ಶಾಶ್ವತ ನೀರಾವರಿ ಯೋಜನೆ ಮರೀಚಿಕೆಯೇ?
ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ನಮಗೆ ನೀರು ಬೇಕು. ಇಂದು-ನಾಳೆಗಳಿಗೆ ಮಾತ್ರ ದೊರೆತು ಮತ್ತೆ ಇಲ್ಲವಾಗುವ ತಾತ್ಕಾಲಿಕ ಪರಿಹಾರಗಳು ನಮಗೆ ಬೇಡ. ನಮ್ಮ ಬಾಯಾರಿಕೆ ತಣಿಸುವ ಶಾಶ್ವತ ಪರಿಹಾರಕ್ಕಾಗಿ ನಮ್ಮ ಹಕ್ಕೊತ್ತಾಯ. ಇದನ್ನು ಈಡೇರಿಸಿಬೇಕಾದ್ದು ಸರ್ಕಾರದ ಕರ್ತವ್ಯ- ದೊಡ್ಡಬಳ್ಳಾಪುರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಜನರ ಒಕ್ಕೊರಲ ಅಭಿಪ್ರಾಯ ಇದು.
ಯಾವುದೇ ನದಿ ಮೂಲಗಳಿಲ್ಲದ, ಜೀವಂತ ನೀರಿನ ಸೆಲೆಗಳಿಲ್ಲದ, ಮಳೆಯಾಶ್ರಯಿತ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನೀರಿನ ಬವಣೆ ತೀವ್ರಗೊಂಡಿದೆ. ಹನಿ ನೀರಿಗೂ ತತ್ವಾರ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಕೆರೆ-ಕುಂಟೆಗಳು ಬತ್ತಿ ಹೋಗಿವೆ. ರಾಜಕಾಲುವೆಗಳು ನಾಮಾವಶೇಷವಾಗಿವೆ. ಕೃಷಿ ಭೂಮಿ ಬರಡಾಗುತ್ತಿದೆ. ನೆಲದ ಸಂಸ್ಕೃತಿ ಆತಂಕವನ್ನು ಎದುರಿಸುತ್ತಿದೆ. ಜನ ಒಟ್ಟಾರೆಯಾಗಿ ಒಂದು ಸಾಂಸ್ಕೃತಿಕ ನೆಲೆಗಟ್ಟನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಇದೆಲ್ಲಕ್ಕೂ ಮೂಲ ಕಾರಣ ಜೀವಸೆಲೆಯಾದ ನೀರು ಇನ್ನಿಲ್ಲದಂತೆ ಬರಿದಾಗಿರುವುದು. ಈ ಹಿನ್ನಲೆಯಲ್ಲಿ ಕಳೆದ 6 ವರ್ಷಗಳ ಹಿಂದೆ ಹುಟ್ಟಿಕೊಂಡ ಹೋರಾಟ ಈಗ ತೀವ್ರಗತಿಯನ್ನು ಪಡೆದುಕೊಂಡಿದೆ.
ಶಾಶ್ವತ ನೀರಾವರಿ ನಮ್ಮ ಹಕ್ಕು: ದೊಡ್ಡಬಳ್ಳಾಪುರದಲ್ಲಿ ದಿವಂಗತ ಡಾ.ಎನ್.ವೆಂಕಟರೆಡ್ಡಿ ನೇತೃತ್ವದಲ್ಲಿ ಹೊತ್ತಿದ ಹೋರಾಟದ ಕಿಚ್ಚು ಇಂದು ಹಲವು ಜಿಲ್ಲೆಗಳನ್ನು ವ್ಯಾಪಿಸಿದೆ. ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಬೇಕು. ಡಾ.ಪರಮಶಿವಯ್ಯ ವರದಿ ಜಾರಿಗೆ ತಂದು ಬಾಯಾರಿದ ಜನಕ್ಕೆ, ಬರಡಾದ ನೆಲಕ್ಕೆ ನೀರೊದಗಿಸುವ ಕೆಲಸ ಮಾಡಬೇಕು ಎಂಬ ಒತ್ತಾಯ ಈಗ ಮುಗಿಲುಮುಟ್ಟಿದೆ. ಸರ್ಕಾರ ಕೊಟ್ಟ ಭರವಸೆಗಳು, ಆಮೆಗತಿಯ ವೇಗ ಮತ್ತೆ ಜನರನ್ನು ಕೆರಳಿಸಿದ್ದು, ಹೋರಾಟ ಪುನಃ ತೀವ್ರತೆ ಪಡೆದುಕೊಳ್ಳಲು ಕಾರಣವಾಗಿದೆ. ಪಶ್ಚಿಮಘಟ್ಟಗಳ 920 ಮೀಟರ್ ಎತ್ತರದ ನೇತ್ರಾವತಿ ನದಿ ಪಾತ್ರದಲ್ಲಿ ಲಭ್ಯವಿರುವ 139 ಟಿಎಂಸಿ ನೀರನ್ನು (ನೇತ್ರಾವತಿ ನದಿಯ ಶೇ.5ರಷ್ಟು ನೀರು ಮಾತ್ರ) ಗಾರ್ಲ್ಯಾಂಡ್ ಕೆನಾಲ್ಗಳ(ಕಾಲುವೆಗಳ) ಮೂಲಕ ಬಯಲುಸೀಮೆ ಭಾಗಕ್ಕೆ ನೈಸರ್ಗಿಕ ಗುರುತ್ವಾಕರ್ಷಣೆಯ ಮೂಲಕ ಹರಿಸುವ ಈ ಪ್ರಸ್ತಾವಿತ ಯೋಜನೆಯಿಂದ ಸಮಗ್ರ ನೀರಾವರಿ ಸಾಧ್ಯ. ಇದು ಅಭಿವೃದ್ಧಿಗೂ ಪೂರಕ ಹಾಗೂ ದೀರ್ಘಕಾಲೀನ ಪರಿಹಾರ ಎಂಬುದು ಹೋರಾಟಗಾರರ ವಾದ.
ಎತ್ತಿನಹೊಳೆ ಅವೈಜ್ಞಾನಿಕ: ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪ್ರಸ್ತಾವಿತ ಎತ್ತಿನಹೊಳೆ ಯೋಜನೆ ರಾಜಕೀಯ ಲಾಭದ ಮತ್ತು ತಾತ್ಕಾಲಿಕ ಪರಿಹಾರ ಒದಗಿಸಬಲ್ಲ ಯೋಜನೆ. ಹೀಗಾಗಿ ಇದು ಸಂಪೂರ್ಣ ಅವೈಜ್ಞಾನಿಕ. ಸರ್ಕಾರಕ್ಕೂ ಈ ಬಗ್ಗೆ ಮಾಹಿತಿ ಇದೆ. ಆದರೆ ಪದೇ ಪದೇ ಎತ್ತಿನಹೊಳೆಯನ್ನೇ ಪ್ರಸ್ತಾಪಿಸಿ ಶಾಶ್ವತ ನೀರಾವರಿ ಪ್ರಸ್ತಾಪವನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪಕ್ಕದ ಆಂಧ್ರಪ್ರದೇಶದಲ್ಲಿ 1.60 ಲಕ್ಷ ಕೋಟಿ ವೆಚ್ಚದ ಜಲಯಜ್ಞಂ ಯೋಜನೆ ಅನುಷ್ಠಾನವಾಗಿದೆ. ಆದರೆ ನಮ್ಮಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಮೀನಮೇಷ ಎಣಿಸುತ್ತಿರುವುದು ಸರ್ಕಾರಗಳ ನಿರ್ಲಕ್ಷ್ಯಕ್ಕೆ ಕನ್ನಡಿ.
ಪಕ್ಷಾತೀತ ಸಂಘಟನೆ: ಈಗ ದೊಡ್ಡಬಳ್ಳಾಪುರದಲ್ಲಿ ಪಕ್ಷಾತೀತವಾಗಿ, ಸಂಘಟನಾತೀತವಾಗಿ ಎಲ್ಲರೂ ಒಂದಾಗಿದ್ದಾರೆ. ಶಾಶ್ವತ ನೀರಾವರಿಗಾಗಿ ಬೃಹತ್ ಹೋರಾಟ ರೂಪಿಸಿದ್ದಾರೆ.ಬಯಲು ಸೀಮೆಯ ಲಕ್ಷಾಂತರ ಜನರನ್ನು ಸಂಘಟಿಸಿ ವಿಧಾನಸೌಧ ಚಲೋ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಿದ್ದಾರೆ. ಅದರ ಮೊದಲ ಹಂತವಾಗಿ ಪ್ರತಿ ತಾಲೂಕುಗಳಲ್ಲೂ ಸಮಾವೇಶಗಳನ್ನು ನಡೆಸಲಾಗುತ್ತಿದೆ. ತಾಲೂಕು ಹಂತದಲ್ಲಿ ಪ್ರತಿಯೊಂದು ಸಂಘಟನೆ, ರಾಜಕೀಯ ಪಕ್ಷಗಳು, ವಿದ್ಯಾರ್ಥಿಗಳನ್ನು ಹೋರಾಟದ ವೇದಿಕೆಗೆ ತರುವ ಉದ್ದೇಶದೊಂದಿಗೆ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಂಘಟನೆಗೆ ಚಾಲನೆ ನೀಡಲಾಗಿದೆ. ಒಟ್ಟಿನಲ್ಲಿ ವ್ಯವಸ್ಥಿತ ಹೋರಾಟ ರೂಪಗೊಳ್ಳುತ್ತಿದ್ದು ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಭರವಸೆಗಳನ್ನು ಬದಿಗಿಟ್ಟು ಪರಿಹಾರದ ಮಾರ್ಗೋಪಾಯಗಳನ್ನು ಹುಡುಕಬೇಕಿದೆ.