ಡಾ.ಜಿ.ಎಸ್.ಶಿವರುದ್ರಪ್ಪಗೆ ನುಡಿನಮನ
ದೊಡ್ಡಬಳ್ಳಾಪುರ: ಸಹಕಾರಿಗಳ ಕಲಾಕೂಟ ಹಾಗೂ ನಿಸರ್ಗ ಸಾಂಸ್ಕೃತಿಕ ವೇದಿಕೆ ಕನಕಪುರ ವತಿಯಿಂದ ಅಗಲಿದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರಿಗೆ ನುಡಿನಮನ ಕಾರ್ಯಕ್ರಮ ಇಲ್ಲಿನ ನಾಡೋಜ ಡಾ.ರಾಜ್ ಬಯಲು ರಂಗಮಂದಿರದಲ್ಲಿ ನಡೆಯಿತು. ವೈದ್ಯ ಡಾ.ಟಿ.ಎನ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗಾಯಕರಾದ ಹೊಳಸಾಲಯ್ಯ, ಚಂದ್ರಾಜ ಹಾಗೂ ಶ್ರೀದೇವಿ ತಂಡದವರು ಗಾಯನದ ಮೂಲಕ ಭಾವನಮನ ಸಲ್ಲಿಸಿದರು. ವಚನ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಜಾನಪದ ಗಾಯಕ ಚಿಕ್ಕಮರಿಗೌಡ ಅಗಲಿದ ಕವಿಗೆ ನುಡಿನಮನ ಸಲ್ಲಿಸಿದರು. ಪತ್ರಕರ್ತ ಸತೀಶ್ ಮಾತನಾಡಿ ಕನ್ನಡ ಸಾಹಿತ್ಯದ ಸಾಂಸ್ಕೃತಿಕ ನಾಯಕ, ಕನ್ನಡದ ಕಟ್ಟಾಳು, ಕವಿ, ವಿಮರ್ಶಕ ಡಾ.ಜಿಎಸ್ಎಸ್ ಸಾಮಾಜಿಕ ಜೀವನದಲ್ಲಿ ಪ್ರೀತಿ ಸೌಹಾರ್ದತೆಗಳನ್ನು ಪ್ರತಿಪಾದಿಸಿದವರಾರಿದ್ದರು. ನವ್ಯ ನವೋದಯಗಳ ನಡುವೆ, ಗದ್ಯಪದ್ಯಗಳ ಜೊತೆಗೆ ಸಮನ್ವಯ ಸಾಧಿಸಿದ ಕವಿಯಾಗಿದ್ದರು. ಸಾಮಾಜಿಕ ಸಾಂಸ್ಕೃತಿಕ ಚಲನಶೀಲತೆಯನ್ನು ಮೈಗೂಡಿಸಿಕೊಂಡ ವೈಚಾರಿಕ ವೈಜ್ಞಾನಿಕ ಪ್ರಜ್ಞೆಯ ಕವಿಗಳಾಗಿ ಭಾವಗೀತೆಗಳ ಮೂಲಕ ನಾಡಿನ ಜನಮಾನಸದಲ್ಲಿ ನೆಲೆನಿಂತವರಾಗಿದ್ದರು. ಅವರ ಮನಸು, ಕನಸುಗಳು ಇಂದಿಗೂ ಕಾವ್ಯದ ಮೂಲಕ ನೆಲೆನಿಂತಿವೆ ಎಂದು ಹೇಳಿದರು. ಸಂಚಾಲಕ ಜಗದೀಶ್ವರಾಚಾರ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಿ.ರವೀಂದ್ರ ನಿರೂಪಿಸಿ ವಂದಿಸಿದರು.