರಪ್ಪ ಅವರು ಕನ್ನಡ ಸಾತ್ವಿಕ ಪರಂಪರೆಯ ಕವಿ. ಕವನಗಳ ಮೂಲಕ ಸಾಹಿತ್ಯ ಹಾಗೂ ಸಾಮಾಜಿಕ ಚೈತನ್ಯಗಳನ್ನು ಬಿತ್ತಿದ ಮಹನೀಯರು. ಪ್ರಕೃತಿ ಮತ್ತು ಮಾನವೀಯತೆ ಬಗ್ಗೆ ವಿಶೇಷವಾದ ಸಾಹಿತ್ಯಗಳನ್ನು ರೂಪಗೊಳಿಸಿದ್ದಾರೆ ಎಂದರು.
ಎದೆ ತುಂಬಿ ಹಾಡಿದ ಕವಿ ಭಾವ ಜೀವಿಯಾಗಿ ಕನ್ನಡದ ಭಾವನೆಗಳನ್ನು ಮನೆಮನದಲ್ಲಿ ಬಿತ್ತುವ ಮೂಲಕ ಜಾತಿ-ಧರ್ಮದ ನೆಲೆಗಟ್ಟುಗಳನ್ನು ಮೀರಿದವರು. ಅವರ ಅಗಲಿಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಸಾಹಿತಿ ತ್ಯಾಮಗೊಂಡ್ಲು ಅಂಬರೀಷ್ ಕಂಬನಿ ಮಿಡಿದರು.
ತಹಸೀಲ್ದಾರ್ ಡಾ.ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್, ಕ.ಸಾ.ಪ ಮಾಜಿ ಅಧ್ಯಕ್ಷರಾದ ಎನ್.ಜಿ.ಗೋಪಾಲ್, ಡಿ.ಸಿದ್ದರಾಜು, ಸೈಯದ್ ಖಲೀಂ ಮುಲ್ಲಾ, ತಾ.ಕ.ಸಾ.ಪ ಅಧ್ಯಕ್ಷ ಎನ್.ರಾಜಶೇಖರ್, ಕನ್ನಡ ಸೇನೆ ಅಧ್ಯಕ್ಷ ಗಣೇಶ್, ಕರವೇ ಅಧ್ಯಕ್ಷ ಉಮೇಶ್‌ಗೌಡ, ಕಸಾಪ ಕಾರ್ಯದರ್ಶಿ ಸೂರ್ಯಪ್ರಕಾಶ್, ಖಜಾಂಚಿ ಕೆ.ಸಿ.ಅಣ್ಣಪ್ಪ, ಪುರಸಭಾ ಸದಸ್ಯ ಎನ್.ಪಿ. ಹೇಮಂತ್‌ಕುಮಾರ್ ಹಾಗೂ ಸದಸ್ಯರು ಇದ್ದರು.