ಲೋಡ್ಶೆಡ್ಡಿಂಗ್ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಸೂಲಿಬೆಲೆ ಡಿ.24
ವಿದ್ಯುತ್ ಲೋಡ್ ಶೆಡ್ಡಿಂಗ್ ವಿರೋಧಿಸಿ ಇಲ್ಲಿನ ಏಕರಾಜಪುರ ವಿದ್ಯುತ್ ಪ್ರಸರಣ ಉಪ ಕೇಂದ್ರದ ಮುಂದೆ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಬೆಸ್ಕಾಂ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳಿಗಳಿಗೆ ಮಾತ್ರ ಲೋಡ್ಶೆಡ್ಡಿಂಗ್ ಮಾಡಬಾರದು. ಇದರ ಬಿಸಿ ನಗರವಾಸಿಗಳಿಗೂ ತಟ್ಟಬೇಕು ಎಂದು ಅಧಿಕಾರಿಗಳ ಮೇಲೆ ಒತ್ತಡ ತಂದು ಕೆಲ ಕಾಲ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಅಧಿಕಾರಿಗಳಿಗೆ ಮಾತ್ರವಲ್ಲದೇ ನಗರವಾಸಿಗಳಿಗೂ ಬಿಸಿ ಮುಟ್ಟಿಸಿದರು.
ಕೆಲ ದಿನಗಳಿಂದ ಗ್ರಾಮಾಂತರ ಪ್ರದೇಶದಲ್ಲಿ ನಿರಂತರವಾಗಿ ವಿದ್ಯುತ್ ಕಣ್ಣಾಮುಚ್ಚಾಲೆ ನಡೆಯುತ್ತಿತ್ತು. ಇದರಿಂದ ರೈತರು, ವಿದ್ಯಾರ್ಥಿಗಳು ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದ್ದನ್ನು ಮನಗಂಡು ನಾಗರಿಕ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಸೂಲಿಬೆಲೆ ಹೋಬಳಿಯ ಏಕರಾಜಪುರ ಬಳಿ ಇರುವ ವಿದ್ಯುತ್ ಪ್ರಸರಣ ಉಪಕೇಂದ್ರಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನೆಕಾರರು ಬೆಸ್ಕಾಂ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಇಲ್ಲದೆ ರೈತರು ಕಷ್ಟ ಪಡುವಂತಾಗಿದೆ. ವಿದ್ಯಾರ್ಥಿಗಳ ಕಲಿಕೆ ತೊಡಕಾಗಿದೆ. ವಿದ್ಯುತ್ ಮೂಲಕ ನಡೆಯುವ ಎಲ್ಲ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ವಿದ್ಯುತ್ ಅಭಾವ ಅಂತಾರೆ, ಹಾಗಾದರೆ ನಗರವಾಸಿಗಳಿಗೆ ಎಲ್ಲಿಂದ ವಿದ್ಯುತ್ ಬರುತ್ತೆ. ಅಧಿಕಾರಿಗಳ ತಾರತಮ್ಯಕ್ಕೆ ರೈತರು ಬಲಿಯಾಗುತ್ತಿದ್ದಾರೆ. ನಮಗಿಲ್ಲದ ವಿದ್ಯುತ್ ನಗರವಾಸಿಗಳಿಗೂ ಬೇಡ. ವಿದ್ಯುತ್ ಪ್ರಸರಣ ನಿಲ್ಲಿಸಿ ಎಂದು ಕೇಂದ್ರಕ್ಕೆ ಮುತ್ತಿಗೆ ಹಾಕಿದರು. ಇದನ್ನು ತಡೆದ ಪೊಲೀಸರು ಬೆಸ್ಕಾಂ ಅಧಿಕಾರಿಗಳ ಜೊತೆಗೆ ಮಾತುಕತೆಗೆಂದು ತೆರಳಿ ನಗರಕ್ಕೆ ಕೆಲ ಕಾಲ ವಿದ್ಯುತ್ ಪೂರೈಕೆಯನ್ನು ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾದರು. ನಂತರ ಮಾತನಾಡಿದ ಪ್ರತಿಭಟನೆಕಾರರು, ಬೆಸ್ಕಾಂ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೀಗೇ ಲೋಡ್ಶೆಡ್ಡಿಂಗ್ ಮುಂದುವರೆದರೆ ಉಗ್ರ ಹೋರಾಟವನ್ನು ನಡೆಸಲಾಗವುದು ಎಂದು ಎಚ್ಚರಿಸಿದರು. ನಂತರ ಬೆಸ್ಕಾಂ ಎ.ಇ ತೌಸಿಫ್ ಅವರಿಗೆ ಮನವಿ ಪತ್ರ ನೀಡಲಾಯಿತು.
ಕರವೇ, ಕರ್ನಾಟಕ ನವ ನಿರ್ಮಾಣ ವೇದಿಕೆ, ಕನ್ನಡ ಸೇನೆ, ಕನ್ನಡ ಯುವಕರ ಸಂಘ, ಕೆಜೆಎಸ್ ಮೊದಲಾದ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.