ಆನೇಕಲ್ ರೈಲು ನಿಲ್ದಾಣ: ಮೂಲ ಸೌಕರ್ಯಕ್ಕೆ ಆದ್ಯತೆ
ಕ.ಪ್ರ.ವಾರ್ತೆ ಆನೇಕಲ್ ಡಿ.25
ಆನೇಕಲ್ ರೈಲು ನಿಲ್ದಾಣಕ್ಕೆ 4 ದಶಕಗಳ ನಂತರ ಮೇಲ್ದರ್ಜೆಗೇರುವ ಸುಯೋಗ ಕೂಡಿಬಂದಂತಿದೆ. ಆನೇಕಲ್‌ನಿಂದ ಬೆಂಗಳೂರು, ಮೈಸೂರು, ಮುಂಬೈ ಹಾಗೂ ದೆಹಲಿ ಮಾರ್ಗದ ಎಕ್ಸ್‌ಪ್ರೆಸ್ ರೈಲುಗಳು ದಿನ ನಿತ್ಯ ಸಂಚರಿಸುತ್ತಿದ್ದರೂ ನಿಲುಗಡೆ ಭಾಗ್ಯವಿರಲಿಲ್ಲ. ಆನೇಕಲ್‌ನಿಂದ ತಮಿಳುನಾಡು ಮಾರ್ಗ ಸಂಚರಿಸುವ ಎಲ್ಲ ಎಕ್ಸ್‌ಪ್ರೆಸ್ ರೈಲುಗಳೂ ಇದೇ ಪದ್ಧತಿಯನ್ನು ಅನುಸರಿಸುತ್ತಿದೆ.
ಆನೇಕಲ್ ಪಟ್ಟಣದಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದ್ದು 10 ಕಿ.ಮೀ. ಫಾಸಲೆಯಲ್ಲಿ ಕೈಗಾರಿಕೆಗಳು, ವಿಶ್ವ ವಿದ್ಯಾಲಯಗಳೂ, ಹೈಟೆಕ್ ಆಸ್ಪತ್ರೆಗಳೂ ಇವೆ. ಹೊರ ರಾಜ್ಯ ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಬಂದು ನೆಲೆಸಿರುವ ಪ್ರಯಾಣಿಕರ ದಟ್ಟಣೆ ಇಲ್ಲಿದ್ದು ರೈಲುಗಳ ಓಡಾಟವಿದ್ದರೂ ವ್ಯವಸ್ಥೆ ಒದಗಿ ಬಂದಿರಲಿಲ್ಲ. ಜನತೆಯ ಬಹುದಿನಗಳ ಬೇಡಿಕೆಯನ್ನು ಕನ್ನಡದವರೇ ಆದ ಕೇಂದ್ರೀಯ ರೇಲ್ವೆ ಪ್ರಯಾಣಿಕರ ಮೂಲಭೂತ ಸೌಕರ್ಯ ನಿರ್ವಹಣಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ರೈಲು ನಿಲ್ದಾಣಕ್ಕೆ ಬಂದಾಗ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ಭೇಟಿ ಮಾಡಿ ಸವಲತ್ತುಗಳನ್ನು ಕೂಡಲೇ ಒದಗಿಸುವಂತೆ ಮನವಿ ನೀಡಿದರು.
ಆನೇಕಲ್ ಗೆಳೆಯರ ಬಳಗದ ಅಧ್ಯಕ್ಷರು ಹಾಗೂ ಸದಸ್ಯರು, ಪಿವಿಸಿ ಮಾನವತಾವಾದ ಮುಖಂಡರು, ನಿತ್ಯ ಪ್ರಯಾಣಿಕರ ಸಂಘದ ಸದಸ್ಯರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿವೃತ್ತ ನೌಕರರ ಸಂಘದ ಹಿರಿಯ ನಾಗರಿಕರು ಸೇರಿದಂತೆ ಹತ್ತಾರು ಸಂಘಟನೆಗಳ ನೂರಾರು ಮುಖಂಡರು ಮನವಿ ನೀಡಿ ಬೇಡಿಕೆಗಳ ಶೀಘ್ರ ಪೂರೈಕೆಗಾಗಿ ಒತ್ತಾಯ ಮಾಡಿದರು.
ನಿಲುಗಡೆ ಅಗತ್ಯ: ಆನೇಕಲ್ ಮಾರ್ಗ ಸಂಚರಿಸುವ ಎಲ್ಲ ರೈಲುಗಳೂ ಕನಿಷ್ಠ 1 ನಿಮಿಷ ನಿಲುಗಡೆಯಾಗಬೇಕು. ಎರಡೂ ಬದಿ ಹಳಿ ದಾಟಲು ಸ್ಕೈ ವಾಕ್ ಬೇಕು. ಕುಡಿಯುವ ನೀರು, ಶೌಚಾಲಯ, ಕನಿಷ್ಠ ಅಗತ್ಯ ನೀಗಲು ಒಂದು ಅಂಗಡಿ, ಪರಸ್ಥಳಗಳಿಗೆ ಟಿಕೆಟ್ ಕಾಯ್ದಿರಿಸಲು ರಿಸರ್ವೇಷನ್ ಕೌಂಟರ್ ಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು. ಕಾಂಗ್ರೆಸ್ ಮುಖಂಡರಾದ ಗೋಪಾಲ್, ಸೋಮಶೇಖರರೆಡ್ಡಿ, ಪುರಸಭಾ ಸದಸ್ಯರಾದ ಅರ್ಜುನ್, ಹೇಮಲತಾ ಸುರೇಶ್ ಅವರು ರೇಲ್ವೆ ಸ್ಟೇಷನ್ ರಸ್ತೆ ಅಗಲೀಕರಣ, ಬೀದಿ ದೀಪ, ಹತ್ತಾರು ರೈಲುಗಳು ದಿನಿನಿತ್ಯ ಸಂಚರಿಸುವುದರಿಂದ ಆನೇಕಲ್-ಅತ್ತಿಬೆಲೆ ರೈಲ್ ಜಂಕ್ಷನ್ ರಸ್ತೆ ಬಳಿ ಮೇಲ್ಸೇತುವೆ ನಿರ್ಮಾಣವಾಗಬೇಕು. ರೈಲ್ವೆ ಸ್ಟೇಷನ್ ರಸ್ತೆ ಕನಿಷ್ಠ 9 ಮೀಟರ್ ಅಗಲ ವಿಸ್ತರಿಸಬೇಕೆಂಬ ಬೇಡಿಕೆಗಳನ್ನು ಹೊತ್ತ ಮನವಿಯನ್ನು ನೀಡಿದರು.
ಕೇಂದ್ರೀಯ ರೇಲ್ವೆ ಪ್ರಯಾಣಿಕರ ಮೂಲಭೂತ ಸೌಕರ್ಯ ನಿರ್ವಹಣಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮನವಿ ಸ್ವೀಕರಿಸಿ ಮಾತನಾಡಿ ಆನೇಕಲ್ ಬಳಿ ಮೂಲಭೂತ ಸೌಕರ್ಯಕ್ಕಾಗಿ ಹಲವಾರು ಮನವಿಗಳು ಬಂದಿದ್ದವು. ಸ್ಥಳ ಪರಿಶೀಲನೆ ಮಾಡಿ ಸದ್ಯದಲ್ಲೇ ನಿವಾರಿಸಬಹುದಾದ ಸಮಸ್ಯೆಗಳನ್ನು ಆದತ್ಯೆ ಆಧಾರದಲ್ಲಿ ನಡೆಸಲು ಸೂಚನೆ ನೀಡಲಾಗಿದೆ. ಕೆಲ ಅನುಕೂಲತೆಗಳ ಬಗ್ಗೆ ರೇಲ್ವೆ ಮಂಡಳಿಯಲ್ಲಿ ಪ್ರಸ್ಥಾವನೆ ಮಾಡಬೇಕಿದೆ. ಆನೇಕಲ್ ಜನತೆಯ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.