ಸುದ್ದಿ ಸಂಕ್ಷೇಪ
ಮಾನವ ಹಕ್ಕುಗಳ ಉಲ್ಲಂಘನೆಯಾಗದಿರಲಿ
ಸೂಲಿಬೆಲೆ: ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಪ್ರತಿಯೊಬ್ಬ ಅಧಿಕಾರಿ ಎಚ್ಚರವಹಿಸಿ ಕೆಲಸ ನಿರ್ವಹಿಸಬೇಕಿದೆ. ವಿದ್ಯಾರ್ಥಿಗಳು ಕಾನೂನು ಅರಿವು ಅರಿತು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಪ್ರಭಾರ ಪ್ರಧಾನ ಸಿವಿಲ್ ನ್ಯಾಯಾದೀಶೆ ಎಚ್.ವಿ ಅನಿತಾ ಅಭಿಪ್ರಾಯಪಟ್ಟರು. ಹೊಸಕೋಟೆ ತಾ.ಜಡಿಗೇನಹಳ್ಳಿ ಗ್ರಾಮದಲ್ಲಿರುವ ಕಿತ್ತೂರರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯ ಹಾಗೂ ವಕೀಲರ ಸಂಘದ ವತಿಯಿಂದ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಹಾಗೂ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ.ವಿ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಳ್ಳುಬೇಕು. ತಮ್ಮ ಹಕ್ಕುಗಳಿಗೆ ಚ್ಯುತಿ ಬಂದರೆ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ ನ್ಯಾಯಪಡೆಯಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ವಕೀಲ ಹರೀಂದ್ರ ಹಾಗೂ ಮುನಿರಾಜು ಮಾತನಾಡಿ, ಮಾನವ ಹಕ್ಕುಗಳ ಉಪಯುಕ್ತತೆ ಹಾಗೂ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೆಂಕಟಗಿರಿ ಅವರು ಹಾಸ್ಯದ ಮೂಲಕವೇ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆ ನೀಡಿದರು. 2009 ರಿಂದ ನಿಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಮೂಲಭೂತ ಸಮಸ್ಯೆಗಳು ಉಂಟಾಗದಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಾದ ಡಾ. ಎಚ್. ನಟರಾಜ್ ಅಗತ್ಯ ಕ್ರಮ ಕೈಗೊಂಡು ನಿಲಯದಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಮಾನವ ಹಕ್ಕುಗಳ ರಕ್ಷಣಿ ಬಗ್ಗೆ ನಿಲಯದ ಎಲ್ಲ ಸಿಬ್ಬಂದಿಗಳಲ್ಲಿ ಕಾಳಜಿಯಿದೆ ಎಂದು ಹಿರಿಯ ಶಿಕ್ಷಕ ವೆಂಕಟೇಶ್ ತಿಳಿಸಿದರು. ಕಾನೂನು ಹಾಗೂ ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಪರಿಹಾರವನ್ನು ಕಂಡುಕೊಂಡರು. ವಕೀಲರು ಹಾಗೂ ನಿಲಯದ ಅಧ್ಯಾಪಕ ವರ್ಗದವರು, ಸಿಬ್ಬಂದಿ ಪಾಲ್ದೊಂಡಿದ್ದರು.
ಸಮವಸ್ತ್ರ ವಿತರಣೆ
ಸೂಲಿಬೆಲೆ: ಇಲ್ಲಿಗೆ ಸಮೀಪದ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ವಿ ಸತೀಶ್‌ಗೌಡ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕಲಿಕೆಯತ್ತ ಹೆಚ್ಚು ಆಸಕ್ತಿ ವಹಿಸಬೇಕು. ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸುವಲ್ಲಿ ಪೋಷಕರು ಹೆಚ್ಚು ಕಾಳಜಿವಹಿಸಬೇಕು ಎಂದು ಹೇಳಿದರು. ತಾಪಂ ಸದಸ್ಯೆ ಮಂಜುಳಾ ಡಿ.ಟಿ ವೆಂಕಟೇಶ್ ಮಾತನಾಡಿದರು. ಮುಖ್ಯ ಶಿಕ್ಷಕಿ ಸಮೀನಾ, ದೈಹಿಕ ಶಿಕ್ಷಕ ರಾಘವನ್ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ಶಿಕ್ಷಕರು, ಪೋಷಕ ವರ್ಗದವರು ಹಾಜರಿದ್ದರು.