ಶಾಶ್ವತ ನೀರಾವರಿಗಾಗಿ ಬೈಕ್ ರ್ಯಾಲಿ
ದೊಡ್ಡಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆಗೆ ಜಾರಿಗೆ ಒತ್ತಾಯಿಸಿ ಇಲ್ಲಿನ ದೊಡ್ಡಬಳ್ಳಾಪುರ ನಗರ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಬೈಕ್ ರ್ಯಾಲಿ ನಡೆಸಲಾಯಿತು.
ನೆಲದಾಂಜನೇಯಸ್ವಾಮಿ ದೇವಾಲಯ ಮುಂಭಾಗದಿಂದ ಹೊರಟ ರ್ಯಾಲಿ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿತು. ನಂತರ ಕನಸವಾಡಿಯಲ್ಲಿ ನಡೆದ ತಾಲೂಕು ಮಟ್ಟದ ಸಮಾವೇಶಕ್ಕೆ ನೂರಾರು ಕಾರ್ಯಕರ್ತರು ಬೈಕ್‌ಗಳಲ್ಲಿ ತೆರಳಿ ಬೆಂಬಲ ಘೋಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಸರ್ಕಾರ ಯಾವುದೇ ನೆಪ ಹೇಳದೆ ಶಾಶ್ವತ ನೀರಾವರಿ ಜಾರಿಗೆ ಆದ್ಯತೆ ನೀಡಬೇಕು. ತಪ್ಪಿದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯಬೇಕಾದೀತು ಎಂದು ಎಚ್ಚರಿಸಿದರು.
ವಿವಿಧ ಕನ್ನಡಪರ, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ಭಾಗವಹಿಸಿದ್ದರು.