ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹುಲಿಕುಂಟೆಯಲ್ಲಿ ರಂಗನಾಥನ ಕೋಲುಬೇಟೆ

Rashmi Kasaragodu
Updated On : 27 Dec 2013, 2:12 am

ಕ.ಪ್ರ.ವಾರ್ತೆ   ದೊಡ್ಡಬಳ್ಳಾಪುರ  ಡಿ.26
ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಪ್ರತಿವರ್ಷ ನಡೆಯುವ ಶ್ರೀರಂಗನಾಥಸ್ವಾಮಿ ಕೋಲುಬೇಟೆ ಕಾರ್ಯಕ್ರಮ ಗುರುವಾರ ಸಂಜೆ ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ಈ ಸಾಂಕೇತಿಕ ಬೇಟೆಯಲ್ಲಿ ಪಾಲ್ಗೊಂಡಿದ್ದರು.
ತಮ್ಮ ನೆಚ್ಚಿನ ದೈವ ರಂಗನಾಥನ ಹೆಸರಿನಲ್ಲಿ ಕತ್ತಿ, ಕುಡುಗೋಲು, ದೊಣ್ಣೆಗಳನ್ನು ಹಿಡಿದು ಆರ್ಭಟಿಸುವ ಮೂಲಕ ಹೊಲಗದ್ದೆಗಳಿಗೆ ನುಗ್ಗಿ ಬೇಟೆಯ ಅನುಭವವನ್ನು ಕಂಡುಕೊಳ್ಳುವ ಮೂಲಕ ಸಾಂಕೇತಿಕ ಆಚರಣೆ ನಡೆಸಿದರು. ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಈ ಜನಪದ ಆಚರಣೆ ನಡೆಯುತ್ತದೆ. ಇದಕ್ಕೆ ಸುಮಾರು 6 ಶತಮಾನಗಳ ಇತಿಹಾಸ ಇದೆ ಎನ್ನುವುದು ಐತಿಹ್ಯ.
ಇತಿಹಾಸ: ಹುಲಿಕುಂಟೆಯ ರಂಗನಾಥಸ್ವಾಮಿ 3 ದೇವರ ಸಾಕಾರ ರೂಪ. ಮಾಗಡಿಯ ರಂಗನಾಥ, ಹಣಬೆಯ ರಂಗನಾಥ ಮತ್ತು ಹುಲಿಕುಂಟೆಯ ರಂಗನಾಥ ಇವನಲ್ಲಿ ಸಾಕಾರಗೊಂಡಿದ್ದಾರೆ. ಈ ರೀತಿಯಾಗಿ ಶಕ್ತಿ ಸಾಕಾರಗೊಂಡ ರಂಗನಾಥ ದುಷ್ಟಶಕ್ತಿಗಳ ದಮನಕ್ಕೆ, ಕ್ರೂರ ಮೃಗಗಳ ಬೇಟೆಗೆ ಹೊರಡುವ ಮತ್ತು ಜನಕ್ಕೆ ಕಂಟಕಪ್ರಾಯವಾಗಿರುವ ಶಕ್ತಿಗಳನ್ನು ಮೆಟ್ಟಿನಿಲ್ಲುವ ಗೂಡಾರ್ಥ ಕೋಲುಬೇಟೆಯದು. ಬಲಿ ಸಿಕ್ಕ ಜಾಗ ಮಂಟಪವಾಗುತ್ತದೆ. ಈಗಲೂ ಅಲ್ಲೊಂದು ಮಂಟಪ. ಹರಕೆ ಸಲ್ಲಿಕೆ, ಪೂಜೆ ಇತ್ಯಾದಿ ನಡೆಯುತ್ತದೆ.
ಬೆಳೆಗಳ ಕೊಯ್ಲು ಮುಗಿದು ಧಾನ್ಯಗಳನ್ನು ಮನೆಗೆ ತರುವ ಮೊದಲು ಹೊಲಗಳಲ್ಲಿ ಸಂಗ್ರಹಿಸಿಡುವ ಪದ್ಧತಿ ಇದೆ. ಹೀಗೆ ಇಟ್ಟ ಧಾನ್ಯಗಳನ್ನು ತಿನ್ನಲು ಬರುವ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುವ ಹಿಂದಿನ ಪದ್ಧತಿಯ ಹಿನ್ನೆಲೆಯಲ್ಲಿ ಈ ಬೇಟೆ ಆರಂಭ ಆಗಿರಬಹುದು ಎಂಬುದು ಇದರ ಇನ್ನೊಂದು ಅರ್ಥ. ಕುದುರೆ ಮೇಲೆ ಕುಳಿತ ಬೇಟೆ ರಂಗನಾಥಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪೂಜಿಸಿ ಊರಿನ ದಾಸಪ್ಪನವರು ಹೊತ್ತು ಬೇಟೆ ಕೂಡುವ ದಿನ್ನೆಗೆ ಕರೆದೊಯ್ಯುತ್ತಾರೆ. ಹುಲಿಕುಂಟೆ ಸುತ್ತಲಿನ ಹಳ್ಳಿಗಳ ಜನ ತಮ್ಮ ಹಿರಿಯರು ಬೇಟೆಗೆ ಬಳಸುತ್ತಿದ್ದ ಹಳೆಯ ಆಯುಧ, ಕೋಲುಗಳನ್ನು ಹಿಡಿದುಕೊಂಡು ಕಾಡುಗಳನ್ನು ತಿರುಗಿ ಸಾಂಕೇತಿಕವಾಗಿ ಬೇಟೆ ಆಡಿ ನಂತರ ದಿನ್ನೆ ಸ್ಥಳಕ್ಕೆ ಬಂದು ಸೇರುತ್ತಾರೆ.
ಅಲ್ಲಿ ನೆರೆದ ಜಾತ್ರೆಯಲ್ಲಿ ಮಕ್ಕಳಿಗೆ ತಿನಿಸು, ಆಟಿಕೆಗಳನ್ನು ಕೊಂಡು ಮನೆಗೆ ಹಿಂದಿರುಗುತ್ತಾರೆ. ಮರುದಿನ ಬೇಟೆ ಆಚರಣೆ ಮಾಡುವ ಗ್ರಾಮಗಳಲ್ಲಿ ಕೋಳಿ, ಕುರಿಗಳ ಮಾಂಸಾಹಾರದ ಊಟ  ಮಾಡುವ ಪದ್ಧತಿ ಇದೆ. ಕೋಲು ಬೇಟೆ ಆಚರಣೆ ದಿನ ಹಿದುಕಿದ ಅವರೆ ಕಾಳು ಸಾರು, ಮುದ್ದೆಯನ್ನು ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಬೇಟೆ ಅಂಗವಾಗಿ ಶ್ರೀಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜಾ ಕಾರ್ಯಕ್ರಮಗಳು ಜಾತ್ರೆ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗಭೂಮಿ ಚಟುವಟಿಕೆಗಳು ಏರ್ಪಾಟಾಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement