ಶಾಶ್ವತ ನೀರಾವರಿ ಯೋಜನೆಗೆ ಈಗ ಕಾಲ ಪಕ್ವ
ಕನ್ನಡಪ್ರಭ ವಾರ್ತೆ ಮಾಗಡಿ ಡಿ.26
ಶಾಶ್ವತ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಕಾರತ್ಮಕವಾಗಿ ಸ್ಪಂದಿಸುತ್ತಿದೆ. ಯೋಜನೆ ಅನುಷ್ಠಾನಕ್ಕೆ ಈಗ ಕಾಲ ಪಕ್ವವಾಗಿದೆ. ಆದರೂ ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದು ಸಂಸದ ಡಿ.ಕೆ. ಸುರೇಶ್ ವಿರೋಧಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ತಿರಗೇಟು ನೀಡಿದರು.
ಅವರು ಮಾದಿಗೊಂಡನಹಳ್ಳಿ, ನಾರಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಸಂಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಿಲ್ಲೆಗೆ ಹೇಮಾವತಿಯೂ ಬರುವುದಿಲ್ಲ, ಎತ್ತಿನಹೊಳೆಯೂ ಹರಿಯುವುದಿಲ್ಲ, ಕೋಟಿ ಕೋಟಿ ಹಣ ಎತ್ತಿನ ಹೊಳೆಯಲ್ಲಿ ಹರಿದು ಹೋಗುತ್ತಿದೆ ಎಂದು ವಿರೋಧಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಎಲ್ಲದಕ್ಕೂ ಕಾಲ ಕೂಡಿ ಬರಬೇಕಿದೆ ಎಂದರಲ್ಲದೆ ಈಗಾಗಲೇ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ರೈತರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಚುನಾವಣೆ ವೇಳೆ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಅಗತ್ಯ ಕೊಳವೆ ಬಾವಿ: ಈಗಾಗಲೇ ಕ್ಷೇತ್ರದ್ಯಾದಂತ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ತಾತ್ಕಾಲಿಕವಾಗಿ ನೀರಿನ ಸಮಸ್ಯೆ ಸುಧಾರಣೆಗೆ ಅಗತ್ಯ ಕೊಳವೆ ಬಾವಿ ಕೊರೆಸಲು ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಆದೇಶ ನೀಡಲಾಗಿದೆ. ಇನ್ನು 5 ತಿಂಗಳು ನೀರಿನ ಪೂರೈಕೆಯಲ್ಲಿ ಹೆಚ್ಚು ಸಮಸ್ಯೆ ಉದ್ಭವವಾಗದಂತೆ ಸುಧಾರಣೆಗೆ ಸರ್ಕಾರ ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಎಂದರು.
ಪಟ್ಟಣದಲ್ಲಿ ಡಿ.ಕೆ.ಸಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಏಳು ಕಡೆ ಶುದ್ಧ ಕುಡಿಯು ನೀರಿನ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಸ್ಥಳದ ಕೊರತೆಯಿದ್ದು, ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಜತೆಗೆ ಗ್ರಾಮೀಣ ಪ್ರದೇಶಗಳಿಗೂ ಘಟಕಗಳ ವಿಸ್ತರಣೆಗೆ ಚಿಂತಿಸಲಾಗಿದೆ ಎಂದರು.
ಲೋಕಾಯುಕ್ತದಲ್ಲಿದೆ: 600 ಕೋಟಿ ಹಗರಣದ ಪ್ರಕರಣ ಲೋಕಾಯುಕ್ತದಲ್ಲಿದೆ. ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿರುವ 600 ಕೋಟಿ ಹಗರಣದ ಪ್ರಕರಣವೀಗ ಲೋಕಾಯುಕ್ತ ಕೋರ್ಟಿನಲ್ಲಿದೆ. ಕೆಪಿಸಿಸಿ ಸದಸ್ಯ ಎ.ಮಂಜು ಅವರ ನೇತೃತ್ವದ ಹೋರಾಟ ಫಲದಿಂದಾಗಿ ಹಗರಣ ಬಯಲಾಯಿತು. ಎಂದರು.
ನರೇಗ ವಿಫಲಕ್ಕೆ ನಿರ್ಲಕ್ಷ್ಯವೇ ಕಾರಣ: ಕೇಂದ್ರ ಸರ್ಕಾರದ ಮಹತ್ವಾಯ ಯೋಜನೆಯಲ್ಲಿ ಒಂದಾದ ನರೇಗ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಕುಗ್ರಾಮಗಳು ಅಭಿವೃದ್ಧಿ ಹೊಂದಿದ ಸುವರ್ಣಗ್ರಾಮಗಳಾಗಿ ಪರಿವರ್ತಿನೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನರೇಗ ಯೋಜನೆಗಳು ಹೇಳಿಕೊಳ್ಳುವ ರೀತಿಯಲ್ಲಿ ಅನುಷ್ಠಾನಗೊಳ್ಳದೆ ವಿಫಲವಾಗುತ್ತಿವೆ. ನರೇಗ ಯೋಜನೆ ಅನುಷ್ಠಾನಕ್ಕಾಗಿ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಬೇಕು. ಯೋಜನೆ ಕುರಿತು ಮನವರಿಕೆ ಮಾಡಬೇಕು. ವೈಯಕ್ತಿಕ ಹಾಗೂ ಸಾಮೂಹಿಕ ಫಲಾನುಭವಿಗಳಿಗೆ ಅಗತ್ಯ ಯೋಜನೆಗಳನ್ನು ನೀಡುವ ಮೂಲಕ ಅನುಷ್ಠಾನಕ್ಕೆ ತಾಕೀತು ಮಾಡಿದ್ದೇನೆ ಎಂದರು. ಕೆಪಿಸಿಸಿ ಸದಸ್ಯ ಎ.ಮಂಜು, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧಕ್ಷ ಎಚ್.ಎಂ. ಕೃಷ್ಣಮೂರ್ತಿ, ಚಿಗಳೂರು ಗಂಗಾಧರ್, ಬಿ.ಎಸ್.ಕುಮಾರ್, ಕಂಚೇಗೌಡ ಮಾದಿಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ನರಸಿಂಹಮೂರ್ತಿ, ಉಪಾಧ್ಯಕ್ಷ ಹನುಮೇಗೌಡ, ಕಂಚೇಗೌಡ, ಎಂ.ಸಿ. ವೆಂಕಟೇಶ್, ಪುರುಷೋತ್ತಮ್, ಶಶಾಂಕ್, ಪುರಸಭಾ ಸದಸ್ಯರಾದ ಎಂ.ಎನ್.ಮಂಜು, ಕೆ.ವಿ.ಬಾಲು, ಸೇವಾ ದಳದ ಮಾಜಿ ಅಧ್ಯಕ್ಷ ಎಂ.ಎಚ್. ನಾಗರಾಜು, ರಾಜಣ್ಣ ಇತರರು ಇದ್ದರು.