ಅಧಿಕಾರಿಗಳೇ ಜನಪರವಾಗಿ ಕೆಲಸ ಮಾಡಿ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಡಿ.27
ಅಧಿಕಾರಿಗಳೇ ಜನಪರವಾಗಿ ಕೆಲಸ ಮಾಡಿ. ಸರ್ಕಾರಿ ಇಲಾಖೆಗಳಿಗೆ ಬರುವ ಜನರ ಸಂಕಷ್ಟಗಳನ್ನು ಸಮಾಧಾನದಿಂದ ಆಲಿಸಿ. ಸೂಕ್ತ ಪರಿಹಾರೋಪಾಯ ಸೂಚಿಸಿ. ಜನಕ್ಕೆ ಆಗಬೇಕಿರುವ ಕೆಲಸವನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಮಾಡಿಕೊಡಿ - ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ಇಲ್ಲಿನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹೇಳಿದ ಕಿವಿಮಾತು ಇದು.
ಇಲ್ಲಿನ ಸರ್ಕಾರಿ ಪ.ಪೂ.ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಈ ಸಲಹೆ ನೀಡಿದರು.
ಬರುವ 10-15 ದಿನಗಳಲ್ಲಿ ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕಿನ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲು ಚಿಂತಿಸಲಾಗಿದೆ. ಈಗಾಗಲೇ ಸಭೆಗಳು ನಡೆಯಬೇಕಿತ್ತು. ಆದರೆ ಅವಕಾಶವಾಗಿಲ್ಲ. ಜನವರಿ 2ನೇ ವಾರದೊಳಗೆ ಶಾಸಕರೊಂದಿಗೆ ಕಚೇರಿಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಲಾಗುವುದು. ಅಧಿಕಾರಿಗಳು ಚುರುಕಾಗಬೇಕು. ಸರ್ಕಾರ ಮಾಡಿವ ಯೋಜನೆಗಳ ವಿಚಾರದಲ್ಲಿ ಜನಕ್ಕೆ ಸಿಕ್ಕಿದ್ದೇನು ಎಂಬ ಪ್ರಶ್ನೆಗೆ ಅಧಿಕಾರಿಗಳೇ ಉತ್ತರದಾಯಿಗಳು. ಸರ್ಕಾರಿ ಕಚೇರಿಗಳ ಸ್ಥಿತಿ ಸುಧಾರಿಸಬೇಕು. ಜನರ ಬವಣೆಗೆ ಸ್ಪಂದಿಸುವ ಕೆಲಸ ಆಗಬೇಕು ಎಂದರು.
ಕೆಲಸ ಆಗಿಲ್ಲ: ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಪಡಿತ ಚೀಟಿಗಳ ಸಮಗ್ರ ಸರ್ವೇ ಕಾರ್ಯ ನಿಯಮಿತ ಅವಧಿಯೊಳಗೆ ಮುಗಿಸುವಂತೆ ಗಡುವು ಕೊಟ್ಟಿದ್ದೆ. ಆದರೆ ಈಗ ಸರ್ವೇ ಕಾರ್ಯ ನಡೆಯದಿರುವ ಬಗ್ಗೆ ದೂರುಗಳು ಬರುತ್ತಿವೆ. ಗಡುವು ಮೀರಿಯೂ ಕೆಲಸ ನಡೆದಿಲ್ಲ ಎಂದರೆ ಸಮರ್ಥನೀಯವಲ್ಲ. ಈ ರೀತಿಯಾದ್ರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ವೈಯಕ್ತಿಕ ಹಿತಾಸಕ್ತಿಗಳನ್ನು ಕೈಬಿಟ್ಟು ಜನಹಿತ ಕಾಪಾಡಲು ಅಧಿಕಾರಿಗಳು ಮುಂದಾಗಲಿ ಎಂದರು.
ದೊಡ್ಡಬಳ್ಳಾಪುರಕ್ಕೆ ಅವಕಾಶ: ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಸಾಕಷ್ಟು ಸರ್ಕಾರಿ ಕಾರ್ಯಕ್ರಮಗಳು ಹೊಸಕೋಟೆ ಮತ್ತು ದೇವನಹಳ್ಳಿಯಲ್ಲೇ ನಡೆಯುತ್ತಿವೆ. ಹೀಗಾಗಿ ದೊಡ್ಡಬಳ್ಳಾಪುರಕ್ಕೆ ಬರಲೂ ಸಾಧ್ಯವಾಗಿಲ್ಲ. ಈ ಬಾರಿ ಪ್ರತಿಭಾ ಕಾರಂಜಿ ಜಿಲ್ಲಾ ಮಟ್ಟದ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲೇ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೆ. ಜಿಲ್ಲೆಯ 4 ತಾಲೂಕುಗಳಿಗೂ ಸರ್ಕಾರಿ ಕಾರ್ಯಕ್ರಮಗಳು ಸಮಾನವಾಗಿ ಹಂಚಿಕೆಯಾಗಬೇಕು ಎಂದರು.