ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಘಾಟಿ ಸುಬ್ರಹ್ಮಣ್ಯದಲ್ಲಿ ದನಗಳ ಜಾತ್ರೆ ಇಲ್ಲ

Rashmi Kasaragodu
Updated On : 27 Dec 2013, 2:10 am

ದೊಡ್ಡಬಳ್ಳಾಪುರ: ತಾಲೂಕಿನ ಸುಪ್ರಸಿದ್ಧ ಯಾತ್ರಾಸ್ಥಳವಾಗಿರುವ ಘಾಟಿ ಸುಬ್ರಹ್ಮಣ್ಯದಲ್ಲಿ ಪ್ರತಿವರ್ಷ ನಡೆಯುವ ರಾಜ್ಯದ ಹೆಸರಾಂತ ದನಗಳ ಜಾತ್ರೆ ಈ ಬಾರಿ ನಡೆಯುತ್ತಿಲ್ಲ. ಕಾಲುಬಾಯಿ ರೋಗಭೀತಿ ಹಿನ್ನಲೆಯಲ್ಲಿ ಜಾತ್ರೆ ನಡೆಸದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಆದರೂ ಹತ್ತಾರು ರೈತರು ಎಂದಿನಂತೆ ದನಗಳ ಜಾತ್ರೆಗೆ ಸಜ್ಜಾಗಿದ್ದರು. ದೂರದೂರುಗಳಿಂದ ಬಂದು ಘಾಟಿಯ ಸುತ್ತಮುತ್ತ ಪೆಂಡಾಲ್ಗಳನ್ನು ನಿರ್ಮಿಸಿಕೊಂಡು ದನಗಳ ಮಾರಾಟ, ಕೊಳ್ಳುವಿಕೆಯಲ್ಲಿ ತೊಡಗಿದ್ದರು. ಸರ್ಕಾರದ ಆದೇಶವನ್ನೂ ಮೀರಿ ದನಗಳ ಜಾತ್ರೆ ಅನಧಿಕೃತವಾಗಿ ಆರಂಭವಾಗಿಯೇ ಬಿಟ್ಟಿತ್ತು. ಇದನ್ನು ಗಮನಿಸಿದ ಸರ್ಕಾರ ಜಾತ್ರೆಗೆ ಮತ್ತೆ ಕಡಿವಾಣ ಹಾಕಿ ರೈತರ ಮನವೊಲಿಸಿದೆ.
ಗುರುವಾರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ್, ದನಗಳನ್ನು ತಂದು ಬಿಡಾರ ಹೂಡಿದ್ದ ರೈತರೊಂದಿಗೆ ಮಾತುಕತೆ ನಡೆಸಿದರು. ಕಾಲುಬಾಯಿ ಜ್ವರ ಮತ್ತು ಇತರ ಸಾಂಕ್ರಾಮಿಕ ರೋಗಗಳ ಭೀತಿಯ ಬಗ್ಗೆ ವಿವರಿಸಿದರು. ಸರ್ಕಾರದ ನಿಲುವು ಸ್ಪಷ್ಟಪಡಿಸಿ, ಸಹಕರಿಸುವಂತೆ ಕೋರಿದರು. ತದನಂತರ ನೆರೆದಿದ್ದ ಹತ್ತಾರು ರೈತರು ತಮ್ಮ ಎತ್ತು-ದನಗಳನ್ನು ಕರೆದುಕೊಂಡು ಈ ಬಾರಿ ಘಾಟಿ ಜಾತ್ರೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ತಮ್ಮು ಊರುಗಳತ್ತ ಹಿಂತಿರುಗಿದರು.
ದನಗಳನ್ನು ತರಬೇಡಿ: ಇದೇ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿಗಳು ಈ ಬಾರಿ ಜಾತ್ರೆಯನ್ನು  ತಾತ್ಕಾಲಿಕವಾಗಿ ಮುಂದೂಡಲಾಗಿದೆ. ರೈತರು ಸಹಕರಿಸಿ. ದೂರದೂರುಗಳಿಂದ ದನಕರುಗಳನ್ನು ತರಬೇಡಿ. ಸರ್ಕಾರ ಯಾವುದೇ ರೀತಿಯಲ್ಲೂ ಜಾತ್ರೆಯ ವ್ಯವಸ್ಥೆ ಮಾಡಿಲ್ಲ ಎಂದರು.
ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ದೇವಾಲಯದ ವತಿಯಿಂದ ಈ ಬಗ್ಗೆ ನಿರ್ದಿಷ್ಟ ಪ್ರಕಟಣೆಯನ್ನೂ ಕೂಡ ಪ್ರಕಟಿಸಲಾಗಿದ್ದು, ಘಾಟಿಗೆ ಬರುವ ಮಾರ್ಗಗಳಲ್ಲಿ ಪ್ರದರ್ಶಿಸಲಾಗಿದೆ.
ಕಾಲುಬಾಯಿ ರೋಗ ಪರಿಣಾಮ ಬೆಂ.ಗ್ರಾ.ಜಿಲ್ಲಾಧಿಕಾರಿಗಳ ಆದೇಶದಂತೆ ಈ ಬಾರಿ ದನಗಳ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ.
ಸಹಕಾರ ನೀಡಿ ಎಂಬ ಫಲಕಗಳು ಎಲ್ಲೆಡೆ ಕಾಣುತ್ತಿವೆ. ಉಪವಿಭಾಗಾಧಿಕಾರಿ ಭೇಟಿ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮುಖಂಡರು, ದೇವಾಲಯದ ಅಧಿಕಾರಿ ವರ್ಗ ಸೇರಿದಂತೆ ಸ್ಥಳೀಯ ರೈತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement