ತ್ಯಾಗರಾಜರ ಕೀರ್ತನೆ ಸಾರ್ವಕಾಲಿಕ: ಎಂ.ಕೃಷ್ಣಪ್ಪ
ಆನೇಕಲ್: ಸಂಗೀತ ವಿದ್ಯೆಯನ್ನು ಸಮಾಜಕ್ಕೆ ಧಾರೆ ಎರೆಯುವ ಕಾಯಕವನ್ನು ಕರ್ತವ್ಯವಾಗಿಸಿಕೊಂಡು ದೇಗುಲ ಹಾಗೂ ಶುಭ ಕಾರ್ಯಗಳಲ್ಲಿ ಅಗ್ರಸ್ಥಾನ ಹೊಂದಿರುವ ಸವಿತಾ ಸಮಾಜ ಬಂಧುಗಳ ಸೇವೆ ಶ್ಲಾಘನೀಯ ಎಂದು ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ಹೇಳಿದರು.
ಅವರು ಕ್ಷೇತ್ರದ ಎಪಿಸಿ ವೃತ್ತದಲ್ಲಿ ತಾಲೂಕು ಸವಿತಾ ಸಮಾಜ ಬಂಧುಗಳು ಏರ್ಪಡಿಸಿದ್ದ ತ್ಯಾಗರಾಜ ಆರಾಧನೆ ಹಾಗೂ ಸವಿತಾ ಮಹರ್ಷಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ದೈವಾಂಶ ಸಂಭೂತರಾದ ತ್ಯಾಗರಾಜ ಮಹರ್ಷಿಗಳು ತಮ್ಮ ಅಪಾರ ಜ್ಞಾನ ಕೌಶಲ್ಯದ ಮೂಲಕ ಶ್ರೇಷ್ಠ ಕೃತಿಗಳನ್ನು ರಚಿಸಿ ಅಜರಾಮರರಾಗಿ ಉಳಿದಿದ್ದಾರೆ. ಅವರ ಪಂಚ ಕೀರ್ತನೆಗಳು ಸೇರಿದಂತೆ ಎಲ್ಲ ಕೀರ್ತನೆಗಳಲ್ಲಿ ಭಾಗವಂತನ ಸಾಕ್ಷಾತ್ಕಾರ ಮೂಡಿಬಂದಿದೆ. ಜನತೆಗೆ ಎಲ್ಲ ಕಷ್ಟ ಕೋಟಲೆ ಮರೆತು ಸನ್ಮಾನರ್ಗದಲ್ಲಿ ನಡೆದುಕೊಳ್ಳುವಂತ ತಿಳಿ ಹೇಳುವ ಸಾಹಿತ್ಯ ತುಂಬಿದೆ ಎಂದರು.
ಆನೇಕಲ್ ಶಾಸಕ ಬಿ. ಶಿವಣ್ಣ ಮಾತನಾಡಿ ಸವಿತಾ ಸಮಾಜ ಬಂಧುಗಳಿಗೆ ಕಾಂಗ್ರೆಸ್ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಸಾಮಾಜಿಕ ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಅವಕಾಶಗಳಿದು ಸದುಪಯೋಗನ ಮಾಡಿಕೊಂಡು ಸಮಾಜದ ಮೇಲ್ಪದರಕ್ಕೆ ಪಾದಾರ್ಪಣೆ ಮಾಡಬೇಕೆಂದರು. ಕಸಾಪ ಅಧ್ಯಕ್ಷ ಧನಂಜಯ ಸ್ವಾಗತ ಕೋರಿದರು. ಸಮಾಜ ಬಂಧುಗಳಾದ ಕೃಷ್ಣಮೂರ್ತಿ, ನಾಗವೇಣಿ ರಾಯಪ್ಪ ಅವರು ಸಮಾಜಕ್ಕೆ ಒಂದು ಸಮುದಾಯ ಭವನ, ಬಿಪಿಎಲ್ ಕಾರ್ಡ್ದಾರರಿಗೆ ಆಶ್ರಯ ನಿವೇಶನ, ಹಾಗೂ ವೃತ್ತಿಪರರಿಗೆ ಸಹಾಯ ಧನ ನೀಡುವಂತೆ ಮನವಿ ಮಾಡಿದರು.
ಅಹೋರಾತ್ರಿ ತ್ಯಾಗರಾಜರ ಆರಾಧನೆ ನಡೆಯಿತು. ಜಿಪಂ ಸದಸ್ಯ ಪ್ರಭಾಕರ ಬಾಬು, ಗ್ರಾಪಂ ಅಧ್ಯಕ್ಷ ಪ್ರಹ್ಲಾದರೆಡ್ಡಿ ವೇದಿಕೆಯಲ್ಲಿದ್ದರು. ರಾಷ್ಟ್ರ ಕವಿ ಶಿವುರುದ್ರಪ್ಪರವರಿಗೆ ಶ್ರದ್ಧಾಜಲಿ ಸಲ್ಲಿಸಲಾಯಿತು.