ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಬೆಸ್ಕಾಂಗೆ ಮುತ್ತಿಗೆ
ಕ.ಪ್ರ.ವಾರ್ತೆ ಕನಕಪುರ ಡಿ.26
ಅಸಮರ್ಪಕ ವಿದ್ಯುತ್ ಪೂರೈಕೆ ಪ್ರತಿಭಟಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕನಕಪುರದ ಬೆಸ್ಕಾಂ ಕಚೇರಿಗೆ ಮುತ್ತಿಗೆ ನಡೆಯಿತು.
ಜಯಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ರೈತಸಂಘದ ಸಂಪತ್ ನೇತೃತ್ವದಲ್ಲಿ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಇಲ್ಲಿನ ಸಂಗಮ ರಸ್ತೆಯ ಬೆಸ್ಕಾಂ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕಚೇರಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗುತ್ತಾ ಸಮಸ್ಯೆಯನ್ನು ಪರಿಹರಿಸಲು ಆಗ್ರಹಿಸಿದರು.
ಮುಖಂಡ ಕುಮಾರಸ್ವಾಮಿ ಮಾತನಾಡಿ, ನಿರಂತರ ವಿದ್ಯುತ್ ಯೋಜನೆಗೆ ಸೇರಿರುವ ಕನಕಪುರ ತಾಲೂಕಿನಲ್ಲಿಯೂ ನಿರಂತರವಾಗಿ ವಿದ್ಯುತ್ ದೊರೆಯದಿರುವುದು ವಿಪರ್ಯಾಸವಾಗಿದೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ವಿದ್ಯುತ್ ಕಡಿತಗೊಳಿಸಿ ಬೆಸ್ಕಾಂ ರೈತರ ಬದುಕಿನೊಂದಿಗೆ ಆಟವಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ದಿನವಿಡೀ ವಿದ್ಯುತ್ ಇರುವುದಿಲ್ಲ. ನಡುರಾತ್ರಿ ಬರುವ ವಿದ್ಯುತ್ ನಂಬಿ ರೈತರು ವ್ಯವಸಾಯ ಮಾಡಲಾಗದ ಪರಿಸ್ಥಿತಿ ಎದುರಾಗಿದೆ ಎಂದು ಟೀಕಿಸಿದರು.
ಸಂಪತ್ ಮಾತನಾಡುತ್ತಾ, ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ತಾಲೂಕಿನಲ್ಲಿ ಕೃಷಿ ಉತ್ಪಾದನೆಯೇ ಕುಂಠಿತಗೊಂಡಿದೆ. ಬರದಲ್ಲಿ ನರಳುತ್ತಿರುವ ರೈತರಿಗೆ ಬೆಸ್ಕಾಂ ವಿದ್ಯುತ್ ನೀಡದೆ ಬರೆ ಎಳೆಯುತ್ತಿದೆ. ವಿದ್ಯಾರ್ಥಿಗಳು ವ್ಯಾಸಂಗ ಮಾಡಲಾಗುತ್ತಿಲ್ಲ. ಕುಡಿಯುವ ನೀರಿನ ಸರಬರಾಜಿಗೂ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತಮುಖಂಡರಾದ ನಾರಾಯಣಸ್ವಾಮಿ, ದುಂಡಯ್ಯ, ಮುನಿರಾಜು, ಅನಂತ ಪ್ರಸಾದ್, ಸುರೇಶ್, ಶ್ರೀನಿವಾಸ್ ಪಾಲ್ಗೊಂಡಿದ್ದರು.