ಹೊಸಕೋಟೆ ತಂಡ ಪ್ರಥಮ
ಹೊಸಕೋಟೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೊಸಕೋಟೆ ಯೂತ್ ಕ್ರಿಕೆಟ್ ಕ್ಲಬ್ ಪ್ರಥಮ ಸ್ಥಾನ ಗಳಿಸಿದೆ. ಪಟ್ಟಣದ ಅಂಬೇಡ್ಕರ್ ಕ್ರಿಕೆಟ್ ಕ್ಲಬ್ ದ್ವಿತೀಯ, ಧರ್ಮರಾಯಸ್ವಾಮಿ ಕ್ರಿಕೆಟ್ ಕ್ಲಬ್ ತೃತೀಯ ಸ್ಥಾನ ಪಡೆದುಕೊಂಡಿದೆ. ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಯುವಕರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲು ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸುವಂತಹ ಕ್ರೀಡಾ ಸ್ಫೂರ್ತಿ ಬೆಳೆಯಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ. ದೇಶದಲ್ಲಿ ಕ್ರಿಕೆಟ್ ಬಗ್ಗೆ ಯುವಕರು ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಕಾರಣದಿಂದಾಗಿ ಈ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಸಿ. ಮುನಿಯಪ್ಪ ಪ್ರಧಾನ ಕಾರ್ಯದರ್ಶಿ ಆರ್. ಮುನಿನಂಜಪ್ಪ, ಟೌನ್ ಯುವ ಮೋರ್ಚಾಧ್ಯಕ್ಷ ಬಿ.ವಿ. ಬೈರೇಗೌಡ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಎಸ್.ನಾಗರಾಜ್ ಮತ್ತಿತರರಿದ್ದರು.