ಸರಳ, ಸಜ್ಜನ ಕವಿ ಜಿ.ಎಸ್. ಶಿವರುದ್ರಪ್ಪ
ಚನ್ನಪಟ್ಟಣ: ಸರಳ ಹಾಗೂ ಜನರ ಹೃದಯಕ್ಕೆ ಹತ್ತಿರವಾದ ಭಾಷೆಯ ಮೂಲಕ ಸಾಹಿತ್ಯವನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡಿದವರು ಮೊದಲ ಕವಿ ಎಂದರೆ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಎಂದು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಬಿ.ಟಿ.ನಾಗೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಭಾವಪೂರ್ಣಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಧುಸೂಧನ್ ಆಚಾರ್ಯ ಜೋಷಿ ಮಾತನಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಪರಂಪರೆ ನಾಡಿಗೆ ಸಂಸ್ಕೃತಿಯನ್ನು ಕೊಟ್ಟ ಕೀರ್ತಿ ಜಿ.ಎಸ್.ಎಸ್ ಅವರಿಗೆ ಸಲ್ಲಬೇಕು.
ಡಾ. ಜಿ.ಎಸ್.ಎಸ್ ಅವರು ನೋವನ್ನು ಕವಿತೆಯನ್ನಾಗಿಸಿದ ಪ್ರತಿಭಾವಂತ ಸಾಹಿತ್ಯ ಅವರ ಜೀವನದ ಒಂದು ಭಾಗವಾಗಿತ್ತು. ಆರೋಗ್ಯ ಪೂರ್ಣ ಚರ್ಚೆಗೆ ಆದ್ಯತೆ ನೀಡಿ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವದವರಾಗಿದ್ದವರು. ಅವರ ನಿಧನದಿಂದ ತುಂಬಲಾರದ ದೊಡ್ಡ ನಷ್ಟವಾಗಿದೆ ಎಂದು ತಿಳಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಸರಳತೆ ಹಾಗೂ ಮೃದು ಸ್ವಭಾವದ ಜಿ.ಎಸ್.ಎಸ್. ಅವರು ನಾಡಿನ ಸಮನ್ವಯ ಕವಿಗಳಲ್ಲಿ ಒಬ್ಬರಾಗಿದ್ದರು ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿಕಟ ಪೂರ್ವ ಮಾಜಿ ಕ.ಸಾ.ಪ ಅಧ್ಯಕ್ಷ ಸು.ತ.ರಾಮೇಗೌಡ ಮಾತನಾಡಿ ಕನ್ನಡ ಸಾರಸತ್ವ ಲೋಕ ಬಡವಾಗಿದೆ. ಅವರು ನಾಡು ಕಂಡ ಸಜ್ಜನ ಶ್ರೇಷ್ಠ ಸಾಹಿತಿಯಾಗಿದ್ದರು ಎಂದರು. ಪ್ರೊ.ಕೃಷ್ಣೇಗೌಡ, ಕ.ಸಾ.ಪ ಮಾಜಿ ಅಧ್ಯಕ್ಷ ಸಿಸಿರಾ, ಸಾಹಿತಿ ಎಲೇಕೇರಿ ಶಿವರಾಂ, ಎಂ.ಪಿ. ನಾಗರಾಜ್, ಶಾರದಾ ನಾಗೇಶ್, ಜಿ.ಎಸ್.ಎಸ್ ರಚಿಸಿದ ಕವಿತೆಗಳನ್ನು ಹಾಡಿದರು. ಸಾಹಿತಿ ಚಲುವರಾಜು, ತೋಟದ ಮನೆ ಕೃಷ್ಣೇಗೌಡ, ಶಿಕ್ಷಕ ಗೋಪಾಲ್, ಚೌ.ಪು.ಸ್ವಾಮಿ, ಮಣಿಯಮ್ಮ, ಜನಪರ ವೇದಿಕೆಯ ಬೇವೂರು ಯೋಗೇಶ್, ಶ್ರೀನಿವಾಸ್, ರಾಜಶೇಖರ್, ಪ್ರವೀಣ್, ಡಿ.ಪುಟ್ಟಸ್ವಾಮಿಗೌಡ ಮುಂತಾದವರು ಉಪಸ್ಥಿತರಿದ್ದರು.